ಗೋಶಾಲೆ ಆರಂಭಿಸುವುದು ಪಂಚವಾರ್ಷಿಯ ಯೋಜನೆಯೇ?: ಸರ್ಕಾರಕ್ಕೆ ಛಾಟಿ ಬೀಸಿದ ಹೈಕೋರ್ಟ್‌

*  ವಿಳಂಬಕ್ಕೆ ಕೋರ್ಟ್‌ ತರಾಟೆ, ಯಾವಾಗಿಂದ ಗೋಶಾಲೆ ಆರಂಭ ಅಂತ ತಿಳಿಸಿ
*  ರಾಜ್ಯದ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕೆಂದು ನ್ಯಾಯಾಲಯ ನೀಡಿರುವ ನಿರ್ದೇಶನ 
*  ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದ ಹೈಕೋರ್ಟ್‌ 
 

Karnataka High Court Slams to BJP Government grg

ಬೆಂಗಳೂರು(ಜೂ.08): ರಾಜ್ಯದಲ್ಲಿ ಗೋಶಾಲೆ ಆರಂಭಿಸಲು ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌, ಗೋಶಾಲೆ ಆರಂಭಿಸುವುದು ಪಂಚ ವಾರ್ಷಿಕ ಯೋಜನೆಯೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.

ರಾಜ್ಯದ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಈಗಾಗಲೇ ಇರುವ ಗೋಶಾಲೆಗಳಿಗೆ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ಇದು ಸಕಾಲ: ಹೈಕೋರ್ಟ್‌ ಕಿಡಿ

ರಾಜ್ಯದ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕೆಂದು ನ್ಯಾಯಾಲಯ ನೀಡಿರುವ ನಿರ್ದೇಶನ ಅನ್ವಯ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಸರ್ಕಾರಿ ವಕೀಲರು, ಬೆಂಗಳೂರಿನಲ್ಲಿ ಭೂಮಿ ವರ್ಗಾವಣೆ ವಿಚಾರದಲ್ಲಿ ಕೆಲವು ಸಮಸ್ಯೆಗಳಿವೆ. ಇದರಿಂದ ಬೆಂಗಳೂರು ಹೊರತುಪಡಿಸಿ ಉಳಿದ 29 ಜಿಲ್ಲೆಗಳಲ್ಲಿ ಗೋಶಾಲೆ ಆರಂಭಿಸಲಾಗುತ್ತಿದೆ. ಆ ಕುರಿತು ಈಗಾಗಲೇ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ನೀರಿನ ಸೌಲಭ್ಯ ಕಲ್ಪಿಸಲು ಹಲವೆಡೆ ಕೊಳವೆ ಬಾವಿ ಕೊರೆಸಲಾಗಿದ್ದು, ಶೆಡ್‌ ಸಹ ನಿರ್ಮಾಣ ಮಾಡಲಾಗುತ್ತಿದೆ. ಜುಲೈ 15ರ ವೇಳೆಗೆ 5 ಗೋಶಾಲೆ ಹಾಗೂ ಆಗಸ್ಟ್‌ 1ರ ವೇಳೆಗೆ ಮತ್ತೆ 10 ಗೋಶಾಲೆ ಆರಂಭವಾಗಲಿವೆ ಎಂದು ವಿವರಿಸಿದರು.

ಈ ವಿವರಣೆಯಿಂದ ಸಮಾಧಾನಗೊಳ್ಳದ ಮುಖ್ಯ ನ್ಯಾಯಮೂರ್ತಿಗಳು, ಇದು ಪಂಚ ವಾರ್ಷಿಕ ಯೋಜನೆಯೇ? ಗೋಶಾಲೆಗಳನ್ನು ಆರಂಭಿಸಿ ಎಂದು ನ್ಯಾಯಾಲಯ ಆದೇಶ ಮಾಡಿದೆ ವಿನಾ ಕೊಳವೆಬಾವಿ ಕೊರೆಸುವುದು ಮತ್ತಿತರ ವಿಚಾರದ ಬಗ್ಗೆ ಹೇಳಿಲ್ಲ. ಯಾವಾಗಿನಿಂದ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ ಎಂಬುದನ್ನು ತಿಳಿಸಿ. ಪ್ರತಿ ಜಿಲ್ಲೆಯಲ್ಲಿ ಒಂದು ಗೋಶಾಲೆ ಆರಂಭಿಸುತ್ತೀರಾ? ಅಲ್ಲಿ ಎಷ್ಟುಬೀಡಾಡಿ ದನಗಳು ಆಶ್ರಯ ಪಡೆಯಲಿವೆ? ಪ್ರತಿ ಗ್ರಾಮ ಮಟ್ಟದಲ್ಲಿ ಗೋಶಾಲೆ ಇರಬೇಕು. ಕನಿಷ್ಠ ಪಕ್ಷ ತಾಲೂಕು ಮಟ್ಟದಲ್ಲಿ ಇರಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಕೇಳಿದರು.

ಸರ್ಕಾರಿ ವಕೀಲರು ಉತ್ತರಿಸಿ, ಸರ್ಕಾರ ಗೋಶಾಲೆ ಆರಂಭಿಸುವುದರ ಜೊತೆಗೆ ಖಾಸಗಿಯವರು ಆರಂಭಿಸಿರುವ 197 ಗೋಶಾಲೆಗಳಿಗೆ ಹಣಕಾಸಿನ ಸಹಾಯ ಮಾಡುತ್ತಿದೆ ಎಂದು ವಿವರಿಸಿದರಲ್ಲದೆ, ಗೋಶಾಲೆ ಆರಂಭಿಸುವ ಸಂಬಂಧ ಸ್ಥಿತಿಗತಿ ವರದಿ ಸಿದ್ಧವಾಗಿದೆ. ಅದನ್ನು ಎರಡು ದಿನಗಳಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ವರದಿಯನ್ನು ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.

Latest Videos
Follow Us:
Download App:
  • android
  • ios