ಅಗತ್ಯ ಮತ್ತು ಸಕಾರಣವಿಲ್ಲದೆ ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯತೆಗೆ ಧಕ್ಕೆ ಆಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರು (ಸೆ.03): ಅಗತ್ಯ ಮತ್ತು ಸಕಾರಣವಿಲ್ಲದೆ ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯತೆಗೆ ಧಕ್ಕೆ ಆಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆಸ್ತಿ ಪಾಲುದಾರಿಕೆಯ ಪ್ರಕರಣವೊಂದರಲ್ಲಿ ಶಿವಮೊಗ್ಗದ 39 ವರ್ಷದ ಹರೀಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಗತ್ಯ ಮತ್ತು ಸಕಾರಣವಿಲ್ಲದೆ ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯತೆ, ದಂಪತಿಗಳ ಗೌಪ್ಯತೆ ಹಾಗೂ ಘನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಡಿಎನ್‌ಎ ಪರೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗುವ ಅರ್ಜಿಗಳಿಗೆ ಉತ್ತರಿಸುವಾಗ ವಿಚಾರಣಾ ನ್ಯಾಯಾಲಯಗಳು, ಭಾರತೀಯ ಸಾಕ್ಷ್ಯ ಕಾಯ್ದೆಯ-1872ರ ಸೆಕ್ಷನ್ 112ರಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸದ ಹೊರತು ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಬಾರದು ಎಂದು ಪೀಠ ಹೇಳಿದೆ.
ಅಲ್ಲದೆ, ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ಸಾಮಾನ್ಯ ಸಂದರ್ಭಗಳಲ್ಲಿ ಮಹಿಳೆಯ ಘನತೆಗೆ ಸಂಬಂಧಿಸಿದಂತೆ ಸೂಕ್ಷ್ಮ ಸಿದ್ಧಾಂತ ಒಳಗೊಂಡಿದೆ. ಮಗುವಿನ ತಂದೆ ತಾನೇ ಎಂಬುದು ಗೊತ್ತಿದ್ದರೂ ಕೆಲವೊಮ್ಮೆ ಪುರುಷ ನಿರಾಧಾರ ಆರೋಪ ಹೊರಿಸಿಬಿಡುತ್ತಾನೆ. ಮಹಿಳೆಯ ವ್ಯಕ್ತಿತ್ವವನ್ನು ನಾಶ ಮಾಡಿಬಿಡುತ್ತಾನೆ. ಈ ಹುಮ್ಮಸ್ಸಿನಲ್ಲಿ ಡಿಎನ್‌ಎ ಪರೀಕ್ಷೆಗೆ ಕೋರುತ್ತಾನೆ. ಆಗ ಮಹಿಳೆಯ ಘನತೆಗೆ ಪೆಟ್ಟು ಬಿದ್ದಂತಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಸಮನ್ಸ್ ಜಾರಿ ಆದೇಶ ರದ್ದುಗೊಳಿಸಿದ ಹೈಕೋರ್ಟ್: ಮಾದಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪ ಸಂಬಂಧ ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ದೂರನ್ನು ವಿಚಾರಣೆಗೆ ಅಂಗೀಕರಿಸಿ ಸಮನ್ಸ್ ಜಾರಿಗೊಳಿಸಿದ ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಪ್ರಕರಣ ರದ್ದುಪಡಿಸುವಂತೆ ಕೋರಿ ಬಿ.ಪಿ ಹರೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ ಅರುಣ್ ಅವರ ಪೀಠ, ಕೆಲ ತಾಂತ್ರಿಕ ಹಾಗೂ ಕಾನೂನನಾತ್ಮಕ ಪ್ರಕ್ರಿಯೆ ಪಾಲಿಸದ ಕಾರಣ ಜಿಲ್ಲಾ ನ್ಯಾಯಾಲಯದ ಆದೇಶ ರದ್ದುಪಡಿಸಲಾಗುತ್ತಿದೆ.
ಆದರೆ, ವಿವೇಚನೆ ಬಳಿಸಿ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವ ಬಗ್ಗೆ ಹೊಸದಾಗಿ ಕ್ರಮ ಕೈಗೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿತು. 2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಕೆಲ ಮುಖಂಡರು ಬಿ.ಪಿ. ಹರೀಶ್ ಅವರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು. ಈ ವೇಳೆ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಿದ್ದರೂ ದಲಿತರು ನಮಗೆ ಮತ ಹಾಕಿಲ್ಲ.‘ಅಪ್ಪನಿಗೆ ಹುಟ್ಟಿದ ಮಾದಿಗರು ಮಾತ್ರ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇದರ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಬಿ. ಹನುಮಂತಪ್ಪ ಹಾಗೂ ಇತರರು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಹಾಗೂ ಐಪಿಸಿ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಾಗಿತ್ತು. ಇದನ್ನು ವಿಚಾರಣೆಗೆ ಅಂಗೀಕರಿಸಿದ್ದ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬಿ.ಪಿ. ಹರೀಶ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.
