ಅಪರಾಧ ಪ್ರಕರಣದಲ್ಲಿ 20 ವರ್ಷಕ್ಕಿಂತ ಅಧಿಕ ಅವಧಿಗೆ ಜೈಲು ಶಿಕ್ಷೆ ವಿಧಿಸಿದ ಮಾತ್ರಕ್ಕೆ ಶಿಕ್ಷೆ ಕಡಿತಕ್ಕೆ ಅಪರಾಧಿ ಅರ್ಹನಾಗಿಲ್ಲ ಎಂದು ಹೇಳಲಾಗದು. ಕೈದಿ ಸನ್ನಡತೆ ತೋರಿದ್ದರೆ ಬಿಡುಗಡೆಗೆ ಅರ್ಹ ಆಗಿರುತ್ತಾರೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬೆಂಗಳೂರು (ಸೆ.02): ಅಪರಾಧ ಪ್ರಕರಣದಲ್ಲಿ 20 ವರ್ಷಕ್ಕಿಂತ ಅಧಿಕ ಅವಧಿಗೆ ಜೈಲು ಶಿಕ್ಷೆ ವಿಧಿಸಿದ ಮಾತ್ರಕ್ಕೆ ಶಿಕ್ಷೆ ಕಡಿತಕ್ಕೆ ಅಪರಾಧಿ ಅರ್ಹನಾಗಿಲ್ಲ ಎಂದು ಹೇಳಲಾಗದು. ಕೈದಿ ಸನ್ನಡತೆ ತೋರಿದ್ದರೆ ಬಿಡುಗಡೆಗೆ ಅರ್ಹ ಆಗಿರುತ್ತಾರೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಕೊಲೆ ಪ್ರಕರಣದಲ್ಲಿ 21 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ತನ್ನ ಪತಿ, ಅತ್ತೆ ಹಾಗೂ ಮೈದುನರ ಶಿಕ್ಷೆ ಕಡಿತಗೊಳಿಸಬೇಕೆಂಬ ಮನವಿ ತಿರಸ್ಕರಿಸಿದ್ದ ಜೈಲು ಅಧಿಕಾರಿಗಳ ಕ್ರಮ ಪ್ರಶ್ನಿಸಿ ದೀಪಾ ಅಂಗಡಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ ಸ್ಪಷ್ಟಪಡಿಸಿದೆ. ಅಲ್ಲದೆ, ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಅಪರಾಧಿಗೆ ಯಾವುದೇ ಕ್ಷಮಾದಾನ ನೀಡುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸದಿದ್ದರೆ ಶಿಕ್ಷಾವಧಿ ಕಡಿತಕ್ಕೆ, ಪೆರೋಲ್ ಪಡೆಯಲು ಅಥವಾ ಅವಧಿಪೂರ್ವ ಬಿಡುಗಡೆಗೆ ಸಜಾಬಂಧಿ ಅರ್ಹನಾತ್ತಾನೆ ಎಂದು ಪೀಠ ತಿಳಿಸಿದೆ.

ಪ್ರಕರಣದ ವಿವರ: ಕೊಲೆ ಪ್ರಕರಣದಲ್ಲಿ ಅರ್ಜಿದಾರೆಯ ಪತಿ ಸಿದ್ದಪ್ಪ, ಮೈದುನ ಸಿದ್ದಲಿಂಗಪ್ಪ ಮತ್ತು ಅತ್ತೆ ಮಲ್ಲವ್ವಗೆ ಅಧೀನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿದ್ದ ಹೈಕೋರ್ಟ್, ಶಿಕ್ಷಾವಧಿಯನ್ನು 21 ವರ್ಷಕ್ಕೆ ಕಡಿತಗೊಳಿಸಿತ್ತು. ಈಗಾಗಲೇ ಮೂವರು ಅಪರಾಧಿಗಳು 15 ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ್ದಾರೆ. ಇದರಿಂದ ಶಿಕ್ಷಾವಧಿ ಕಡಿತಕ್ಕೆ ದೀಪಾ ಅಂಗಡಿ ಮಾಡಿದ್ದ ಮನವಿಯನ್ನು ಬೆಳಗಾವಿ ಜೈಲಿನ ಮುಖ್ಯ ವರಿಷ್ಠಾಧಿಕಾರಿ ತಿರಸ್ಕರಿಸಿದ್ದರು.

ಈ ಕ್ರಮ ಪ್ರಶ್ನಿಸಿ ದೀಪಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಮೂವರು ಅಪರಾಧಿಗಳಿಗೆ ತಲಾ 21 ವರ್ಷ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. ಸಿದ್ದಲಿಂಗಪ್ಪ ಈಗಾಗಲೇ 17 ವರ್ಷ, ಸಿದ್ದಪ್ಪ 18 ವರ್ಷ ಮತ್ತು ಮಲ್ಲವ್ವ 15 ವರ್ಷ ಜೈಲು ವಾಸ ಮಾಡಿದ್ದಾರೆ. ಜೈಲಿನಲ್ಲಿ ಸನ್ನಡತೆ ಕಾಯ್ದುಕೊಂಡಿದ್ದು, ಮೂವರು ಅಪರಾಧಿಗಳಿಗೆ ಶಿಕ್ಷೆ ಕಡಿತಗೊಳಿಸಿ, ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ಕೋರಿದ್ದರು.

ಈ ಮನವಿ ಪುರಸ್ಕರಿಸಿರುವ ಹೈಕೋರ್ಟ್‌, ಶಿಕ್ಷೆಯ ವಿನಾಯಿತಿ ಅಥವಾ ಕ್ಷಮಾದಾನ ಎಂಬುದು ಸಜಾಬಂಧಿಯ ಸುಧಾರಣೆಯಾಗುವ ಗುರಿ ಹೊಂದಿದೆ. 20 ವರ್ಷಕ್ಕಿಂತ ಅಧಿಕ ಅವಧಿಗೆ ಜೈಲು ಶಿಕ್ಷೆ ವಿಧಿಸಿದ್ದ ಮಾತ್ರಕ್ಕೆ ಶಿಕ್ಷೆ ಕಡಿತಕ್ಕೆ ಅಪರಾಧಿ ಅರ್ಹನಾಗಿಲ್ಲ ಎಂದು ಹೇಳಲಾಗದು. ಜೈಲಿನಲ್ಲಿ ಕೈದಿ ಸನ್ನಡತೆ ತೋರಿದ್ದರೆ ಬಿಡುಗಡೆಗೆ ಅರ್ಹನಾಗಲಿದ್ದಾನೆ. ಆದ್ದರಿಂದ ಪ್ರಕರಣದ ಮೂವರು ಅಪರಾಧಿಗಳ ಕ್ಷಮಾದಾನ ನೀಡಿ ಶಿಕ್ಷೆ ಕಡಿತಗೊಳಿಸುವ ಬಗ್ಗೆ ಜೈಲು ಅಧಿಕಾರಿಗಳು ಮರು ಪರಿಶೀಲಿಸಿ ಎರಡು ವಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿದೆ.