ಬೆಂಗಳೂರು(ಏ.18): ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಆಸ್ತಿ ಜಪ್ತಿ ವಿಚಾರದಲ್ಲಿ ಸಿಬಿಐ ವರದಿ ಸಲ್ಲಿಕೆಗೂ ಮುನ್ನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ನಿಲುವನ್ನು ಮರು ಪರಿಶೀಲಿಸಲು ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ. ಐಎಂಎ ಹಗರಣ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.

ರೋಷನ್‌ ಬೇಗ್‌ ವಿರುದ್ಧದ ಸಿಬಿಐ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಈ ಹಂತದಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂಬ ಸರ್ಕಾರದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಸರ್ಕಾರ ತನ್ನ ಅಧಿಕಾರ ಬಳಸುತ್ತಿಲ್ಲ. ಆಸ್ತಿ ಜಪ್ತಿಗೆ ಐಎಂಎ ಹಾಗೂ ರೋಷನ್‌ ಬೇಗ್‌ ನಡುವಿನ ವ್ಯವಹಾರ ಕುರಿತು ಸಿಬಿಐ ವರದಿಗಾಗಿ ಕಾಯುವ ಅಗತ್ಯವಿಲ್ಲ. ಐಎಂಎ ಕುರಿತ ಆಡಿಟ್‌ ವರದಿ ಆಧರಿಸಿ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ರೋಷನ್‌ ಬೇಗ್‌ ಬಂಧಿಸದಿರಲು ಸುಪ್ರೀಂ ಸೂಚನೆ

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣಾ (ಕೆಪಿಐಡಿಎಫ್‌ಇ) ಕಾಯ್ದೆಯ ಸೆಕ್ಷನ್‌ 3ರ ಅಡಿ ರೋಷನ್‌ ಬೇಗ್‌ ಅವರ ಆಸ್ತಿ ಜಪ್ತಿ ಮಾಡುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಮಾ.13ರಂದೇ ಹೈಕೋರ್ಟ್‌ ಆದೇಶಿಸಿದೆ. ಆ ಆದೇಶದ ಅನುಸಾರ ಕ್ರಮ ಕೈಗೊಳ್ಳಲು ಸರ್ಕಾರ ತನ್ನ ನಿಲುವನ್ನು 3 ತಿಂಗಳಲ್ಲಿ ಮರುಪರಿಶೀಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ವಸ್ತುಸ್ಥಿತಿ ವರದಿ ಸಲ್ಲಿಕೆ

ಐಎಂಎ ಹಗರಣದಲ್ಲಿ ಸಕ್ಷಮ ಪ್ರಾಧಿಕಾರವಾಗಿ ನೇಮಕಗೊಂಡಿರುವ ಹರ್ಷ ಗುಪ್ತಾ ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿದರು. ಈವರೆಗೆ 3,473 ಠೇವಣಿದಾರರ ಖಾತೆಗಳಿಗೆ ಒಟ್ಟು 5.58 ಕೋಟಿ ವರ್ಗಾಯಿಸಲಾಗಿದೆ. ಸಂಸ್ಥೆಯ ಬಾಕಿ ಆಸ್ತಿಗಳನ್ನು ವಿಶೇಷ ನ್ಯಾಯಾಲಯ ಸಂಪೂರ್ಣವಾಗಿ ಜಪ್ತಿ ಮಾಡಿದ ನಂತರ ಹಣ ಲಭ್ಯವಾದಂತೆ ಹೆಚ್ಚುವರಿ ಠೇವಣಿದಾರರಿಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ವರದಿಯಲ್ಲಿ ವಿವರಿಸಿದ್ದಾರೆ.