ಬೆಂಗಳೂರು(ನ.09): ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಶಾಸಕ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿ ಇತ್ತೀಚೆಗೆ ಆದೇಶಿಸಿದೆ. 

ಸಿ.ಟಿ. ರವಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಪ್ರಕರಣ ಸಂಬಂಧ ತಾವು ದಾಖಲಿಸಿದ ದೂರಿನಲ್ಲಿ ಮಾಡಲಾದ ಆರೋಪಗಳು ಸತ್ಯವೆಂದು ಪ್ರಮಾಣೀಕರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಪ್ರಮಾಣಪತ್ರ ಸಲ್ಲಿಸುವಂತೆ ದೂರುದಾರ ಎ.ಸಿ. ಕುಮಾರ್‌ಗೆ ಹೈಕೋರ್ಟ್‌ ಇದೇ ವೇಳೆ ಅನುಮತಿ ನೀಡಿದೆ.

ಏನಿದು ಪ್ರಕರಣ?:

ಸಿ.ಟಿ. ರವಿ ಅವರು ಅಕ್ರಮವಾಗಿ ಕೋಟ್ಯಂತರ ರು. ಹಣ ಹಾಗೂ ಆಸ್ತಿ ಸಂಪಾದನೆ ಮಾಡಿದ್ದಾರೆ. ಅವರ ಆದಾಯವು 2004ರಿಂದ 2010ರ ನಡುವೆ 49 ಲಕ್ಷದಿಂದ 3.18 ಕೋಟಿ ರು.ಗೆ ಏರಿಕೆಯಾಗಿದೆ. ಈ ಅಕ್ರಮ ಆಸ್ತಿ ಕುರಿತು ತನಿಖೆಯಾಗಬೇಕೆಂದು ಕೋರಿ ಎ.ಸಿ.ಕುಮಾರ್‌ ಅವರು 2012ರಲ್ಲಿ ಲೋಕಾಯುಕ್ತ ಕೋರ್ಟ್‌ಗೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯವು 2016ರಲ್ಲಿ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸಿಬಿ ಅಧಿಕಾರಿಗಳಿಗೆ ಆದೇಶಿಸಿತ್ತು. ಪ್ರಕರಣ ಸದ್ಯ ಜನಪ್ರತಿನಿಧಿ ಗಳ ವಿಶೇಷ ನ್ಯಾಯಾಲಯದಲ್ಲಿದೆ. ತಮ್ಮ ವಿರುದ್ಧದ ದೂರು ಹಾಗೂ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಿ.ಟಿ. ರವಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ರಾಜೀನಾಮೆ ಅಂಗೀಕಾರಗೊಂಡ ಬೆನ್ನಲ್ಲೇ ಸಿಟಿ ರವಿ ದಿಲ್ಲಿಗೆ, ಅಲ್ಲಿಂದಲೇ ಮಹತ್ವದ ಹೇಳಿಕೆ..!

ರವಿ ಪರ ವಕೀಲರು ವಾದ ಮಂಡಿಸಿ, ಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆ ಆರೋಪ ಕುರಿತ ಖಾಸಗಿ ದೂರುಗಳ ಸಂಬಂಧ ನ್ಯಾಯಾಲಯಗಳು ತನಿಖೆಗೆ ಆದೇಶಿಸುವ ಅಥವಾ ವಿಚಾರಣೆ ಆರಂಭಿಸುವ ಮೊದಲು ದೂರುದಾರರಿಂದ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಪ್ರಕರಣದಲ್ಲಿ ದೂರುದಾರರು ಖಾಸಗಿ ದೂರು ದಾಖಲಿಸುವ ಸಂದರ್ಭದಲ್ಲಿ ತಾವು ಮಾಡಿರುವ ಆರೋಪಗಳು ಸತ್ಯವೆಂದು ಪ್ರಮಾಣೀಕರಿಸಿ ಪ್ರಮಾಣಪತ್ರ ಸಲ್ಲಿಸಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ದೂರು ಹಾಗೂ ವಿಚಾರಣೆ ರದ್ದುಗೊಳಿಸಬೇಕು ಎಂದು ಕೋರಿದರು.

ಸರ್ಕಾರದ ಪರ ವಕೀಲರು, ‘ಪ್ರಕರಣವನ್ನು ಸುಪ್ರೀಂ ಕೋರ್ಟ್‌ ತೀರ್ಪು ಬರುವ ಮುನ್ನವೇ ದೂರು ದಾಖಲಿಸಲಾಗಿದೆ. ಪ್ರಮಾಣಪತ್ರ ಸಲ್ಲಿಸದ ಕಾರಣ ಮುಂದಿಟ್ಟುಕೊಂಡು ಇಡೀ ಖಾಸಗಿ ದೂರನ್ನು ರದ್ದುಪಡಿಸಬಾರದು. ಇನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಿದ್ದುಪಡಿ ತರಬೇಕಿತ್ತು. ಆದರೆ, ತಿದ್ದುಪಡಿಯಾಗದೇ ಇರುವುದರಿಂದ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಬೇಕಾಗುತ್ತದೆ. ಅದರಂತೆ ದೂರುದಾರರು ತಮ್ಮ ಅರ್ಜಿಗೆ ಪೂರಕವಾಗಿ ವಿಚಾರಣಾ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಕೋರಿದರು. ಸರ್ಕಾರದ ಪರ ವಕೀಲರ ವಾದ ಪುರಸ್ಕರಿಸಿದ ಹೈಕೋರ್ಟ್‌, ಸಿ.ಟಿ.ರವಿ ಅವರ ಅರ್ಜಿ ವಜಾಗೊಳಿಸಿ ಆದೇಶಿಸಿತು.