ಬೆಂಗಳೂರು[ನ.23]: 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನ​ರ್‍ಸ್ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶವನ್ನು ರಾಜ್ಯ ಸರ್ಕಾರ ಪಾಲನೆ ಮಾಡಲು ಮುಂದಾಗಿದ್ದು, ಅಕ್ರಮವಾಗಿ ಉನ್ನತ ಹುದ್ದೆ ಪಡೆದಿರುವ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳಿಗೆ ಆತಂಕ ಎದುರಾಗಿದೆ.

ಹೊಸ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಯಥಾವತ್ತಾಗಿ ಈ ಕೂಡಲೇ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ. ಈ ಆದೇಶ ಜಾರಿಯಾದಲ್ಲಿ ಈಗ ಸೇವೆಯಲ್ಲಿರುವ 36 ಮಂದಿ ಕೆಎಎಸ್‌ ಅಧಿಕಾರಿಗಳು ಹುದ್ದೆ ಕಳೆದುಕೊಳ್ಳಲಿದ್ದು, ಕೆಎಎಸ್‌ನಿಂದ ಮುಂಬಡ್ತಿ ಪಡೆದಿದ್ದ ಹಾಲಿ 12 ಐಎಎಸ್‌ ಅಧಿಕಾರಿಗಳು ಹಿಂಬಡ್ತಿ ಪಡೆಯುವ ಭೀತಿ ಎದುರಾಗಿದೆ. ಹುದ್ದೆ ಕಳೆದುಕೊಳ್ಳುವವರ ಬದಲಿಗೆ ಹಿಂದೆ ವಂಚಿತಗೊಂಡಿದ್ದ 36 ಮಂದಿಗೆ ಹುದ್ದೆ ದೊರಕಲಿದೆ. ಸುಮಾರು 150ಕ್ಕೂ ಹೆಚ್ಚು ಮಂದಿ ಅಧಿಕಾರಿಗಳ ಸ್ಥಾನ ಪಲ್ಲಟವಾಗಲಿದೆ.

ಬೆಂಗಳೂರಿಗರೆ, ಬಾರ್-ಪಬ್‌ಗಳಿಂದ ಕಿವಿ ಬಿಡೋಕೆ ಆಗ್ತಿಲ್ಲವೇ? ಸ್ವಲ್ಪ ದಿನ ಕಾಯಿರಿ

ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದಿದ್ದರೆ ರಾಜ್ಯ ಸರ್ಕಾರವು ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲು ಸರ್ಕಾರ ಮುಂದಾಗಿದೆ.

1998ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅಕ್ರಮವಾಗಿ ನೇಮಕವಾಗಿರುವವರನ್ನು ಆಯ್ಕೆ ಪಟ್ಟಿಯಿಂದ ಹೊರಗಿಟ್ಟು ಹೊಸ ಆಯ್ಕೆ ಪಟ್ಟಿಯಂತೆ ನೇಮಕಾತಿ ಮಾಡಲು ಸೂಚನೆ ನೀಡಿತ್ತು. ಇದನ್ನು ಸುಪ್ರೀಂಕೋರ್ಟ್‌ ಸಹ ಎತ್ತಿ ಹಿಡಿದಿತ್ತು. ತೀರ್ಪು ಜಾರಿ ಮಾಡಲು ಹಿಂದಿನ ಕಾಂಗ್ರೆಸ್‌ ಮತ್ತು ಮೈತ್ರಿ ಸರ್ಕಾರಗಳು ಹಿಂದೇಟು ಹಾಕಿದ್ದವು. ಹೀಗಾಗಿ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಸರ್ಕಾರವು ನ್ಯಾಯಾಲಯದ ಆದೇಶದ ಪಾಲನೆಗೆ ತೀರ್ಮಾನಿಸಿದೆ ಎಂಬುದು ಹುದ್ದೆ ವಂಚಿತರ ಅಭಿಪ್ರಾಯವಾಗಿದೆ.

ಪ್ರಕರಣದ ಸಂಬಂಧ ಕಾನೂನು ಇಲಾಖೆ, ಅಡ್ವೋಕೇಟ್‌ ಜನರಲ್‌ ಮತ್ತು ಆರ್ಥಿಕ ಇಲಾಖೆಗಳು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುವಂತೆ ಸಲಹೆ ನೀಡಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನ್ಯಾಯಾಲಯದ ಆದೇಶದ ವಿರುದ್ಧವಾಗಿ ಎರಡು ಸುಗ್ರೀವಾಜ್ಞೆ ಹೊರಡಿಸಲು ಪ್ರಸ್ತಾವನೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಎರಡು ಬಾರಿಯೂ ತಿರಸ್ಕರಿಸಿದ್ದಾರೆ. ಪ್ರಸ್ತಾವನೆ ಇತ್ಯರ್ಥವಾಗದೆ ಇರುವುದರಿಂದ ರಾಜ್ಯದ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳಿಗೆ 2016, 2017 ಮತ್ತು 2018ನೇ ಸಾಲಿಗೆ ಐಎಎಸ್‌ ವೃಂದಕ್ಕೆ ನಿಯಮಾನುಸಾರ ದೊರೆಯಬೇಕಾಗಿರುವ ಮುಂಬಡ್ತಿಗಳನ್ನು ನೀಡಲು ಸಾಧ್ಯವಾಗಿಲ್ಲ.

ಅಕ್ರಮ ಕಟ್ಟಡ ನಿರ್ಮಾಣ ತಡೆಯದಿದ್ದರೆ ಅಧಿಕಾರಿಗಳಿಗೆ ಭಾರೀ ದಂಡ!

ನ್ಯಾಯಾಲಯದ ಆದೇಶದಂತೆ ಕ್ರಮ ವಹಿಸಿ ಪರಿಷ್ಕೃತ ಕೆಎಎಸ್‌ ಜ್ಯೇಷ್ಠತಾ ಪಟ್ಟಿಯೊಂದಿಗೆ ಐಎಎಸ್‌ ಮುಂಬಡ್ತಿಗೆ ಪ್ರಸ್ತಾವನೆಯನ್ನು ಆಯ್ಕೆ ಸಮಿತಿಗೆ ಸಲ್ಲಿಸುವಂತೆ ಕೇಂದ್ರ ಲೋಕಸೇವಾ ಆಯೋಗವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ, ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸುವವರೆಗೆ ಯಾವುದೇ ಮುಂಬಡ್ತಿ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಒಂದು ವೇಳೆ ಸರ್ಕಾರವು ಸುಗ್ರೀವಾಜ್ಞೆ ಜಾರಿಗೊಳಿಸಿದರೆ ಪುನಃ ಹುದ್ದೆವಂಚಿತರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಅಲ್ಲದೇ, ಕೇಂದ್ರ ಸರ್ಕಾರವು ಪ್ರಸ್ತಾವನೆಯನ್ನು ತಿರಸ್ಕರಿಸುವ ಸಾಧ್ಯತೆಯು ಹೆಚ್ಚಾಗಿದೆ. ಇದು ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತದೆ. ಸದರಿ ಆದೇಶ ಜಾರಿಯಾಗದೆ ದೀರ್ಘಾವಧಿಯಿಂದ ಬಾಕಿ ಇದ್ದು, ಈಗಲೂ ಜಾರಿಗೊಳಿಸದಿದ್ದಲ್ಲಿ ಸರ್ಕಾರವು ನ್ಯಾಯಾಂಗ ನಿಂದನೆಗೆ ಗುರಿಯಾಗುವ ಸಂದರ್ಭ ಉಂಟಾಗಲಿದೆ. ಈ ಎಲ್ಲಾ ಅಂಶಗಳನ್ನು ಮನಗಂಡು ಹೊಸ ಪರಿಸ್ಕೃತ ಆಯ್ಕೆ ಪಟ್ಟಿಯನ್ನು ಯಥಾವತ್ತಾಗಿ ತಕ್ಷಣ ಜಾರಿಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಪಿಎಸ್‌ಸಿಯಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕುವ ಸಂಬಂಧ ಕರ್ನಾಟಕ ಗೆಜೆಟೆಡ್‌ ಪ್ರೊಬೇಷನ​ರ್‍ಸ್ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ) ತಿದ್ದುಪಡಿ ನಿಯಮಗಳು-2019ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಎ ಮತ್ತು ಬಿ ಗ್ರೂಪ್‌ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಸಂದರ್ಶನದ ಅನುಪಾತವನ್ನು 1:5ರ ಬದಲಿಗೆ 1:3ಕ್ಕೆ ಇಳಿಸಲಾಗಿದೆ. ಇದು ಸಹ ನ್ಯಾಯಾಲಯದ ಆದೇಶಗಳಲ್ಲಿ ಒಂದಾಗಿದ್ದು, ಪಾಲನೆ ಮಾಡಲು ಸರ್ಕಾರ ನಿರ್ಧರಿಸಿದೆ.

ಪತ್ನಿಯ ರಾಸಲೀಲೆ ಚಿತ್ರೀಕರಿಸಿ ವಿಚ್ಛೇದನ ಪಡೆದ ಪತಿ!