ರೇವಣ್ಣ ಆಯ್ಕೆ ಅಸಿಂಧು: ಖುದ್ದು ಹಾಜರಾಗಲು ಪ್ರಜ್ವಲ್ಗೆ ಹೈಕೋರ್ಟ್ ಸೂಚನೆ
* ಜೂ.24ರಂದು ಖುದ್ದು ಹಾಜರಾಗಬೇಕು ಎಂದು ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಸೂಚನೆ
* ವಿಚಾರಣೆ ವೇಳೆ ಸಾಕ್ಷ್ಯ ನುಡಿದ ಅರ್ಜಿದಾರ ಜಿ. ದೇವರಾಜೇಗೌಡ
* ಬೇನಾಮಿಗಳ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಿದ ಪ್ರಜ್ವಲ್ ರೇವಣ್ಣ: ಆರೋಪ
ಬೆಂಗಳೂರು(ಜೂ.18): ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಕುರಿತ ವಿಚಾರಣೆಗಾಗಿ ಜೂ.24ರಂದು ಖುದ್ದು ಹಾಜರಾಗಬೇಕು ಎಂದು ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಸೂಚಿಸಿದೆ.
ಪ್ರಜ್ವಲ್ ಆಯ್ಕೆ ಪ್ರಶ್ನಿಸಿ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಮತ್ತು ಜಿ.ದೇವರಾಜೇ ಗೌಡ ಸಲ್ಲಿಸಿರುವ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರು ಈ ಸೂಚನೆ ನೀಡಿದರು.
ಗಾಂಧಿಯನ್ನೇ ಬಿಟ್ಟಿಲ್ಲ ನಿಮ್ಮನ್ನು ಬಿಡುತ್ತಾ ಬಿಜೆಪಿ?: ಪ್ರಜ್ವಲ್ ರೇವಣ್ಣ
ಪ್ರಜ್ವಲ್ ವಿರುದ್ಧ ಆರೋಪ ಏನು?:
ವಿಚಾರಣೆ ವೇಳೆ ಅರ್ಜಿದಾರ ಜಿ. ದೇವರಾಜೇಗೌಡ ಸಾಕ್ಷ್ಯ ನುಡಿದು, ಪ್ರಜ್ವಲ್ ರೇವಣ್ಣ ಅವರು ಬೇನಾಮಿಗಳ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಆದಾಯ ತೆರಿಗೆ ವಂಚಿಸಿದ್ದಾರೆ. ಹೊಳೆನರಸೀಪುರದಲ್ಲಿ ಅವರ ಒಡೆತನದಲ್ಲಿರುವ ಚೆನ್ನಾಂಬಿಕ ಕನ್ವೆನ್ಶನ್ ಸೆಂಟರ್ ಕಟ್ಟಡ ಕನಿಷ್ಠ 5 ಕೋಟಿ ರು. ಬೆಲೆ ಬಾಳುತ್ತದೆ. ಆದರೆ, ಚುನಾವಣಾ ಆಯೋಗಕ್ಕೆ ನಾಮಪತ್ರದೊಂದಿಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಕಟ್ಟಡದ ಮೌಲ್ಯವನ್ನು ಕೇವಲ 14 ಲಕ್ಷ ರು. ಎಂಬುದಾಗಿ ತೋರಿಸಲಾಗಿದೆ. ಬೆಂಗಳೂರಿನ ಮಿನರ್ವ ಸರ್ಕಲ್ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ರು. ಹೊಂದಿದ್ದರೂ ಕೇವಲ 5 ಲಕ್ಷ ರು. ಇರುವುದಾಗಿ ತಿಳಿಸಲಾಗಿದೆ ಎಂದು ಆರೋಪಿಸಿದರು.
ದೇವರಾಜೇಗೌಡ ಅವರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಜೂ.24ಕ್ಕೆ ನಿಗದಿಪಡಿಸಿತು. ಅಂದು ಪ್ರಜ್ವಲ್ ರೇವಣ್ಣ ಅವರು ವಿಚಾರಣೆಗೆ ಹಾಜರಿರಬೇಕು ಎಂದು ಸೂಚಿಸಿತು. ಮತ್ತೊಬ್ಬ ಅರ್ಜಿದಾರ ಎ.ಮಂಜು ಅವರು ಸಹ ವಿಚಾರಣೆಗೆ ಶುಕ್ರವಾರ ಹಾಜರಾಗಿದ್ದು, ಅವರನ್ನೂ ಮುಖ್ಯ ವಿಚಾರಣೆಗೆ ಒಳಪಡಿಸಲಾಗುತ್ತದೆ.