ಬ್ಯಾಂಕಿನ ಸ್ಟೇಷನರಿ ವಿಭಾಗದಲ್ಲಿ ನೌಕರಿ| ಟೆಂಡರ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ಆರೋಪ| ಶೇ.98 ಕಿವುಡತ್ವ ಇದ್ದರೂ ವಕೀಲರ ನೇಮಕಕ್ಕೆ ಒಪ್ಪದ ಶಿಸ್ತು ಪ್ರಾಧಿಕಾರ| ಹೈಕೋರ್ಟಲ್ಲಿ ಜಯ| 

ವೆಂಕಟೇಶ್‌ ಕಲಿಪಿ

ಬೆಂಗಳೂರು(ಮಾ.29): ಸ್ಟೇಷನರಿ ವಿಭಾಗದಲ್ಲಿ ಸಾಮಗ್ರಿಗಳ ಪೂರೈಕೆ ಗುತ್ತಿಗೆ ಮಂಜೂರಾತಿಯಲ್ಲಿ ಅಕ್ರಮ ಆರೋಪಕ್ಕೆ ಗುರಿಯಾಗಿದ್ದ ಕಿವುಡತನದಿಂದ ಬಳಲುತ್ತಿದ್ದ ಉದ್ಯೋಗಿಗೆ ಇಲಾಖೆ ವಿಚಾರಣೆ ನಡೆಸಿ ದಂಡ ವಿಧಿಸಿ, ಹಿಂಬಡ್ತಿ ನೀಡಿದ ಖಾಸಗಿ ಬ್ಯಾಂಕ್‌ವೊಂದರ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಬ್ಯಾಂಕಿನ ಆದೇಶ ರದ್ದುಪಡಿಸುವಂತೆ ಕೋರಿ ಎ.ಕೆ.ಸಿದ್ದಲಿಂಗಪ್ಪ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಆದೇಶ ಮಾಡಿದ್ದಾರೆ. ಬ್ಯಾಂಕಿನ ಆದೇಶ ಕೇವಲ ನೈಸರ್ಗಿಕ ನ್ಯಾಯದ ಉಲ್ಲಂಘನೆಯಲ್ಲದೇ ಮಾನವ ಹಕ್ಕು ಉಲ್ಲಂಘನೆ ಎಂದು ತೀಕ್ಷ್ಣವಾಗಿ ನುಡಿದ ನ್ಯಾಯಮೂರ್ತಿಗಳು, ಹಿಂಬಡ್ತಿಯಿಂದ ವ್ಯತ್ಯಾಸಗೊಂಡ ವೇತನ ಮತ್ತು ಪಿಂಚಣಿಯನ್ನು ಹೊಸದಾಗಿ ಲೆಕ್ಕಹಾಕಿ ಎರಡು ತಿಂಗಳಲ್ಲಿ ಪಾವತಿಸುವಂತೆ ಬ್ಯಾಂಕಿಗೆ ನಿರ್ದೇಶಿಸಿದೆ. ಆ ಮೂಲಕ ಸಿದ್ದಲಿಂಗಪ್ಪ ಅವರಿಗೆ ನಿವೃತ್ತಿಗೊಂಡ ಹತ್ತು ವರ್ಷಗಳ ನಂತರ ಹೈಕೋರ್ಟ್‌ ನ್ಯಾಯ ದೊರೆತಿದೆ.

ಬ್ಯಾಂಕಿಗೆ ತರಾಟೆ:

ಸಾಮಾನ್ಯವಾಗಿ ಇಲಾಖಾ ವಿಚಾರಣೆಯಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಲು ಉದ್ಯೋಗಿಗೆ ಅವಕಾಶವಿರುತ್ತದೆ. ಈ ಪ್ರಕರಣದಲ್ಲಿ ಅರ್ಜಿದಾರ ಉದ್ಯೋಗಿಗೆ ಶೇ.98ರಷ್ಟು ಕಿವುಡತ್ವ ಇದೆ. ಹೀಗಾಗಿ, ವಾದ ಮಂಡಿಸಲು ಸಹಜವಾಗಿ ಆತ ಅಸಮರ್ಥ. ಇಂತಹ ಪರಿಸ್ಥಿತಿಯಲ್ಲೂ ತನ್ನ ಪರ ವಾದ ಮಂಡನೆಗೆ ಕಾನೂನು ಸಲಹಾಗಾರರನ್ನು ನೇಮಿಸಿಕೊಳ್ಳಲು ಆತನಿಗೆ ಅವಕಾಶ ನೀಡಲಾಗಿಲ್ಲ. ಇದು ಕೇವಲ ಬ್ಯಾಂಕುಗಳ ಹಕ್ಕು ಅಥವಾ ಕಾನೂನು ಹಕ್ಕಿನ ಉಲ್ಲಂಘನೆ ಅಲ್ಲ. ಮಾನವ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ನೌಕರಿ ಬಿಟ್ಟ 30 ದಿನದಲ್ಲಿ ಗ್ರಾಚ್ಯುಟಿ: ಹೈಕೋರ್ಟ್‌

ಪ್ರಕರಣವೇನು?:

ಸಿದ್ದಲಿಂಗಪ್ಪ 1976ರ ಸೆ.25ರಂದು ಬೆಂಗಳೂರಿನ ಖಾಸಗಿ ಬ್ಯಾಂಕಿನಲ್ಲಿ ಗುಮಾಸ್ತ ಉದ್ಯೋಗಕ್ಕೆ ಸೇರಿಕೊಂಡಿದ್ದರು. 2010ರ ಡಿ.22ರಂದು ಬ್ಯಾಂಕಿನ ಸ್ಟೇಷನರಿ ವಿಭಾಗದ ಹಂಗಾಮಿ ಮ್ಯಾನೇಜರ್‌ ಆಗಿ ಅಧಿಕಾರ ಸ್ವೀಕರಿಸಿದ್ದರು. ಬ್ಯಾಂಕಿಗೆ ಅಗತ್ಯವಾಗಿದ್ದ ವಿವಿಧ ಕಂಪ್ಯೂಟರ್‌ ಸಾಮಗ್ರಿಗಳ ಪೂರೈಕೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಅರ್ಹ ಏಜೆನ್ಸಿಗಳಿಂದ ಬಿಡ್‌ ಆಹ್ವಾನಿಸಿ ನೋಟಿಸ್‌ ಪ್ರಕಟಿಸಿದ್ದರು. ನಾಲ್ಕು ಏಜೆನ್ಸಿಗಳು ಬಿಡ್‌ ಸಲ್ಲಿಸಿದ್ದವು. ಅದರಲ್ಲಿ ಕಡಿಮೆ ದರ ಬಿಡ್‌ ಮಾಡಿದ ಏಜೆನ್ಸಿಗೆ ಗುತ್ತಿಗೆ ನೀಡಿದ್ದರು.

‘1 ವರ್ಷದ ನಂತರ ಬಿಡ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಆದ ಕಾರಣ ನಿಮ್ಮ ವಿರುದ್ಧ ಏಕೆ ಕ್ರಮ ಜರುಗಿಸಬಾರದು?’ ಎಂಬುದಕ್ಕೆ ಉತ್ತರಿಸುವಂತೆ ಸೂಚಿಸಿ ಸಿದ್ದಲಿಂಗಪ್ಪಗೆ 2012ರ ಮಾ.3ರಂದು ಬ್ಯಾಂಕ್‌ ಶೋಕಾಸ್‌ ನೋಟಿಸ್‌ ನೀಡಿತ್ತು. ಅದಕ್ಕೆ ದೀರ್ಘವಾಗಿ ಉತ್ತರಿಸಿದ್ದ ಸಿದ್ಧಲಿಂಗಪ್ಪ, ಕೆಲವೊಂದು ದಾಖಲೆ ಸಿದ್ಧಪಡಿಸಿಕೊಳ್ಳಲು ಹೆಚ್ಚಿನ ಸಮಯ ಕೋರಿದ್ದರು. ಅದನ್ನು ಒಪ್ಪದ ಬ್ಯಾಂಕ್‌, 2012ರ ಜೂ.1ರಂದು ದೋಷಾರೋಪ ಪಟ್ಟಿಸಲ್ಲಿಸಿತು.

ಹಿಂಬಡ್ತಿ ನೀಡಿದ್ದ ಬ್ಯಾಂಕ್‌

ಸಿದ್ದಲಿಂಗಪ್ಪ ಅವರು ತಮಗೆ ಶೇ.98ರಷ್ಟು ಕಿವುಡು ಇದ್ದು, ತಮ್ಮ ಪರ ವಾದ ಮಂಡನೆಗಾಗಿ ಕಾನೂನು ಸಲಹಾಗಾರರನ್ನು ನಿಯೋಜಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದರು. ಆ ಕೋರಿಕೆ ಮನ್ನಿಸದ ಬ್ಯಾಂಕಿನ ಶಿಸ್ತು ಪ್ರಾಧಿಕಾರ ಇಲಾಖೆ ವಿಚಾರಣೆ ಪೂರ್ಣಗೊಳಿಸಿ ಸಿದ್ದಲಿಂಗಪ್ಪರನ್ನು ದೋಷಿಯಾಗಿ ತೀರ್ಮಾನಿಸಿತ್ತು. ಒಟ್ಟು .21,100 ದಂಡ ವಿಧಿಸಿತಲ್ಲದೆ, ಸಿದ್ದಲಿಂಗಪ್ಪ ಅವರಿಗೆ ‘ಮಿಡಲ್‌ ಮ್ಯಾನೇಜ್ಮೆಂಟ್‌ ಗ್ರೇಡ್‌ ಸ್ಕೇಲ್‌-2’ ಇಂದ ‘ಜ್ಯೂನಿಯರ್‌ ಮ್ಯಾನೇಜ್ಮೆಂಟ್‌ ಗ್ರೇಡ್‌ ಸ್ಕೇಲ್‌-2’ಗೆ ಹಿಂಬಡ್ತಿ ನೀಡಿ 2014ರ ಜ.31ರಂದು ಆದೇಶಿಸಿತ್ತು. ಈ ಆದೇಶವನ್ನು ಮೇಲ್ಮನವಿ ಪ್ರಾಧಿಕಾರವೂ ಎತ್ತಿಹಿಡಿದಿತ್ತು. ಇದರಿಂದ ಸಿದ್ದಲಿಂಗಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು.