Asianet Suvarna News Asianet Suvarna News

ಎತ್ತಿನಬಂಡಿ ಓಟದ ಸ್ಪರ್ಧೆಗೆ ಹೈಕೋರ್ಟ್‌ ಷರತ್ತಿನ ಅಸ್ತು

*  ಎತ್ತುಗಳಿಗೆ ಹಿಂಸೆ ಆಗದಂತೆ ಸ್ಪರ್ಧೆ ಹಮ್ಮಿಕೊಳ್ಳಿ
*  ಸುಪ್ರೀಂ ಷರತ್ತಿಗೆ ಒಳಪಟ್ಟು ಓಟಕ್ಕೆ ಅನುಮೋದನೆ
*  ನಿಯಮ ಉಲ್ಲಂಘಿಸಿದರೆ ದಂಡನಾತ್ಮಕ ಕ್ರಮ
 

Karnataka High Court Allowed to Cart Race grg
Author
Bengaluru, First Published Sep 2, 2021, 8:02 AM IST

ಬೆಂಗಳೂರು(ಸೆ.02):  ಸುಪ್ರೀಂ ಕೋರ್ಟ್‌ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ರಾಜ್ಯದಲ್ಲಿ ಎತ್ತಿನ ಬಂಡಿ ಓಟದ (ಚಕ್ಕಡಿ ಓಟ) ಸ್ಪರ್ಧೆ ಆಯೋಜನೆ ಮಾಡಲು ಹೈಕೋರ್ಟ್‌ ಹಸಿರು ನಿಶಾನೆ ತೋರಿದೆ.

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸುವುದನ್ನು ಪ್ರಶ್ನಿಸಿ ಮೈಸೂರಿನ ಪೀಪಲ್‌ ಫಾರ್‌ ಅನಿಮಲ್ಸ್‌… ವೆಲ್ಫೇರ್‌ ಆರ್ಗನೈಸೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದು, ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜನೆಗೆ ಸುಪ್ರೀಂ ಕೋರ್ಟ್‌ ರೂಪಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿದೆ.

ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಿ, ‘ಕರ್ನಾಟಕ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-2017’ರ ಸೆಕ್ಷನ್‌ 2(28)ಕ್ಕೆ ತಿದ್ದುಪಡಿ ತರಲಾಗಿದೆ. ಆ ತಿದ್ದುಪಡಿ ಪ್ರಕಾರ ರಾಜ್ಯದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ನಡೆಸಲು ಅವಕಾಶವಿದೆ ಮತ್ತು ಅದು ಅಪರಾಧವಲ್ಲ. ಸ್ಪರ್ಧೆ ವೇಳೆ ಭಾಗವಹಿಸುವ ಎತ್ತುಗಳಿಗೆ ಹಿಂಸೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ತಿಳಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಈ ಅರ್ಜಿಯಲ್ಲಿ ಎತ್ತಿನ ಬಂಡಿ ಸ್ಪರ್ಧೆಗೆ ಅವಕಾಶ ಕಲ್ಪಿಸಿರುವ ನಿಯಮವನ್ನು ಪ್ರಶ್ನಿಸಿಲ್ಲ. ಹೀಗಾಗಿ, ಅರ್ಜಿದಾರರ ಮನವಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿತು.

ಬಾಯಲ್ಲಿ ಹೇಳಿದ್ರೆ ಆಗಲ್ಲ...ಗೋ ರಕ್ಷಣೆ... ಸರ್ಕಾರ, ನಾಗರಿಕರ ಹೊಣೆ!

ಅಲ್ಲದೆ, ಮಹಾರಾಷ್ಟ್ರದಲ್ಲಿನ ಎತ್ತಿನ ಬಂಡಿ ಸ್ಪರ್ಧೆ ಮತ್ತು ತಮಿಳುನಾಡಿನ ಜಲ್ಲಿಕಟ್ಟು ಆಯೋಜನೆ ಪ್ರಕರಣಗಳಲ್ಲಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರಾಣಿಗಳಿಗೆ ಯಾವುದೇ ಹಿಂಸೆ ಆಗುವುದನ್ನು ತಡೆಯಲು ಕೆಲ ಷರತ್ತು ವಿಧಿಸಿ ಸುಪ್ರೀಂ ಕೋರ್ಟ್‌ 2013ರ ಅ.10ರಂದು ಆದೇಶಿಸಿದೆ. ಆ ಷರತ್ತುಗಳನ್ನು ಎತ್ತಿನ ಬಂಡಿ ಸ್ಪರ್ಧೆ ಆಯೋಜನೆ ವೇಳೆ ಕರ್ನಾಟಕದಲ್ಲೂ ಜಾರಿ ಮಾಡಬಹುದು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಮನವಿ ಏನು?:

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಬಹುಮಾನದ ಆಸೆಯಿಂದ ಎತ್ತುಗಳಿಗೆ ವೇಗವಾಗಿ ಓಡಲು ಹಿಂಸೆ ನೀಡಲಾಗುತ್ತದೆ. ಹೀಗಾಗಿ, ರಾಜ್ಯದಲ್ಲಿ ಎತ್ತಿನ ಬಂಡಿ ಸ್ಪರ್ಧೆ ಆಯೋಜನೆ ತಡೆಯುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಷರತ್ತುಗಳು ಏನು?

ಎತ್ತಿನ ಓಟದಂತಹ ಸ್ಪರ್ಧೆ ನಡೆಸಲು ಸುಪ್ರೀಂಕೋರ್ಟ್‌ ಹಲವು ಷರತ್ತು ವಿಧಿಸಿದೆ. ಅವು: ಓಟದ ಸ್ಪರ್ಧೆ ವೇಳೆ ಪ್ರತಿ ಎತ್ತಿನ ಗಾಡಿಗೂ ಪ್ರತ್ಯೇಕ ಟ್ರ್ಯಾಕ್‌ ಮಾಡಬೇಕು. ಸ್ಪರ್ಧೆಯಲ್ಲಿ ಪ್ರಾಣಿಗಳಿಗೆ ಚಾಟಿ ಏಟು ನೀಡಬಾರದು. ಗಾಡಿಯನ್ನು ಓಡಿಸುವರು ಎತ್ತುಗಳನ್ನು ಹೊಡೆದು ಗಾಯಗೊಳಿಸಬಾರದು. ಸ್ಪರ್ಧೆಗೂ ಮುನ್ನ ಭಾಗವಹಿಸುವ ಎತ್ತುಗಳು ದೈಹಿಕವಾಗಿ ಸದೃಢವಾಗಿದೆಯೇ ಎಂಬುದನ್ನು ಪಶುವೈದ್ಯರು ಪರೀಕ್ಷಿಸಬೇಕು. ಎತ್ತುಗಳು ಆಕ್ರಮಣಶೀಲವಾಗುವಂತೆ ಮಾಡಲು ಗುಪ್ತಾಂಗಗಳಿಗೆ ಮೆಣಸಿನಕಾಯಿ ಪುಡಿ ಮತ್ತು ಮಣ್ಣು ಹಾಕದಂತೆ ನೋಡಿಕೊಳ್ಳಬೇಕು. ಆಕಸ್ಮಿಕವಾಗಿ ಎತ್ತುಗಳು ಗಾಯಗೊಂಡರೆ, ತಕ್ಷಣವೇ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು. ಎತ್ತುಗಳಿಗೆ ಹಿಂಸೆ ನೀಡಿದರೆ, ಅವರ ವಿರುದ್ಧ ದಂಡನಾತ್ಮಕ ಕ್ರಮ ಜರುಗಿಸಬೇಕು.
 

Follow Us:
Download App:
  • android
  • ios