ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಬೀಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ರಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ, ರಾಜ್ಯದ 6 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿಲ್ಲೆಗಳ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು (ಆ.17): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಬೀಸುವ ಸಾಧ್ಯತೆ ಇದ್ದು, ಆ.18ರಂದು ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ 6 ಜಿಲ್ಲೆಗಳಲ್ಲಿ ಪೂರ್ಣ ಮತ್ತು ಭಾಗಶಃ ಶಾಲೆ, ಕಾಳೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಶಾಲೆ, ಕಾಲೇಜಿಗೆ ರಜೆ:
ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಮತ್ತೆ ತೀವ್ರಗೊಂಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಿಸಿದೆ. ಭಾರಿ ಮಳೆಯ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ, ಮಕ್ಕಳು ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ನದಿ ಮತ್ತು ಹಳ್ಳಗಳ ಸಮೀಪ ಹೋಗದಂತೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಂದ ದೂರವಿರುವಂತೆ ಸೂಚಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ರಜೆ:
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢ ಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಸೋಮವಾರ (ಆ.18) ರಜೆಯನ್ನು ಘೋಷಿಸಲಾಗಿರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈ ಮೂಲಕ ಸೂಚನೆ ನೀಡಿದೆ. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ವಿಪತ್ತು ನಿರ್ವಹಣೆಯನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ನಿರ್ವಹಿಸುವುದು. ಪ್ರವಾಸಿಗರು/ಸಾರ್ವಜನಿಕರು ನದಿತೀರಕ್ಕೆ, ಸಮುದ್ರತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 2 ದಿನ ಶಾಲೆ ಕಾಲೇಜಿಗೆ ರಜೆ:
ಕರಾವಳಿ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ರೆಡ್ ಅಲರ್ಟ್ ಘೋಷಣೆ ಮಾಡಿರುವುದರಿಂದ, ಜಿಲ್ಲಾಡಳಿತದಿಂದ ಶಾಲೆ ಕಾಲೇಜುಗಳಿಗೆ 2 ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೊಯಿಡಾ ಮತ್ತು ದಾಂಡೇಲಿ ಸೇರಿ 10 ತಾಲೂಕುಗಳಿಗೆ ಈ ರಜೆ ಅನ್ವಯವಾಗಲಿದೆ. ಈ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಆ.18ರಿಂದ ಆಗಸ್ಟ್ 19ರವರೆಗೆ (2 ದಿನಗಳು) ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರಜೆ:
ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಕಾರಣ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಆಲ್ದೂರು, ವಸ್ತಾರೆ, ಆವತಿ ಹೋಬಳಿಗಳಲ್ಲಿ ರಜೆ ಘೋಷಿಸಲಾಗಿದೆ.
ಕೊಡಗು ಜಿಲ್ಲೆಯಾದ್ಯಂತ ರಜೆ:
ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಹಿನ್ನೆಲೆಯಲ್ಲಿ ಗಾಳಿ ಸಹಿತ ಹೆಚ್ಚಿನ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ನಾಳೆ ಅಂದರೆ ಸೋಮವಾರ (ಆ.18ರಂದು) ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ.
ಹಾಸನದ 3 ತಾಲೂಕುಗಳಿಗೆ ಮಾತ್ರ ರಜೆ:
ಇನ್ನು ಮಲೆನಾಡು ಭಾಗದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ಹಾಸನ ಜಿಲ್ಲೆಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಆದ್ದರಿಂದ ಭಾರೀ ಮಳೆಯನ್ನು ಪಡೆಯುವ ಜಿಲ್ಲೆಯ ಸಕಲೇಶಪುರ, ಬೇಲೂರು ಮತ್ತು ಆಲೂರು ತಾಲ್ಲೂಕಿನ ಕೆ.ಹೊಸಕೋಟೆ ಹೋಬಳಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆಯನ್ನು ನೀಡಿ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ. ಮಕ್ಕಳು ಮಳೆ ಬೀಳುವ ವೇಳೆ ಎಲ್ಲಿಯೂ ಹೊರಗೆ ಹೋಗದಂತೆ, ಕೆರೆ, ಕಾಲುವೆ, ಹಳ್ಳ ಅಥವಾ ನದಿ ತೀರಗಳಲ್ಲಿ ಆಟವಾಡದಂತೆ ಮುಂಜಾಗ್ರತೆ ಕ್ರಮವಹಿಸುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತವು ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧವಾಗಿದ್ದು, ಸಾರ್ವಜನಿಕರು ಹವಾಮಾನ ಇಲಾಖೆಯ ನಿಯಮಿತ ವರದಿಗಳನ್ನು ಗಮನಿಸುತ್ತಿರುವಂತೆ ಮನವಿ ಮಾಡಿದೆ. ಭಾರಿ ಮಳೆಯಿಂದಾಗಿ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಗಳೂ ಇರುವುದರಿಂದ, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗುವಂತೆ ಸಲಹೆ ನೀಡಲಾಗಿದೆ.
