ರಾಜ್ಯದಲ್ಲಿ ಹೃದಯಾಘಾತ ಸರಣಿ ಮುಂದುವರಿದಿದೆ. ಇದೀಗ ಬೆಳಗಾವಿಯಲ್ಲಿ 35ರ ಯುವಕ ಹಾಗೂ ಧಾರವಾಡದಲ್ಲಿ 55ರ ಮಹಿಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಬೆಂಗಳೂರು (ಜು.10) ಕರ್ನಾಟಕದಲ್ಲಿ ಹೃದಯಾಘಾತ ಆರೋಗ್ಯ ಸಮಸ್ಯೆ ಗಂಭೀರವಾಗುತ್ತಿದೆ, ಮಕ್ಕಳು, ಯುವಕರು ಸೇರಿದಂತೆ ಬಹುತೇಕ ಎಲ್ಲಾ ವಯಸ್ಸಿನವರಿಗೆ ಹೃದಯಾಘಾತ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಸನದ ಸರಣಿ ಹೃದಯಾಘಾತ ಸಮಸ್ಯೆಗಳ ನಡುವೆ ಹಲವು ಜಿಲ್ಲೆಗಳಲ್ಲೂ ಇದೀಗ ಹೃದಯಾಘಾತ ಸಮಸ್ಯೆ ವರದಿಯಾಗುತ್ತಿದೆ. ಇದೀಗ ಬೆಳಗಾವಿಯ 35ರ ಹರೆಯದ ಯುವ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಮೃತಪಟ್ಟಿದ್ದರೆ, ಧಾರವಾಡದ 55ರ ಮಹಿಳೆ ಹೃದಯಾಘಾತಕ್ಕೆ ಸಾವನ್ನಪಿದ ಘಟನೆ ನಡೆದಿದೆ.
ಕ್ಷಣಾರ್ಧದಲ್ಲಿ ಇಬ್ರಾಹಿಂ ಕುಸಿದು ಬಿದ್ದು ಸಾವು
ಬೆಳಗಾವಿಯ ಅನಗೋಳದ 35ರ ಹರೆಯದ ಇಬ್ರಾಹಿಂ ದೇವಲಾಪುರ ನಡೆದುಕೊಂಡು ಬರುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಇಬ್ರಾಹಿಂಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ನಡೆಯಲು ಅಸಾಧ್ಯವಾಗಿದೆ. ಹೀಗಾಗಿ ರಸ್ತೆ ಪಕ್ಕ ನಿಂತಿದ್ದ ಯುವಕನ ಕೈ ಹಿಡಿದು ಇಬ್ರಾಹಿಂ ಒಂದು ಕ್ಷಣ ನಿಂತಿದ್ದಾರೆ. ಮರು ಕ್ಷಣದಲ್ಲೇ ಇಬ್ರಾಹಿಂ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆ ದಾಖಲಾಗುವ ಮೊದಲೇ ಇಬ್ರಾಹಿಂ ಮೃತಪಟ್ಟಿದ್ದಾನೆ. ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೊಲದಲ್ಲಿ ಕೆಲಸ ಮಾಡುವಾಗ ಹೃದಯಾಘಾತ
ಧಾರವಾಡದಲ್ಲಿ ಹೃದಯಾಘಾತ ಸರಣಿ ಮುಂದುವರಿದಿದೆ. ಇದೀಗ ನವಲಗುಂದ ತಾಲೂಕಿನ ಅರೆ ಕುರಹಟ್ಟಿ ಗ್ರಾಮದ ಮಹಿಳೆ ಬಸವ್ವ ಕಲ್ಲಪ್ಪ ತಲವಾಯಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 55 ವರ್ಷದ ಬಸವ್ವ ಕಲ್ಲಪ್ಪ ತಲವಾಯಿ ಹೊಲದಲ್ಲಿ ಕೆಲಸದಲ್ಲಿ ತೊಡಗಿರುವ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಹೊಲದಲ್ಲೇ ಕುಸಿದು ಬಿದ್ದ ಬಸವ್ವ ಕಲ್ಲಪ್ಪ ತಲವಾಯಿ ಮೃತಪಟ್ಟಿದ್ದಾರೆ. ನವಲಗುಂದ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಂಪ್ಲಿಯಲ್ಲಿ 30ರ ಯುವಕ ಸಾವು
ಕಂಪ್ಲಿ ತಾಲೂಕಿನಲ್ಲಿ ಹೃದಯಾಘಾತ ಸಾವು ದಾಖಲಾಗಿದೆ. ಕೇವಲ 30 ವರ್ಷದ ಯುವಕ ಗವಿಸಿದ್ದಪ್ಪ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಗವಿಸಿದ್ದಪ್ಪ ಖಾಸಗಿ ಕಂಪನಿಯೊಂದರಲ್ಲಿ ಅಗ್ರಿಕಲ್ಚರ್ ಸುಪ್ರವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ತಿಂಗಳ ಹಿಂದೆ ಹೃದಯಾಘಾತ ಸಂಭವಿಸಿ ಅಸ್ವಸ್ಥಗೊಂಡ ಹಿನ್ನೆಲೆ ಕೊಪ್ಪಳದ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ವೈದ್ಯರು ಸ್ಟಂಟ್ ಅಳವಡಿಸಿದ್ದರಲ್ಲದೇ ಒಂದು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ವಿಶ್ರಾಂತಿ ಬಳಿಕ ಗವಿಸಿದ್ದಪ್ಪ ಮತ್ತೆ ವೃತ್ತಿಯಲ್ಲಿ ನಿರತರಾಗಿದ್ದರು. ಮೊನ್ನೆ ಮತ್ತೊಮ್ಮೆ ಹೃದಯಾಘಾತ ಸಂಭವಿಸಿ ಮೆದುಳಿನಲ್ಲಿನ ನರದಲ್ಲಿ ರಕ್ತ ಸ್ರಾವ ಉಂಟಾಗಿತ್ತು. ಚಿಕಿತ್ಸೆಗಾಗಿ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೇ ಇಂದು ಗವಿಸಿದ್ದಪ್ಪ ಬಳ್ಳಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
