ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಕೊರೋನಾ ಪಾಸಿಟಿವ್ ಆಗಿದೆ. ಕೋವಿಡ್-19 ನ ಕಳೆದ ಮೂರೂ ಅಲೆಗಳ ವೇಳೆ ಸೋಂಕಿನಿಂದ ಪಾರಾಗಿದ್ದ ಇವರು ಈ ಬಾರಿ ಪಾಸಿಟಿವ್ ಆಗಿರುವುದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.  

ಬೆಂಗಳೂರು (ಜೂನ್ 2): ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಅವರಿಗೆ ಕೋವಿಡ್-19 (Covid-19) ಲಕ್ಷಣಗಳು ಕಾಣಿಸಿಕೊಂಡಿದ್ದು, ತಾವು ಕೊರೋನಾ ಪಾಸಿಟಿವ್ ಆಗಿರುವುದಾಗಿ ಹೇಳಿದ್ದಾರೆ.

ಟ್ವಿಟರ್ ನಲ್ಲಿ ಸುಧಾಕರ್ ಈ ಕುರಿತಾಗಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. "ಮೂರು ಅಲೆಗಳ ಸಂದರ್ಭದಲ್ಲೂ ಕೋವಿಡ್ ಸೋಂಕಿನಿಂದ ಪಾರಾಗಿದ್ದ ನಾನು ಈಗ ಸೋಂಕಿಗೆ ತುತ್ತಾಗಿದ್ದೇನೆ. ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ' ಎಂದು ಬರೆದುಕೊಂಡಿದ್ದಾರೆ.

ಕೆಲ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು ಹೋಮ್ ಐಸೋಲೇಷನ್ ನಲ್ಲಿ ಇದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ಶೀಘ್ರವಾಗಿ ಪರೀಕ್ಷೆ ಮಾಡಿಸಿಕೊಳ್ಳವಂತೆ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

Scroll to load tweet…


ಗುರುವಾರ ಕರ್ನಾಟಕದ ಕೋವಿಡ್ ಕೇಸ್: ಕರ್ನಾಟಕದಲ್ಲಿ ಗುರುವಾರ 297 ಹೊಸ ಕೇಸ್ ಗಳು ಪತ್ತೆಯಾಗಿವೆ. ಅದರಲ್ಲಿ ಬೆಂಗಳೂರಿನಲ್ಲಿಯೇ 276 ಕೇಸ್ ಗಳು ಬಂದಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 1.45ರಷ್ಟಿದೆ. ಗುರುವಾರ ಒಟ್ಟು 187 ಮಂದಿ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು, ಅದರಲ್ಲಿ 173 ಮಂದಿ ಬೆಂಗಳೂರಿನವರಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 2204 ಸಕ್ರಿಯ ಪ್ರಕರಣಗಳಿದ್ದರೆ, ಬೆಂಗಳೂರಿನಲ್ಲಿ 2091 ಕೇಸ್ ಗಳಿವೆ. ಒಟ್ಟು 20, 380 ಪರೀಕ್ಷೆಗಳು ನಡೆದಿವೆ.

ಇನ್ನು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಪ್ರಿಯಾಂಕಾ ಗಾಂಧಿ ಅವರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ, ನಂತರ ಅವರು ಲಕ್ನೋದಿಂದ ದೆಹಲಿಗೆ ಮರಳಿದ್ದಾರೆ. ಸದ್ಯ ಪ್ರಿಯಾಂಕಾ ಗಾಂಧಿಯ ಅವರ ಪರೀಕ್ಷೆ ನಡೆದಿಲ್ಲ. ಸೋನಿಯಾ ಹೊರತಾಗಿ ಪಕ್ಷದ ನಾಯಕ ಕೆ. ಸಿ. ವೇಣುಗೋಪಾಲ್ ಕೂಡ ಕೊರೋನಾ ಸೋಂಕಿತರಾಗಿದ್ದಾರೆ. ಹಲವು ಕಾಂಗ್ರೆಸ್ ನಾಯಕರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿದ್ದು, ಎಲ್ಲರಿಗೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಸೋನಿಯಾ ಗಾಂಧಿ ಬಗ್ಗೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಸೋನಿಯಾ ಗಾಂಧಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಸದ್ಯ ಸೋನಿಯಾ ಆರೋಗ್ಯವಾಗಿದ್ದಾರೆ. ಜೂನ್ 8 ರಂದು ಇಡಿ ಮುಂದೆ ಹಾಜರಾಗುವುದಾಗಿ ಸೋನಿಯಾ ಗಾಂಧಿ ಹೇಳಿದ್ದಾರೆ ಎಂದು ಅವರು ಹೇಳಿದರು. ನಿನ್ನೆ ದಿನ ಸೋನಿಯಾ ಗಾಂಧಿ ಅವರು ಕೋವಿಡ್ ಪರೀಕ್ಷೆ ನಡೆಸಿದ್ದು, ಅದರಲ್ಲಿ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಮುಂದಿನ 3 ಅಥವಾ 4 ದಿನಗಳ ನಂತರ ಸೋನಿಯಾ ಗಾಂಧಿ ಮತ್ತೊಮ್ಮೆ ಪರೀಕ್ಷೆ ನಡೆಸಲಿದ್ದಾರೆ.

ಕೋವಿಡ್‌ 4ನೇ ಅಲೆ ಭೀತಿ: ಮುಂಬೈನಲ್ಲಿ ದಿಢೀರ್‌ ಕೊರೋನಾ ಸೋಂಕು ಏರಿಕೆ..!

ಭಾರತದಲ್ಲಿ ಜೂನ್‌ನಲ್ಲಿ 4ನೇ ಕೋವಿಡ್‌ ಅಲೆ ಅಪ್ಪಳಿಸಬಹುದು ಎಂಬ ಮುನ್ಸೂಚನೆ ನಡುವೆಯೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೋವಿಡ್‌ ಏಕಾಏಕಿ ಹೆಚ್ಚತೊಡಗಿದೆ. ಮಂಗಳವಾರ 506ರಷ್ಟು ದಾಖಲಾಗಿದ್ದ ಪ್ರಕರಣಗಳ ಸಂಖ್ಯೆ ಬುಧವಾರ 739ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಪಾಸಿಟಿವಿಟಿ ದರ ಕೂಡ ಮಂಗಳವಾರ ಶೇ.6 ಇದ್ದದ್ದು ಬುಧವಾರ ಶೇ.8.4ಕ್ಕೆ ಏರಿದೆ. ಫೆ.1ರಂದು 803 ಕೋವಿಡ್‌ ಕೇಸು ದಾಖಲಾಗಿದ್ದವು. ಈಗ ದಾಖಲಾದ 739 ಕೇಸುಗಳು 1 ತಿಂಗಳ ಗರಿಷ್ಠವಾಗಿವೆ.

ನೆರೆ ರಾಜ್ಯದಲ್ಲಿ ಮತ್ತೆ ಕೊರೋನಾ ಅಟ್ಟಹಾಸ, ಮುಂಬೈನಲ್ಲಿ ಏಕಾಏಕಿ ಹೆಚ್ಚಿದ ಪಾಸಿಟಿವಿಟಿ ದರ!

ಇದಲ್ಲದೆ, ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3000 ಸನಿಹಕ್ಕೆ (2,970) ಬಂದಿದೆ ಹಾಗೂ ಬಹುದಿನಗಳ ನಂತರ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 100 ದಾಟಿದೆ. ಉಳಿದವರು ಹೋಮ್‌ ಐಸೋಲೇಶನ್‌ನಲ್ಲಿದ್ದರೂ ಆಸ್ಪತ್ರೆ ಸೇರುವವರ ಸಂಖ್ಯೆ ಶತಕ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನದ ಅಂಶ.