ವಿಧಾನಸಭೆ[ಮಾ.14]: ಕಲಬುರಗಿಯಲ್ಲಿ ಕೊರೋನಾ ಸೋಂಕಿಗೆ ಮೃತಪಟ್ಟಿರುವ ವೃದ್ಧನ ಚಿಕಿತ್ಸೆ ಹಾಗೂ ನಿಗಾ ವ್ಯವಸ್ಥೆಯಲ್ಲಿ ಆರೋಗ್ಯ ಅಧಿಕಾರಿಗಳು ಭಾರೀ ಲೋಪ ಮಾಡಿದ್ದಾರೆ. ಸೋಂಕು ಶಂಕೆಯಿದ್ದರೂ ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡದೆ ಆರು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆಯುವಂತೆ ಮಾಡಿದ್ದಾರೆ. ಇದರ ಪರಿಣಾಮ ಹಲವಾರು ಜನರಿಗೆ ಸೋಂಕು ಹರಡುವ ಅಪಾಯ ಎದುರಾಗಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಲಬುರಗಿಯಂತಹ ನಗರದಲ್ಲಿ ಒಂದು ಕೊರೋನಾ ಪ್ರಯೋಗಾಲಯ ತೆಗೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹಾಗಾದರೆ ಸರ್ಕಾರವು ಇಂತಹ ಅಪಾಯಕಾರಿ ರೋಗ ನಿಯಂತ್ರಣಕ್ಕೆ ಇನ್ನೇನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಮಂಗಳವಾರ ಮೃತಪಟ್ಟಿದ್ದ 76 ವರ್ಷದ ವೃದ್ಧನಿಗೆ ಕೊರೋನಾ ಸೋಂಕು ಇದ್ದದ್ದು ಗುರುವಾರ ಸಾಬೀತಾಗಿದೆ. ಸೌದಿ ಅರೇಬಿಯಾದಿಂದ ಹೈದರಾಬಾದ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಫೆ.29ರಂದು ಆಗಮಿಸಿದ್ದ ವ್ಯಕ್ತಿಯು ಎಲ್ಲರೊಂದಿಗೆ ಮುಕ್ತವಾಗಿ ಬೆರೆತಿದ್ದರು. ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಗೆ ಯಾವುದೇ ತಪಾಸಣೆ ನಡೆಸಿಲ್ಲ.

ಬಳಿಕ ಕಲಬುರಗಿ ಆರೋಗ್ಯಾಧಿಕಾರಿಗಳು ಸಹ ಅವರನ್ನು ಪ್ರತ್ಯೇಕವಾಗಿರಿಸಲು ಪ್ರಯತ್ನಿಸಿಲ್ಲ. ಮಾ.6 ರಂದು ಕಲಬುರಗಿಯ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಾ.9 ರಂದು ಆರೋಗ್ಯಾಧಿಕಾರಿಗಳು ಕೊರೋನಾ ಶಂಕೆಯಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ಗೆ ಹೋಗಿದ್ದಾರೆ. ಅವರನ್ನು ತಡೆದು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಗಳ ಮೇಲೆ ಕ್ರಮ ಏಕಿಲ್ಲ?:

ಸೋಂಕು ಶಂಕೆಯಿದ್ದ ವ್ಯಕ್ತಿಯನ್ನು ಹೈದರಾಬಾದ್‌ನ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರೆ ಮೊದಲ ಮೂರು ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿವೆ. ಈ ವೇಳೆ ನಾಲ್ಕನೇ ಆಸ್ಪತ್ರೆಯವರು ಚಿಕಿತ್ಸೆ ನೀಡಿ ಕೊರೋನಾ ಸೋಂಕು ಸಾಧ್ಯತೆ ಹಿನ್ನೆಲೆಯಲ್ಲಿ ಕಲಬುರಗಿಗೆ ವಾಪಸು ಕಳುಹಿಸಿದ್ದಾರೆ. ಕಲಬುರಗಿಯಲ್ಲೂ ಸಹ ಅವರನ್ನು ಅಂತ್ಯಕ್ರಿಯೆ ಮಾಡುವ ಕಡೆಯೂ ಸಹ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ವ್ಯಕ್ತಿ ಸತ್ತ ಮೂರು ದಿನಗಳಿಗೆ ವರದಿ ಬರುತ್ತದೆ ಎಂದರೆ ಏನರ್ಥ ಎಂದು ಪ್ರಶ್ನೆ ಮಾಡಿದರು.

ಪ್ರಿಯಾಂಕ್‌ ಖರ್ಗೆ ತರಾಟೆ:

ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆ ಮಾತನಾಡಿ, ಕಲಬುರಗಿಯಲ್ಲಿ ದೇಶದಲ್ಲೇ ಕೊರೋನಾ ಸೋಂಕಿಗೆ ಮೊದಲ ಬಲಿಯಾಗಿದೆ. ಅದಕ್ಕೂ ಮೊದಲು ಅವರನ್ನು ಪ್ರತ್ಯೇಕವಾಗಿಟ್ಟಿರಲಿಲ್ಲ. ಸಾವಿರಾರು ಮಂದಿ ಅವರ ಸಂಪರ್ಕಕ್ಕೆ ಬಂದಿದ್ದರು. ಪ್ರಕರಣದಲ್ಲಿ ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ಲೋಪ ಇದೆ. ಮೊದಲು ವ್ಯಕ್ತಿಗೆ ಕಲಬುರಗಿಯಲ್ಲಿ ಕ್ರಿಸ್ಟಲ್‌ ಆಸ್ಪತ್ರೆ, ಸನ್‌ರೈಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಕಲಬುರಗಿಯ ಸರ್ಕಾರಿ ಆಸ್ಪತ್ರೆಗೆ (ಜಿಮ್ಸ್‌) ದಾಖಲಿಸುತ್ತಾರೆ. ಅಲ್ಲಿಂದ ಕೊರೋನಾ ಸೋಂಕು ಶಂಕೆಯಿದ್ದರೂ ರೋಗಿಯನ್ನು ಹೈದರಾಬಾದ್‌ಗೆ ಕಳುಹಿಸಲಾಗಿದೆ. ಅವರು ಅಪೋಲೊ ಆಸ್ಪತ್ರೆ, ಕೇರ್‌ ಆಸ್ಪತ್ರೆ ಸೇರಿದಂತೆ ಮೂರು-ನಾಲ್ಕು ಆಸ್ಪತ್ರೆಗಳಲ್ಲಿ ರೋಗಿಗೆ ಚಿಕಿತ್ಸೆಗೆ ಪ್ರಯತ್ನಿಸಿದ್ದಾರೆ. ಕೊರೋನಾ ಶಂಕಿತ ವ್ಯಕ್ತಿಯ ಬಗ್ಗೆ ಇಷ್ಟುನಿರ್ಲಕ್ಷ್ಯ ವಹಿಸಿರುವುದು ಗಂಭೀರ ವಿಚಾರ ಎಂದು ಹೇಳಿದರು.

 

ಎಲ್ಲ ಜಿಲ್ಲೆಯಲ್ಲೂ ಕೊರೋನಾ ಲ್ಯಾಬ್‌: ಬಿಎಸ್‌ವೈ

ದೇಶದಲ್ಲೇ ಕೊರೋನಾಗೆ ಮೊದಲ ಬಲಿ ನಮ್ಮ ರಾಜ್ಯದಲ್ಲಿ ಆಗಿರುವುದಕ್ಕೆ ತಲೆ ತಗ್ಗಿಸುವಂತಾಗಿದೆ. ಕಲಬುರಗಿ ಪ್ರಕರಣ ಸೇರಿದಂತೆ ರಾಜ್ಯಾದ್ಯಂತ ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮವನ್ನೂ ಕೈಗೊಳ್ಳುತ್ತೇವೆ. ಎಲ್ಲಾ ಜಿಲ್ಲೆಗಳಲ್ಲೂ ಪ್ರಯೋಗಾಲಯ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ಕೊರೋನಾ ಬಗೆಗಿನ ಆರೋಗ್ಯ ಸಚಿವ ಬಿ.ಶ್ರೀರಾಮುಲು ಉತ್ತರಕ್ಕೆ ಪೂರಕವಾಗಿ ಮಾತನಾಡಿದ ಅವರು, ಸೋಂಕು ಹರಡುವುದನ್ನು ತಡೆಗಟ್ಟಲು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆ ಬೀಳುವುದಿಲ್ಲ. ದುಬಾರಿ ಬೆಲೆಗೆ ಮಾಸ್ಕ್‌ ಮತ್ತಿತರ ವೈದ್ಯಕೀಯ ವಸ್ತುಗಳನ್ನು ಮಾರಾಟ ಮಾಡುವ ಔಷಧಿ ಅಂಗಡಿಗಳ ಲೈಸೆನ್ಸ್‌ ರದ್ದು ಮಾಡಲಾಗುವುದು. ಆರೋಗ್ಯ ಸಚಿವರು ತಜ್ಞ ವೈದ್ಯರೊಂದಿಗೆ ಕಲಬುರಗಿ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.