ಲಕ್ಕಿ ಅಲಿ ಮೇಲಿನ ಅತಿಕ್ರಮ ಪ್ರವೇಶ ಪ್ರಕರಣದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ ದಾಖಲಿಸಿದ್ದ ದೂರಿನಲ್ಲಿ ಲಕ್ಕಿ ಅಲಿ ಜಮೀನಿಗೆ ನುಗ್ಗಿ ನಷ್ಟ ಉಂಟುಮಾಡಿದ್ದಾರೆ ಎಂಬ ಆರೋಪವಿತ್ತು. ಲಕ್ಕಿ ಅಲಿ, ರೋಹಿಣಿ ಕುಟುಂಬದವರ ವಿರುದ್ಧ ಭೂ ಒತ್ತುವರಿ ಆರೋಪದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಭೂ ವಿವಾದದ ಹಿನ್ನೆಲೆಯಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಲಕ್ಕಿ ಅಲಿ ಪರ ವಕೀಲರು ವಾದಿಸಿದರು.

ಬಾಲಿವುಡ್‌ ಗಾಯಕ ಲಕ್ಕಿ ಅಲಿ ಮತ್ತು ಅವರ ಬೆಂಬಲಿಗರು ಬೆಂಗಳೂರಿನ ವಾಸುದೇವಪುರದಲ್ಲಿರುವ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಕಾಂಪೌಂಡ್‌ ಒಡೆದು, ಗಿಡಗಳನ್ನು ನಾಶಪಡಿಸಿ ಸುಮಾರು 75 ಲಕ್ಷ ರು. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ ದಾಖಲಿಸಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಲಕ್ಕಿ ಅಲಿ ಮತ್ತು ಮೈಲಪ್ಪನಹಳ್ಳಿಯ ಶ್ರೀನಿವಾಸ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಶ್ರೀರಾಮ್‌ ತಿಮ್ಮಪ್ಪ ನಾಯಕ್‌ ಅವರು, ದೂರುದಾರೆಯಾದ ಬುಜ್ಜಮ್ಮ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆಯಾಗಿದ್ದಾರೆ. ಹೀಗಾಗಿ, ಪೊಲೀಸರು ಲಕ್ಕಿ ಅಲಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವಾದಿಸಿದರು.

2024ರ ಬೆಲ್ಲಿ & ಶೂಸ್ ಟ್ರೆಂಡ್ಸ್: ಮಹಿಳೆಯರ ಫ್ಯಾಷನ್ ಧಮಾಕ!

ಲಕ್ಕಿ ಅಲಿ ಅವರಿಗೆ ಸೇರಿದ ಟ್ರಸ್ಟ್‌ ಹೆಸರಿನಲ್ಲಿ 87 ಎಕರೆ ಆಸ್ತಿ ಇದೆ. ಇದರ ಸಮೀಪ ರೋಹಿಣಿ ಅವರ ಪತಿ ಜಿ.ಸುಧೀರ್‌ ರೆಡ್ಡಿ ಅವರು ಲಕ್ಕಿ ಅಲಿ ಸಹೋದರನಿಂದ ಆಸ್ತಿ ಖರೀದಿಸಲಾಗಿದೆ ಎಂದು ಹೇಳುತ್ತಿದಾರೆ. ಈ ಸಂಬಂಧ 2016ರಿಂದ ರೋಹಿಣಿ ಅವರ ಪತಿ ಜಿ. ಸುಧೀರ್‌ ರೆಡ್ಡಿ ಮತ್ತು ಲಕ್ಕಿ ಅವರ ನಡುವೆ ಸಿವಿಲ್‌ ಕೇಸ್ ನಡೆಯುತ್ತಿದೆ. ಬುಜ್ಜಮ್ಮ ಅವರ ಸೊಸೆಯಾಗಿರುವ ರೋಹಿಣಿ ಸಿಂಧೂರಿ ಅವರು ಅಧಿಕಾರ ಬಳಸಿ ಕಿರುಕುಳ ನೀಡುತ್ತಿದ್ದಾರೆ. ಖಾಸಗಿ ದಾರಿಯನ್ನು ಸಾರ್ವಜನಿಕ ಹಾದಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಗೇಟ್‌ ಬೀಗ ತೆಗೆಯಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರು ಖಾಸಗಿ ವಾಹನದಲ್ಲಿ ಬಂದು ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ಸಿಸಿಟಿವಿ ವಿಡಿಯೊ ಸಹ ನಮ್ಮ ಬಳಿ ಇದೆ ಎಂದರು.

ಐಎಎಸ್‌ ಅಧಿಕಾರಿ ಏಕೆ ಲಕ್ಕಿ ಅಲಿ ಹಿಂದೆ ಬಿದ್ದಿದ್ದಾರೆ? ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು ಮಾಹಿತಿ ಪಡೆದು ವಾದಿಸಲಾಗುವುದು ಎಂದು ತಿಳಿಸಿದರು. ಹೀಗಾಗಿ, ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದ ಪೀಠ, ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿತು.

ಬೆಂಗಳೂರಿನ ಅತಿ ಕಡಿಮೆ ಬೆಲೆಯ ವಿಸ್ಕಿ ಯಾವುದು? ರೇಟ್‌ ಅಂತೂ ತುಂಬಾ ಕಮ್ಮಿ!

ಲೋಕಾಗೆ ದೂರು ಕೊಟ್ಟಿದ್ದ ಲಕ್ಕಿ:
ಬೆಂಗಳೂರಿನ ಯಲಹಂಕ ಉಪನಗರ ಬಳಿ ಬಾಲಿವುಡ್‌ ಗಾಯಕ ಲಕ್ಕಿ ಅಲಿ ಅವರ ಟ್ರಸ್ಟ್‌ಗೆ ಸಂಬಂಧಿಸಿದ ಭೂಮಿಯನ್ನು ಐಎಎಸ್ ಅಧಿಕಾರಿ ರೋಹಿಣಿ ಕುಟುಂಬಸ್ಥರು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಸಂಸ್ಥೆಗೆ ಈ ವರ್ಷದ ಜೂನ್‌ ತಿಂಗಳಲ್ಲಿ ದೂರು ದಾಖಲಿಸಿದ್ದರು.

ರೋಹಿಣಿ ಸಿಂಧೂರಿ ಕುಮ್ಮಕ್ಕಿನಿಂದ ಅವರ ಪತಿ ಸುಧೀರ್ ರೆಡ್ಡಿ, ಬಾಮೈದ ಮಧುಸೂಧನ್ ರೆಡ್ಡಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಯಲಹಂಕ ಉಪನಗರ ಠಾಣೆಯ ಎಸಿಪಿ ಮಂಜುನಾಥ್, ತಾಲೂಕು ಸರ್ವೇ ಅಧಿಕಾರಿಯಾದ ಮನೋಹರ್‌ ಎಂಬುವರೂ ಸಹ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ದೂರು ಕೊಟ್ಟಿದ್ದರು.

ಯಲಹಂಕ ಉಪನಗರ ಬಳಿಯಿರುವ ತಮ್ಮ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿಗೆ ರೋಹಿಣಿ ಸಿಂಧೂರಿ ಸಹಕಾರ ಕೊಟ್ಟಿದ್ದು, ಆ ಮೂಲಕ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.