ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ, ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದ ಹೈಕೋರ್ಟ್ , ಬೈಕ್ ಟ್ಯಾಕ್ಸಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆದರೆ ಈ ಆದೇಶ ರದ್ದುಗೊಳಿಸಿದ ಹೈಕೋರ್ಟ್, ಇದೀಗ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ
ಬೆಂಗಳೂರು (ಜ.23) ಬೆಂಗಳೂರು ಪ್ರಯಾಣಿಕರಿಗೆ ಹೈಕೋರ್ಟ್ ಗುಡ್ ನ್ಯೂಸ್ ನೀಡಿದೆ. ಬೈಕ್ ಟ್ಯಾಕ್ಸಿ ಕುರಿತು ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬೈಕ್ ಟ್ಯಾಕ್ಸಿಗೆ ಕಾನೂನಿನಡಿ ಸರ್ಕಾರ ಅನುಮತಿ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ. ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನಿಷೇಧಿಸಿದ್ದನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಎತ್ತಿಹಿಡಿದಿತ್ತು. ಆದರೆ ಇದೀಗ ವಿಭಾಗೀಯ ವೀಠ ಆದೇಶ ರದ್ದುಗೊಳಿಸಿ, ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ.
ಓಲಾ ಉಬರ್ ಅಗ್ರೇಟರ್ ಅರ್ಜಿ ಮಾನ್ಯ
ಒಲಾ, ಊಬರ್ ಮತ್ತಿತರ ಅಗ್ರಿಗೇಟರ್ ಗಳು ಸಲ್ಲಿಸಿದ ಮೇಲ್ಮನವಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಮಾನ್ಯ ಮಾಡಿದೆ. ಬೈಕ್ ಮಾಲಕರು ಅಥವಾ ಅಗ್ರಿಗೇಟರ್ ಗಳು ಸಾರಿಗೆ ವಾಹನಗಳನ್ನಾಗಿ ಬಳಸಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಅರ್ಹ ಮನವಿಗಳನ್ನು ಸರ್ಕಾರ ಪುರಸ್ಕರಿಸಿ ಅನುಮತಿ ನೀಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿದೆ. ಇದರಿಂದ ಬೆಂಗಳೂರಿನ ಪ್ರಯಾಣಿಕರು ಇದೀಗ ಬೈಕ್ ಟ್ಯಾಕ್ಸಿ ಮೂಲಕ ಪ್ರಯಾಣಕ್ಕೆ ಅವಕಾಶ ನೀಡಿದೆ. ಇಷ್ಟೇ ಅಲ್ಲ ಒಂದೆಡೆ ಮೆಟ್ರೋ ದರ ಏರಿಕೆ, ಪ್ರಯಾಣ ಏರಿಕೆಯಿಂದ ಬೆಂಗಳೂರು ಪ್ರಯಾಣಿಕರಿಗೆ ಬೈಕ್ ಟ್ಯಾಕ್ಸಿ ವರವಾಗಲಿದೆ.
ಬೈಕ್ ಟ್ಯಾಕ್ಸಿ ಜಟಾಪಟಿಗೆ ಹೈಕೋರ್ಟ್ ಫುಲ್ ಸ್ಟಾಪ್
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಹಾವಳಿ ಹೆಚ್ಚಾಗಿದೆ ಎಂದು ಕೆಲ ಸಂಸ್ಥೆಗಳು ದೂರು ನೀಡಿತ್ತು. ಇತ್ತ ಆಟೋ, ಕ್ಯಾಬ್ ಸೇವೆಗಳು ದುಬಾರಿಯಾಗುತ್ತಿದ್ದಂತೆ ಬೈಕ್ ಟ್ಯಾಕ್ಸಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳ ಪ್ರಯಾಣಿರಿಗೆ ವರವಾಗಿತ್ತು. ಆದರೆ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನಿಷೇಧಿಸಿ ಆದೇಶ ನೀಡಿತ್ತು. ಇತ್ತ ಈ ಆದೇಶವನ್ನು ಪ್ರಶ್ನಿಸಿ ಬೈಕ್ ಟ್ಯಾಕ್ಸಿ ಅಗ್ರೇಟರ್ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದಿತ್ತು. ಹೀಗಾಗಿ ಅಗ್ರಿಗೇಟರ್ ಕಂಪನಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಕುರಿತು ವಿಚಾನೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಇಂದು ಮಹತ್ವದ ಆದೇಶ ನೀಡಿದೆ. ಈ ಮೊದಲು ಏಕಸದಸ್ಯ ಪೀಠ ನೀಡಿದ್ದ ಆದೇಶ ರದ್ದುಗೊಳಿಸಿದೆ. ಈ ಮೂಲಕ ಬೈಕ್ ಟ್ಯಾಕ್ಸಿಗೆ ಕರ್ನಾಟಕದಲ್ಲಿ ಅನುಮತಿ ನೀಡಿದೆ.
ಬೈಕ್ ಟ್ಯಾಕ್ಸಿಗೆ ವಿರೋಧ ಯಾಕೆ?
ಹಲವರು ಅಗ್ರೇಟರ್ ಕಂಪನಿಗಳ ಜೊತೆ ಆನ್‌ಲೈನ್ ನೋಂದಣಿ ಮಾಡಿಕೊಂಡು ಖಾಸಗಿ ನಂಬರ್ ಪ್ಲೇಟ್ ಬೈಕ್‌ನಲ್ಲೂ ಸೇವೆ ನೀಡುತ್ತಿದ್ದರು. ಯಾವುದೇ ಅನುಮತಿ ಇಲ್ಲದೆ ಬೈಕ್ ಟ್ಯಾಕ್ಸಿ ಸೇವೆಗಳು ಹೆಚ್ಚಾಗಿ ನೀಡಲಾಗುತ್ತಿತ್ತು. ಹೀಗಾಗಿ ವಿರೋಧ ವ್ಯಕ್ತವಾಗಿತ್ತು. ಟ್ಯಾಕ್ಸಿ ಅಡಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆ ಬರುವುದಿಲ್ಲ ಎಂದು ಸರ್ಕಾರ ಕೂಡ ಬ್ಯಾನ್ ಮಾಡಿತ್ತು. ಇದೀಗ ಹೈಕೋರ್ಟ್, ಲೈಸೆನ್ಸ್ ನೀಡಲು ಸೂಚಿಸಿದೆ.


