Bike Taxi Service In Bangalore: ಬೆಂಗಳೂರಿನಲ್ಲಿ ಉಬರ್, ರಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳಿಗೆ ನಿಷೇಧ ಹೇರಲಾಗಿತ್ತು. ಈಗ ಮತ್ತೆ ಈ ಸೇವೆಗಳು ಲಭ್ಯ ಇವೆಯೇ? 

ಬೆಂಗಳೂರು: ಎರಡು ತಿಂಗಳ ಬಿಡುವಿನ ನಂತರ ಬೆಂಗಳೂರಿನಲ್ಲಿ ಉಬರ್, ರಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳನ್ನು ಪುನರಾರಂಭಿಸಿವೆ. ರಾಜ್ಯ ಸರ್ಕಾರವು ಜೂನ್ 16 ರಿಂದ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯ ಮೇಲೆ ನಿಷೇಧ ಹೇರಿತ್ತು, ಇದರಿಂದಾಗಿ ನಗರದ ಆರ್‌ಟಿಒಗಳಿಂದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದರಿಂದ, ಭಾರೀ ದಂಡ ವಿಧಿಸಿದ್ದರಿಂದ ಒಕ್ಕೂಟಗಳು ಸೇವೆಗಳನ್ನು ಸ್ಥಗಿತಗೊಳಿಸಿದ್ದವು. ಹೀಗಾಗಿ ಒಂದಷ್ಟು ಹೋರಾಟ, ಪ್ರತಿಭನಟನೆಗಳು ನಡೆದಿತ್ತು.

ಒಂದು ತಿಂಗಳು ನಂತರ ತೀರ್ಪು?

ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯ ಮೇಲಿನ ಸಂಪೂರ್ಣ ನಿಷೇಧ ಮಾಡಿದ್ದಕ್ಕಾಗಿ ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ಗೆ ಒಕ್ಕೂಟಗಳು ಮನವಿ ಮಾಡಿದ್ದವು. ಕಳೆದ ಬುಧವಾರ, ಕರ್ನಾಟಕ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಒಕ್ಕೂಟಗಳಿಂದ ಸಲ್ಲಿಸಲಾದ ರಿಟ್ ಮನವಿಗಳ ಕುರಿತಾದ ವಿಚಾರಣೆಯನ್ನು ಸೆಪ್ಟೆಂಬರ್ 22 ರವರೆಗೆ ಮುಂದೂಡಿತು. ಟ್ಯಾಕ್ಸಿಗಳಿಗೆ ಹೋಲಿಕೆ ಮಾಡಿದರೆ ಬೈಕ್‌ ಸೇವೆ ಕಡಿಮೆ ಬೆಲೆಗೆ ದೊರಕುವುದು. ಹೀಗಾಗಿ ಇಂದು ಸಾಕಷ್ಟು ಜನರು ಬೈಕ್‌ ಸೇವೆಗಳನ್ನು ನಂಬಿಕೊಂಡಿದ್ದಾರೆ. ಹೀಗಾಗಿ ಈ ವಿಷಯವು ಜನರ ಜೀವನದ ಮೇಲೆ ಪರಿಣಾಮ ಬೀರುವುದು. ಆದ್ದರಿಂದ ರಾಜ್ಯ ಸರ್ಕಾರವು ಈ ಬಗ್ಗೆ ಗಂಭೀರವಾಗಿ ಚರ್ಚಿಸಬೇಕೆಂದು ಸೂಚನೆ ನೀಡಿತ್ತು.

ಇಂದು ಎಷ್ಟು ಜನರು ಬೈಕ್‌ ಸೇವೆ ಬಳಸ್ತಾರೆ?

ನಿಷೇಧ ಮಾಡುವ ಮೊದಲು, ನಗರದಲ್ಲಿ ಸುಮಾರು 1.20 ಲಕ್ಷ ಖಾಸಗಿ ಬೈಕ್‌ಗಳು ಒಕ್ಕೂಟಗಳ ಜೊತೆಯಲ್ಲಿ ಸಂಯೋಜಿತವಾಗಿದ್ದವು, ರಾಜ್ಯಾದ್ಯಂತ ಆರು ಲಕ್ಷ ಜನರು ತಮ್ಮ ಜೀವನೋಪಾಯಕ್ಕಾಗಿ ಬೈಕ್ ಟ್ಯಾಕ್ಸಿಗಳ ಮೇಲೆ ಅವಲಂಬಿತರಾಗಿದ್ದಾರೆ.

ರಾಮಲಿಂಗ ರೆಡ್ಡಿ ಏನು ಹೇಳ್ತಾರೆ?

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಈ ಬಗ್ಗೆ ಮಾತನಾಡಿದ್ದು, "ಬುಧವಾರ, ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ಒಂದು ತಿಂಗಳಿಗೆ ಮುಂದೂಡಿತು, ರಾಜ್ಯ ಸರ್ಕಾರವು ನೀತಿ ಚೌಕಟ್ಟಿನ ಕುರಿತು ಸ್ಪಷ್ಟ ನಿಲುವನ್ನು ತಿಳಿಸುವಂತೆ ಸೂಚನೆ ನೀಡಿದೆ, ಉಳಿದ ಅನೇಕ ರಾಜ್ಯಗಳಲ್ಲಿ ಬೈಕ್ ಹಾಗೂ ಟ್ಯಾಕ್ಸಿಗಳು ರನ್‌ ಆಗುತ್ತಿವೆ ಎಂದು ಗಮನಿಸಿದೆ. ಟ್ಯಾಕ್ಸಿ ಒಕ್ಕೂಟಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಕೋರ್ಟ್ ಅನುಮತಿ ನೀಡಿಲ್ಲ. ನಾನು ಅಡ್ವೊಕೇಟ್ ಜನರಲ್‌ರೊಂದಿಗೆ ಮಾತನಾಡಿ ಅವರ ಅಭಿಪ್ರಾಯ ಏನೆಂದು ಕೇಳುತ್ತೇನೆ" ಎಂದು ಹೇಳಿದ್ದಾರೆ. ಉಬರ್ ಮತ್ತು ರಾಪಿಡೋ ಸೇವೆಗಳ ಪುನರಾರಂಭದ ಕುರಿತು ಅವರು ಕಾಮೆಂಟ್‌ ಮಾಡಿಲ್ಲ.

ಮೋಟಾರ್‌ ವೆಹಿಕಲ್‌ ಆಕ್ಟ್‌ ಪ್ರಕಾರ ಊಬರ್‌, ಟ್ಯಾಕ್ಸಿಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಬೈಕ್‌ಗಳು ವೈಯಕ್ತಿಕವಾಗಿ ಬಳಕೆ ಆಗುತ್ತಿವೆಯೇ ಹೊರತು, ಕಮರ್ಷಿಯಲ್‌ ಆಗಿ ಬಳಕೆ ಆಗುತ್ತಿರಲಿಲ್ಲ ಎಂದು ಕರ್ನಾಟಕ ಸರ್ಕಾರವು ವಾದ ಮಾಡಿತ್ತು.