ಬೆಂಗಳೂರು (ಮೇ.25): ರಾಜ್ಯದಲ್ಲಿ ಕೊರೋನಾ ಅಟ್ಟಹಾಸದ ಆತಂಕ ಹೆಚ್ಚಾಗುತ್ತಲೇ ಇದ್ದು ಲಸಿಕೆ ಪ್ರಕ್ರಿಯೆ ಚುರುಕುಗೊಳಿಸುವತ್ತ ಸರ್ಕಾರ ಯತ್ನಿಸುತ್ತಿದೆ. ಆದರೆ ಆಗಸ್ಟ್‌ವರೆಗೂ ಲಸಿಕೆ ಅಭಾವ ಸಾಧ್ಯತೆ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ್ ಸುಳಿವು ನೀಡಿದ್ದಾರೆ. 

ಬೆಂಗಳೂರಿನಲ್ಲಿಂದು ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ್ ಲಸಿಕೆ ಅಭಿಯಾನ ಸರಿಯಾಗಿ ನಡೆಯಲು ಇನ್ನು ಎರಡು ತಿಂಗಳು ಬೇಕು. ರಾಜ್ಯದ ಬೇಡಿಕೆಗೆ ಅನುಗುಣವಾಗಿ ಲಸಿಕೆ ಸಿಗಲು 2  ತಿಂಗಳ ಸಮಯದ ಅಗತ್ಯವಿದೆ ಎಂದು ಹೇಳಿದರು. 

ಡಿಸಿಎಂ ಅಶ್ವತ್ಥ ನಾರಾಯಣ್ ಆಗಸ್ಟ್ ವರೆಗೂ ಲಸಿಕೆ ಪೂರೈಕೆ ಕಷ್ಟ ಎಂಬ ಸಂದೇಶ ನೀಡಿದ್ದಾರೆ. ಆಗಸ್ಟ್ ಗೆ ನಮ್ಮಲ್ಲಿ ಹೆಚ್ಚು ಲಸಿಕೆ ಪ್ರೊಡಕ್ಷನ್ ಆಗುತ್ತವೆ.  ಈಗ ಭಾರತ್ ಬಯೋಟೆಕ್, ಸೀರಂ, ಸ್ಪುಟ್ನಿಕ್ ಲಸಿಕೆ ಉತ್ಪಾದನೆ ಆಗುತ್ತಿದೆ. ಲಸಿಕೆ ಉತ್ಪಾದನೆಯ ವಿಸ್ತರಣೆಯನ್ನು ಆಯಾ ಕಂಪನಿಗಳು ಹೆಚ್ಚಳ ಮಾಡುತ್ತಿವೆ. ಇವೆಲ್ಲವೂ ಸರಿ ಹೋಗೋದಕ್ಕೆ ಕೆಲ ತಿಂಗಳುಗಳ ಸಮಯ ಬೇಕು ಎಂದರು.

ಬ್ಲ್ಯಾಕ್ ಫಂಗಸ್ ಮೂಲ ಪತ್ತೆಗೆ ಡಿಸಿಎಂ ಸೂಚನೆ : ತಜ್ಞ ವೈದ್ಯರಿಂದ ಅಧ್ಯಯನ

 ಆದ್ಯತಾ ವಲಯಕ್ಕೆ 18 ವರ್ಷ ಮೇಲ್ಪಟ್ಟವರಿಗೂ ರಾಜ್ಯದಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ತಿಂಗಳ ಕೊನೆಯವರೆಗೂ ಇವರಿಗೆ ಆದ್ಯತೆ ಮೇಲೆ ಲಸಿಕೆ ಕೊಡುತ್ತೇವೆ. ನಾವು ಒಂದು ದಿನವೂ ಲಸಿಕೆ‌ ಕೊಡುವುದು ನಿಲ್ಲಿಸಿಲ್ಲ. ಜನ ಸಾಮಾನ್ಯರಿಗೆ ಲಸಿಕೆ ಕೊಡುವ ಕೆಲಸ ಆಗುತ್ತಿಲ್ಲ. ಸರ್ಕಾರದ ಗುರಿ ಇರುವುದು ಈ ವರ್ಷದ ಕೊನೆಯ ಒಲಗೆ ಎಲ್ಲರಿಗೂ ಲಸಿಕೆ ನೀಡಬೇಕೆನ್ನುವುದಾಗಿದೆ ಎಂದರು.

ವರ್ಷಾಂತ್ಯದೊಳಗೆ ಎಲ್ಲಾ ನಾಗರೀಕರಿಗೂ ಒಂದು ಡೋಸ್ ಆದರು ಲಸಿಕೆ ನೀಡುವ ಗುರಿ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona