ಕಾಂಗ್ರೆಸ್ ಸರ್ಕಾರವು ಬೆಂಗಳೂರಿಗೆ 6ನೇ ಗ್ಯಾರಂಟಿ ಘೋಷಿಸಲು ಸಜ್ಜಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. ಇದರ ಜೊತೆಗೆ, ನೀಟ್ ಪರೀಕ್ಷೆ ಹಗರಣದ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ರೈತರಿಗೆ ಉತ್ತಮ ಪರಿಹಾರ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಮೇ 12): ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬೆನ್ನಲ್ಲೇ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಮಹತ್ವದ ಘೋಷಣೆಗೆ ಸಜ್ಜಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಸುಳಿವು ಪ್ರಕಾರ, ನಾಳೆ (ಬುಧವಾರ) ಬೆಂಗಳೂರಿಗೆ ಸಂಬಂಧಿಸಿದಂತೆ '6ನೇ ಗ್ಯಾರಂಟಿ'ಯನ್ನು ಸರ್ಕಾರ ಘೋಷಿಸಲಿದೆ ಎಂದು ತಿಳಿಸಿದ್ದಾರೆ.

ಏನಿದು 6ನೇ ಗ್ಯಾರಂಟಿ? ಭೂ ಗ್ಯಾರಂಟಿ ಸುಳಿವು:
ಬೆಂಗಳೂರಿನ ಅಭಿವೃದ್ಧಿ ಮತ್ತು ನಗರದ ಸಮಸ್ಯೆಗಳ ಕುರಿತು ನಡೆದ ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್, 'ಬೆಂಗಳೂರಿಗೆ ಸಂಬಂಧಿಸಿದಂತೆ ನಾಳೆ ಕೆಲವು ಪ್ರಮುಖ ಘೋಷಣೆಗಳನ್ನು ಮಾಡುತ್ತಿದ್ದೇವೆ. ನಗರಕ್ಕೆ ಯಾವೆಲ್ಲಾ ಸಹಾಯ ಮಾಡಬಹುದು ಮತ್ತು ಏನೆಲ್ಲಾ ಕೆಲಸಗಳು ಬಾಕಿ ಇವೆ ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಇದು 6ನೇ ಗ್ಯಾರಂಟಿಯಾಗಿದ್ದು, ಇದನ್ನು 'ಭೂ ಗ್ಯಾರಂಟಿ' ಎನ್ನಬಹುದು' ಎಂದು ತಿಳಿಸಿದರು.
ಕಳೆದ ಹಲವು ದಿನಗಳಿಂದ ಪೆಂಡಿಂಗ್ ಇದ್ದ ಪೆರಿಫೆರಲ್ ರಿಂಗ್ ರೋಡ್ (PRR) ಯೋಜನೆ ಮತ್ತು 38D ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಒಂದು ತೀರ್ಮಾನಕ್ಕೆ ಬರಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಾಳೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದರು. ಇದು ಬೆಂಗಳೂರಿನ ಭೂಮಾಲೀಕರಿಗೆ ಮತ್ತು ನಗರದ ಮೂಲಸೌಕರ್ಯಕ್ಕೆ ದೊಡ್ಡ ಮಟ್ಟದ ಬದಲಾವಣೆ ತರಲಿದೆ ಎನ್ನಲಾಗುತ್ತಿದೆ.
NEET ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರದ ವಿರುದ್ಧ ಕಿಡಿ:
ದೇಶವನ್ನೇ ಬೆಚ್ಚಿಬೀಳಿಸಿರುವ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ಡಿಕೆಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 'ಇದು ನಮಗೆಲ್ಲಾ ದೊಡ್ಡ ಅವಮಾನ. ಮಕ್ಕಳು ಬಹಳ ಕಷ್ಟಪಟ್ಟು ಓದಿ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಇಂತಹ ಹಗರಣಗಳು ನಡೆದಾಗ ವ್ಯವಸ್ಥೆಯ ಮೇಲಿನ ನಂಬಿಕೆಯೇ ಹೊರಟುಹೋಗುತ್ತದೆ. ಹಿಂದೆ ರಾಜ್ಯದಲ್ಲಿ ಪಿಎಸ್ಐ ಸ್ಕ್ಯಾಮ್ ಆದಾಗ ಬಿಜೆಪಿ ನಾಯಕರು ಏನೆಲ್ಲಾ ಮಾತನಾಡಿದ್ದರು ಎಂಬುದು ನೆನಪಿದೆ. ಈಗ ನೀಟ್ ಅಕ್ರಮದ ಬಗ್ಗೆ ಕರ್ನಾಟಕದ ಬಿಜೆಪಿ ಸಂಸದರು ಏಕೆ ಮೌನವಾಗಿದ್ದಾರೆ?' ಎಂದು ಪ್ರಶ್ನಿಸಿದರು. 'ಒಂದು ವೇಳೆ ಈ ಅಕ್ರಮ ರಾಜ್ಯದಲ್ಲಿ ಆಗಿದ್ದರೆ ಬಿಜೆಪಿಯವರು ಇಷ್ಟೊತ್ತಿಗೆ ಬಿಲ್ಡಿಂಗ್ ಮೇಲೆ ಹತ್ತಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು. ಈ ಅಕ್ರಮಕ್ಕೆ ಕೇಂದ್ರದ ಯಾವ ಸಚಿವರು ಜವಾಬ್ದಾರಿ ಎಂಬುದು ಬಹಿರಂಗವಾಗಬೇಕು' ಎಂದು ತಿವಿದರು.
ಬಿಡದಿ ಟೌನ್‌ಶಿಪ್ ವಿವಾದಕ್ಕೆ ತೆರೆ:
ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, 'ಅಲ್ಲಿ ಯಾರೂ ಕೃಷಿ ಮಾಡುತ್ತಿಲ್ಲ, ಕೃಷಿ ಭೂಮಿಯೂ ಇಲ್ಲ. ಕೇವಲ 10-20 ಜನರು ಮಾತ್ರ ಇರಬಹುದು. ನಾವು ಅವರಿಗೆ ದೇಶದಲ್ಲೇ ಇಲ್ಲದಂತಹ ಅತ್ಯುತ್ತಮ ಪರಿಹಾರದ ಸ್ಕೀಮ್ ನೀಡುತ್ತಿದ್ದೇವೆ. ಭೂಮಿ ನೀಡುವವರಿಗೆ ಶೇ. 35 ರಷ್ಟು ಜಾಗವನ್ನು ರಸ್ತೆಯ ಪಕ್ಕದಲ್ಲೇ ಅಭಿವೃದ್ಧಿಪಡಿಸಿ ನೀಡುತ್ತಿದ್ದೇವೆ. ಮುಂಬೈನಲ್ಲಿ ನನ್ನ ಸಂಬಂಧಿಕರ ಜಾಗಕ್ಕೆ ಕೇವಲ ಶೇ. 12 ರಷ್ಟು ಮಾತ್ರ ನೀಡಿದ್ದಾರೆ, ಆದರೆ ನಾವು ಇಲ್ಲಿ ಹೆಚ್ಚಿನ ಸೌಲಭ್ಯ ನೀಡುತ್ತಿದ್ದೇವೆ' ಎಂದು ಸ್ಪಷ್ಟಪಡಿಸಿದರು.
ರಾಜಕೀಯವಾಗಿ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಭೂಮಿಯನ್ನು ಡಿನೋಟಿಫೈ ಮಾಡುವುದಿಲ್ಲ. ಈಗಾಗಲೇ ಶೇ. 78 ರಷ್ಟು ಭೂಮಿಯ ಪೊಸಿಷನ್ ತೆಗೆದುಕೊಳ್ಳಲಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಇಷ್ಟವಿಲ್ಲದವರು ಹಳೆಯ ಕಾನೂನಿನಂತೆ ಕೋರ್ಟ್‌ಗೆ ಡೆಪಾಸಿಟ್ ಮಾಡಿ ಕಾನೂನು ಹೋರಾಟ ಮಾಡಲಿ, ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಡಿಕೆಶಿ ಖಡಕ್ ಸಂದೇಶ ರವಾನಿಸಿದರು.


