ಬೆಂಗಳೂರು ಅರಮನೆ ಜಾಗಕ್ಕೆ ಸುಪ್ರೀಂ ಆದೇಶದಂತೆ ಮೈಸೂರು ರಾಜರಿಗೆ ₹3011 ಕೋಟಿ ಕೊಡಲು ಸರ್ಕಾರದಿಂದ ತಗಾದೆ!
ಬೆಂಗಳೂರು ಅರಮನೆ ಜಾಗದ ಟಿಡಿಆರ್ ವಿಚಾರದಲ್ಲಿ ಸರ್ಕಾರ ಮತ್ತು ಮೈಸೂರು ರಾಜಮನೆತನದ ನಡುವಿನ ಕಾನೂನು ಹೋರಾಟ ಮುಂದುವರಿದಿದೆ. 3000 ಕೋಟಿ ರೂ. ಟಿಡಿಆರ್ ನೀಡಲು ಸರ್ಕಾರ ತಕರಾರು ತೆಗೆದಿದ್ದು, 1997ರ ಮೂಲ ವ್ಯಾಜ್ಯದ ಆದೇಶ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪುನಃ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ.
ಬೆಂಗಳೂರು (ಜ.16): ಬೆಂಗಳೂರು ಅರಮನೆ ಜಾಗಕ್ಕೆ ಸಂಬಂಧಿಸಿದಂತೆ ಮೈಸೂರು ರಾಜಮನೆತನಕ್ಕೂ ಹಾಗೂ ಕರ್ನಾಟಕದ ಸರ್ಕಾರದ ನಡುವೆ ಕಳೆದ 36 ವರ್ಷಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಿತ್ತು. ಬೆಂಗಳೂರು ಪ್ಯಾಲೇಸ್ ಸುತ್ತಲಿನ 15 ಎಕರೆ 17 ಗುಂಟೆ ಜಾಗಕ್ಕೆ 3,011 ಕೋಟಿ ರೂ. ಟಿಡಿಆರ್ ಅನ್ನು ಮೈಸೂರು ರಾಜಮನೆತನಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆದರೆ, ಇದೀಗ ಸರ್ಕಾರದಿಂದ ಹಣ ಕೊಡಲು ತಗಾದೆ ತೆಗೆದಿದ್ದು, ಮೈಸೂರು ರಾಜರು 1997ರ ಮೂಲ ವ್ಯಾಜ್ಯದ 2001ರ ಆದೇಶ ಉಲ್ಲಂಘನೆ ಮಾಡಿದ್ದಾರೆಂದು ಪುನಃ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಬೆಂಗಳೂರು ಪ್ಯಾಲೇಸ್ ರಸ್ತೆ ಟಿಡಿಆರ್ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಲು ಕ್ಯಾಬಿನೆಟ್ ನಿರ್ಣಯ ಕೈಗೊಳ್ಳಲಾಗಿದೆ. ಈ ಬೆಂಗಳೂರು ಅರಮನೆ ಜಾಗದ ಮಾಲೀಕತ್ವದ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದರೂ, ಅದರ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಜೊತೆಗೆ, ವಿಶೇಷ ಕಾನೂನಿನ ಮೂಲಕ ಜಾಗವನ್ನ ಸ್ವಾಧೀನ ಮಾಡಲಾಗಿದೆ. ಇದನ್ನ ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಹೀಗಾಗಿ, ಈ ಹಂತದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರದಿಂದ 3000 ಕೋಟಿ ರೂ. ಟಿಡಿಆರ್ ನೀಡಲು ಸಾಧ್ಯವಿಲ್ಲ. ಹೀಗಾಗಿ,ಸುಪ್ರೀಂ ಕೋರ್ಟ್‌ನಲ್ಲಿ ಜಾಗದ ಮಾಲೀಕತ್ವದ ಇತ್ಯರ್ಥವಾಗಬೇಕಿದೆ. ಆದ್ದರಿಂದ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕ್ಯಾಬಿನೆಟ್ ನಿರ್ಣಯ ಮಾಡಿದೆ ಎಂದು ತಿಳಿದುಬಂದಿದೆ.
Bengaluru: ಅರಮನೆ ಮೈದಾನದ ಜಾಗಕ್ಕಾಗಿ ಮೈಸೂರು ರಾಜಮನೆತನಕ್ಕೆ 3 ಸಾವಿರ ಕೋಟಿ ನೀಡಲಿರುವ ರಾಜ್ಯ ಸರ್ಕಾರ!
ಈ ಬಗ್ಗೆ ಕ್ಯಾಬಿನೆಟ್ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ಬೆಂಗಳೂರು ಅರಮನೆ ಸುತ್ತಲಿನ 15 ಎಕರೆ 17 ಗುಂಟೆ ಜಾಗ ಬಳಕೆಗೆ 3,011 ಕೋಟಿ ರೂ. ಟಿಡಿಆರ್ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಆದರೆ, ಪರಿಹಾರಕ್ಕೂ ಮುನ್ನ 1997ರ ಮೂಲ ವ್ಯಾಜ್ಯ ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅಲ್ಲದೆ ಮೂಲ ವ್ಯಾಜ್ಯದ ಅನ್ವಯ ಆ ಜಾಗದಲ್ಲಿ ಯಾವುದೆ ಕಟ್ಟಡ ನಿರ್ಮಾಣ ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ಇತ್ತು. ಇದನ್ನು ಮೈಸೂರು ರಾಜಮನೆತನದವರು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು ರಾಜರ ಬೆಂಗಳೂರು ಅರಮನೆ ಈ ವಿಷ್ಯ ನಿಮ್ಗೆ ಗೊತ್ತಿರ್ಲಿಕ್ಕಿಲ್ಲ!
ಅಂದರೆ, 1997ರಲ್ಲಿ ದಾಖಲಾದ ಮೂಲ ವ್ಯಾಜ್ಯದ ಮೇಲೆ ಸುಪ್ರೀಂ ಕೋರ್ಟ್ 2001ರ ಆದೇಶದಲ್ಲಿ ಆ ಜಾಗದಲ್ಲಿ ಯಾವುದೆ ಕಟ್ಟಡ ನಿರ್ಮಾಣ ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶ ನೀಡಿತ್ತು. ಆದರೆ ಅಲ್ಲಿ ಈಗ ಸಾಕಷ್ಟು ಕಟ್ಟಡಗಳು ನಿರ್ಮಾಣ ಆಗಿರುವುದರಿಂದ ಅವುಗಳ ತೆರವು ಮಾಡುವಂತೆ 2025ರ ಜನವರಿ 9ರಂದು ಮೈಸೂರು ರಾಜರ ಉತ್ತರಾಧಿಕಾರಿಯವರಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ, 2001ರ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯೂ ಆಗಿದ್ದು, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಕ್ಕೂ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದರು.