'ಎವೈ.42 ಸೋಂಕು ಹರಡಿಲ್ಲ, ತಾಂತ್ರಿಕ ಸಮಿತಿ ಹೇಳಿದರಷ್ಟೇ ನಿರ್ಬಂಧ!
* ಸೋಂಕು ಹರಡಿಲ್ಲ, ತಾಂತ್ರಿಕ ಸಮಿತಿ ಹೇಳಿದರಷ್ಟೇ ನಿರ್ಬಂಧ: ರಾಜ್ಯ ಸರ್ಕಾರ
* ಬ್ರಿಟನ್ ತಳಿ ಬಗ್ಗೆ ಸರ್ಕಾರ ಕಾದು ನೋಡುವ ತಂತ್ರ
* ಎವೈ.42 ರೂಪಾಂತರಿ ತಳಿ ಬಗ್ಗೆ ತಜ್ಞರ ತಂಡದಿಂದ ತನಿಖೆ: ಕೇಂದ್ರ ಸರ್ಕಾರ
ನವದೆಹಲಿ(ಅ.27): ಬ್ರಿಟನ್(Britain) ಹಾಗೂ ರಷ್ಯಾದಲ್ಲಿ(Russia) ಸೋಂಕಿತರ ಸಂಖ್ಯೆ ಸ್ಫೋಟಕ್ಕೆ ಕಾರಣವಾಗಿರುವ ಕೊರೋನಾ ವೈರಸ್‌ನ ‘ಎವೈ 4.2’ ರೂಪಾಂತರಿ ತಳಿ ಬಗ್ಗೆ ಕಾದು ನೋಡುವ ತಂತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ.
ರೂಪಾಂತರಿ ಬಗ್ಗೆ ತಜ್ಞರ ಸಮಿತಿ ನಿಗಾ ಇಟ್ಟಿದೆ. ದೇಶದಲ್ಲಿ ಪತ್ತೆಯಾಗುವ ಪ್ರಕರಣಗಳ ಬಗ್ಗೆ ಅಧ್ಯಯನ ಕೈಗೊಂಡು ತಂಡಗಳು ವಿಶ್ಲೇಷಣೆ ಮಾಡುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ(Mansukh Mandaviya) ದೆಹಲಿಯಲ್ಲಿ(Delhi) ತಿಳಿಸಿದ್ದಾರೆ. ಈ ನಡುವೆ, ಹೊಸ ರೂಪಾಂತರಿ ರಾಜ್ಯದಲ್ಲೂ 7 ಮಂದಿಗೆ ಪತ್ತೆಯಾಗಿದೆಯಾದರೂ ಸೋಂಕು ಹರಡಿಲ್ಲ. ಅದರ ಪರಿಣಾಮ ಹೇಗಿರಲಿದೆ ಎಂಬುದು ದೃಢಪಟ್ಟಿಲ್ಲ. ಕೊರೋನಾ ತಾಂತ್ರಿಕ ಸಲಹಾ ಸಮಿತಿ(TAC)ಯು ಸೂಚನೆ ನೀಡಿದರೆ ಮಾತ್ರ ನಿರ್ಬಂಧಗಳನ್ನು ಹೇರಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ತೀವ್ರ ನಿಗಾ:
ಭಾರತದಲ್ಲಿ ಹೊಸದಾಗಿ ಪತ್ತೆಯಾಗಿರುವ ಮಾರಕ ಡೆಲ್ಟಾವೈರಸ್‌ನ ಉಪತಳಿ ಎವೈ 4.2 ಬಗ್ಗೆ ತಜ್ಞರ ಸಮಿತಿ ನಿಗಾ ವಹಿಸಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಐಸಿಎಂಆರ್ ಮತ್ತು ಎನ್‌ಸಿಡಿಸಿ ತಂಡಗಳು ದೇಶದಲ್ಲಿ ಪತ್ತೆಯಾಗುವ ನೂತನ ತಳಿಗಳ ಬಗ್ಗೆ ಅಧ್ಯಯನ ಕೈಗೊಂಡು ವಿಶ್ಲೇಷಣೆ ಮಾಡುತ್ತವೆ. ಅದೇ ರೀತಿ ಎವೈ.4.2 ಬಗ್ಗೆಯೂ ತಜ್ಞರ ತಂಡ ತನಿಖೆ ನಡೆಸುತ್ತಿದೆ’ ಎಂದು ಹೇಳಿದರು.
ಸದ್ಯಕ್ಕೆ ನಿರ್ಬಂಧ ಇಲ್ಲ:
ರಾಜ್ಯದಲ್ಲಿ ಏಳು ಮಂದಿಗೆ ಕೊರೋನಾ(Coronavirus) ‘ಎವೈ 4.2’ ರೂಪಾಂತರಿ ತಳಿಯ ಸೋಂಕು ಪತ್ತೆಯಾಗಿದೆಯಾದರೂ ಸೋಂಕು ಹರಡಿಲ್ಲ. ಹೀಗಾಗಿ ಸದ್ಯಕ್ಕೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುತ್ತಿಲ್ಲ. ಕೊರೋನಾ ತಾಂತ್ರಿಕ ಸಲಹಾ ಸಮಿತಿಯು (ಟಿಎಸಿ) ಸೂಚನೆ ನೀಡಿದರೆ ಮಾತ್ರ ನಿರ್ಬಂಧಗಳನ್ನು ಹೇರಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಹೇಳಿದ್ದಾರೆ.
ಅಲ್ಲದೆ, ‘ಎವೈ 4.2’ ಡೆಲ್ಟಾರೂಪಾಂತರಿ ವೈರಾಣುವಿಗೆ ಹತ್ತಿರದ ವೈರಸ್. ಬ್ರಿಟನ್, ರಷ್ಯಾಗಳಲ್ಲಿ ಕೊರೋನಾ ಎರಡನೇ ಅಲೆಯು ಡೆಲ್ಟಾರೂಪಾಂತರಿಯಿಂದ ಉಂಟಾಗಿರಲಿಲ್ಲ. ಹೀಗಾಗಿ ಮೂರನೇ ಅಲೆ ವೇಳೆ ‘ಎವೈ 4.2’ ತಳಿ ಅಲ್ಲಿ ವೇಗವಾಗಿ ಹರಡುತ್ತಿದೆ. ರಾಜ್ಯದಲ್ಲಿ ಡೆಲ್ಟಾವೈರಸ್‌ನಿಂದಲೇ ಎರಡನೇ ಅಲೆ ಉಂಟಾಗಿದ್ದರಿಂದ ‘ಎವೈ 4.2’ ಪರಿಣಾಮ ಹೇಗಿರಲಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ’ ಎಂದು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯದಲ್ಲಿ ಪತ್ತೆಯಾಗಿರುವ ಎವೈ 4.2 ಸೋಂಕಿತರು ಗುಣಮುಖರಾಗಿದ್ದಾರೆ. ‘ಬೆಂಗಳೂರಿನಲ್ಲಿ ಮೂರು ಮಂದಿ ಸೇರಿದಂತೆ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಅವರಿಂದ ಬೇರೆಯವರಿಗೂ ಸೋಂಕು ಹರಡಿಲ್ಲ. ಹೊಸ ತಳಿಯ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಕಂಟೈನ್‌ಮೆಂಟ್ ವಲಯಗಳಲ್ಲೂ ಈ ವೈರಾಣು ಪತ್ತೆಯಾಗಿಲ್ಲ. ಒಂದು ವೇಳೆ ಎವೈ 4.2 ಪ್ರಕರಣಗಳು ಹೆಚ್ಚಾದರೆ ಕಂಟೈನ್‌ಮೆಂಟ್, ಪರೀಕ್ಷೆ ಹೆಚ್ಚಳ, ಐಸೊಲೇಷನ್ ಸೇರಿದಂತೆ ಅಗತ್ಯ ನಿರ್ಬಂಧಗಳನ್ನು ವಿಧಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಸೋಂಕು ಹರಡುವಿಕೆ ಕಡಿಮೆ ಇದೆ:
ಬ್ರಿಟನ್, ರಷ್ಯಾ, ಇಸ್ರೇಲ್ ದೇಶಗಳಲ್ಲಿ ಎವೈ 4.2 ವೈರಾಣು ಹೆಚ್ಚು ಪತ್ತೆಯಾಗಿದೆ. ರಾಜ್ಯದಲ್ಲಿ ಹಲವು ತಿಂಗಳ ಹಿಂದೆಯೇ ಪ್ರಕರಣಗಳು ಉಂಟಾಗಿದ್ದರೂ ಹೆಚ್ಚು ಮಂದಿಗೆ ಹರಡಿಲ್ಲ. ರಾಜ್ಯದಲ್ಲಿ ಕೊರೋನಾ ಸೋಂಕಿನ ಹರಡುವಿಕೆ ದರವೂ ಕಡಿಮೆ ಇದೆ. ಇನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಯಥಾಪ್ರಕಾರವಾಗಿ ನಡೆಯುತ್ತಿದೆ. ಪ್ರತಿ 100 ಮಂದಿ ಸೋಂಕಿತರಲ್ಲಿ ಶೇ.10 ಮಂದಿಯ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ತಜ್ಞರು ಸಲಹೆ ನೀಡಿದರೆ ಇವುಗಳ ಪ್ರಮಾಣವನ್ನೂ ಹೆಚ್ಚಳ ಮಾಡಲಾಗುವುದು ಎಂದರು.
ತಜ್ಞರ ತಂಡದಿಂದ ತನಿಖೆ
ದೇಶದಲ್ಲಿ ಹೊಸದಾಗಿ ಪತ್ತೆಯಾಗಿರುವ ಮಾರಕ ಡೆಲ್ಟಾವೈರಸ್‌ನ ಉಪತಳಿ ‘ಎವೈ 4.2’ ಬಗ್ಗೆ ತಜ್ಞರ ಸಮಿತಿ ನಿಗಾ ವಹಿಸಿದೆ. ದೇಶದಲ್ಲಿ ಪತ್ತೆಯಾಗುವ ನೂತನ ತಳಿಗಳ ಬಗ್ಗೆ ಅಧ್ಯಯನ ಕೈಗೊಂಡು ತಜ್ಞರು ವಿಶ್ಲೇಷಣೆ ಮಾಡುತ್ತಾರೆ. ಅದೇ ರೀತಿ ‘ಎವೈ.4.2’ ಬಗ್ಗೆಯೂ ತಜ್ಞರ ತಂಡ ತನಿಖೆ ನಡೆಸುತ್ತಿದೆ.
- ಮನ್ಸುಖ್ ಮಾಂಡವೀಯ, ಕೇಂದ್ರ ಆರೋಗ್ಯ ಸಚಿವ
ಇದು ಹಳೆ ತಳಿ, ಪರಿಣಾಮ ಸಾಧ್ಯತೆ ಇಲ್ಲ: ತಜ್ಞರು
- ‘ಎವೈ 4.2’ ರೂಪಾಂತರಿ ಹೊಸತಲ್ಲ, 2ನೇ ಅಲೆಗೆ ಕಾರಣವಾದ ಡೆಲ್ಟಾವೈರಸ್‌ನ ಉಪತಳಿ ಇದು
- ಆಲ್ಫಾ, ಡೆಲ್ಟಾತಳಿಯಲ್ಲಿ ಸೋಂಕು ಹರಡುವಿಕೆ ಪ್ರಮಾಣ 60% ಇತ್ತು. ಹೊಸ ತಳಿಯಲ್ಲಿ 10% ಇದೆ
- 2ನೇ ಅಲೆ, ಲಸಿಕೆಯಿಂದ ಸೃಷ್ಟಿಯಾದ ಪ್ರತಿಕಾಯಗಳಿಂದ ಈ ವೈರಸ್ ಗಂಭೀರವಾಗಿ ಹರಡುವುದಿಲ್ಲ
- ಹೊಸ ರೂಪಾಂತರಿ ತಳಿಯ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿ ಮೂರು ತಿಂಗಳೇ ಕಳೆದಿವೆ
- ಈವರೆಗಿನ ಸಂಶೋಧನೆ ಪ್ರಕಾರ, ಇವು ಹೆಚ್ಚು ಪ್ರಭಾವಶಾಲಿಯಲ್ಲ. ಹೀಗಾಗಿ ಆತಂಕ ಬೇಡ
- ಬ್ರಿಟನ್‌ನಲ್ಲಿ 2ನೇ ಅಲೆಗೆ ಡೆಲ್ಟಾವೈರಸ್ ಕಾರಣವಾಗಿರಲಿಲ್ಲ. ಈಗ ಅಲ್ಲಿ ಎವೈ ಕಾಣಿಸಿಕೊಂಡಿದೆ
- ರಾಜ್ಯದ ಜನರು ಇನ್ನೂ 3-4 ತಿಂಗಳು ಕಟ್ಟೆಚ್ಚರ ವಹಿಸಬೇಕು. ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು