ಬೆಂಗಳೂರು (ಸೆ.17):  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ನಾಡಿನ ಕೃಷಿ ಹಾಗೂ ಕೃಷಿಯೇತರ ಕ್ಷೇತ್ರ ಚೇತರಿಕೆಗಾಗಿ 39,300 ಕೋಟಿ ರು. ಸಾಲ ನೀಡುವ ಪ್ರಕ್ರಿಯೆ ಆರಂಭಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಸಹಕಾರ ಇಲಾಖೆ ವತಿಯಿಂದ ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ‘ಕೋವಿಡ್‌-19 ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಆರ್ಥಿಕ ಸ್ಪಂದನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಗೆ ಮತ್ತೆ ಮುಜುಗರ : ಸರ್ಕಾರದ ವಿರುದ್ಧವೇ ಮಾತಾಡಿದ ವಿಶ್ವನಾಥ್ ..

ಹೈನುಗಾರಿಕೆ, ಮೀನುಗಾರಿಕೆ ಸಾಲಕ್ಕಾಗಿ 2020-21ನೇ ಸಾಲಿನಲ್ಲಿ 38 ಸಾವಿರ ಜನರಿಗೆ 100 ಕೋಟಿ ರು. ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಈವರೆಗೆ 34,927 ಜನರಿಗೆ 60.30 ಕೋಟಿ ರು. ವಿತರಿಸಲಾಗಿದೆ. ಆದರೆ, ಈ ವರ್ಷ ಉಂಟಾಗಿರುವ ಆರ್ಥಿಕ ಸಂಕಷ್ಟದ ಪರಿಣಾಮ ತೀವ್ರವಾಗಿದೆ. ಎಲ್ಲ ಕ್ಷೇತ್ರ ಚೇತರಿಕೆಗಾಗಿ ಹೆಚ್ಚಿನ ಸಾಲ ನೀಡಲಾಗುತ್ತಿದೆ. ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಕ್ಕೆ ಒಟ್ಟು 39,300 ಕೋಟಿ ರು. ಸಾಲ ನೀಡಲು ನಿರ್ಧರಿಸಲಾಗಿದೆ ಎಂದರು.

ದೇಶದಲ್ಲಿ ಸಹಕಾರ ಕ್ಷೇತ್ರ ಹೆಮ್ಮರವಾಗಿ ಬೆಳೆದಿದೆ. ಕೋವಿಡ್‌-19ರ ಸಂಕಷ್ಟಗಳ ಕಾಲದಲ್ಲಿ ರಾಜ್ಯದಲ್ಲಿ ಸಹಕಾರ ಕ್ಷೇತ್ರದಿಂದ ಸರ್ಕಾರಕ್ಕೆ 53 ಕೋಟಿ ರು. ದೇಣಿಗೆ ಬಂದಿದ್ದು, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಒಂದೆಡೆ ಕೇಂದ್ರ ಸರ್ಕಾರ ಕೋವಿಡ್‌-19ರ ಸನ್ನಿವೇಶದಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಆತ್ಮ ನಿರ್ಭರ ಭಾರತ ಯೋಜನೆಯಡಿ 20 ಲಕ್ಷ ಕೋಟಿ ರು. ಘೋಷಿಸಿದೆ. ಇತ್ತ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಸಣ್ಣ, ಮಧ್ಯಮ ಹಾಗೂ ಅತಿ ಸಣ್ಣ ರೈತರಿಗೆ ಸಾಲ ಸೌಲಭ್ಯ ಸೇರಿದಂತೆ ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಗಳಿಗೆ ನೀಡಲು ಈಗ ಆರ್ಥಿಕ ಸ್ಪಂದನ ಕಾರ್ಯಕ್ರಮದಡಿ ಸುಮಾರು 39 ಸಾವಿರ ಕೋಟಿ ರು. ಮೊತ್ತದ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಡಿ ನಾಲ್ಕು ವಲಯಗಳಲ್ಲಿ ಸಾಲ ವಿತರಣೆ ಮಾಡಲಾಗುತ್ತಿದ್ದು, ಮೊದಲಿಗೆ ಬೆಂಗಳೂರು ವಲಯದ ಜಿಲ್ಲೆಗಳಲ್ಲಿ, ನಂತರ ಉಳಿದ ಮೂರು ವಲಯಗಳಿಗೆ ಈ ಯೋಜನೆಯಡಿ ಸಾಲ ವಿತರಿಸಲಾಗುವುದು. ಒಟ್ಟಿನಲ್ಲಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಈ ಯೋಜನೆಯ ಗುರಿ ಎಂದರು.

ಕೋವಿಡ್‌ ಸಂದರ್ಭದಲ್ಲಿ ಬಡವರಿಗೆ ಕುಡಿಯುವ ಹಾಲು ವಿತರಣೆ ಮಾಡಲು 79 ಕೋಟಿ ರು. ಕೆಎಂಎಫ್‌ಗೆ ಬಿಡುಗಡೆ ಮಾಡಿದ್ದೇವೆ. ಇನ್ನು ರೈತರಿಗೆ ಈ ಬಾರಿ 15,300 ಕೋಟಿ ರು. ಬೆಳೆ ಸಾಲ ನೀಡುವ ಗುರಿ ಇದೆ. ಈವರೆಗೆ 12.11 ಲಕ್ಷ ರೈತರಿಗೆ 7929.30 ಕೋಟಿ ರು. ಸಾಲವನ್ನು ಶೂನ್ಯ ಹಾಗೂ ಶೇ.3ರ ಬಡ್ಡಿದರದಲ್ಲಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

33 ಸಾವಿರ ಕೋಟಿ ರೂಪಾಯಿ ಸಾಲಕ್ಕೆ ರಾಜ್ಯ ನಿರ್ಧಾರ! ...

ಇನ್ನೂ ಹೈನುಗಾರರಿಗೆ ಹಾಗೂ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ 2 ಲಕ್ಷ ರು. ಸಾಲ ಕೊಡುವ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. 1885 ಕೋಟಿ ರು. ಅನುದಾನವನ್ನು ಕೆಎಂಎಫ್‌ ಮೂಲಕ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ತಲಾ 5 ರು. ನಂತೆ ಪ್ರೋತ್ಸಾಹ ಧನ ನೀಡುವ ಮೂಲಕ ರೈತರ ಹಾಗೂ ಜನರ ಅಭ್ಯುದಯಕ್ಕೆ ದುಡಿಯುತ್ತಿದ್ದಾರೆ ಎಂದು ಸಚಿವ ಸೋಮಶೇಖರ್‌ ಹೇಳಿದರು.

ಅಲ್ಲದೆ, ಮುಖ್ಯಮಂತ್ರಿಗಳ ಕೋವಿಡ್‌ ಪರಿಹಾರ ನಿಧಿಗೆ 53 ಕೋಟಿ ರು. ದೇಣಿಗೆಯನ್ನು ಸಹಕಾರ ವಲಯ ಹಾಗೂ ಎಪಿಎಂಸಿಗಳ ಮೂಲಕ ಸಂಗ್ರಹಿಸಿ ಕೊಟ್ಟಿದ್ದೇವೆ. ಜೊತೆಗೆ ಕೊರೋನಾ ವಾರಿಯರ್ಸ್‌ಗಳಾದ 12,608 ಆಶಾ ಕಾರ್ಯಕರ್ತೆಯರಿಗೆ 12.75 ಕೋಟಿ ರು. ಪ್ರೋತ್ಸಾಹಧನ ವಿತರಿಸಿದ್ದೇವೆ ಎಂದರು.

ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸಂಗಪ್ಪ ಸವದಿ, ಅಶ್ವಥ್‌ ನಾರಾಯಣ, ವಿಧಾನಪರಿಷತ್‌ ಸದಸ್ಯ ರಮೇಶ್‌ ಗೌಡ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್‌, ಸಹಕಾರ ಸಂಘಗಳ ನಿಬಂಧಕ ಎಸ್‌.ಜಿಯಾವುಲ್ಲಾ ಉಪಸ್ಥಿತರಿದ್ದರು.

50 ಮಂದಿಗೆ ಸಾಂಕೇತಿಕ ಸಾಲ ವಿತರಣೆ :  ಆರ್ಥಿಕ ಸ್ಪಂದನ ಕಾರ್ಯಕ್ರಮದಡಿ ವಿವಿಧ ಯೋಜನೆಯಲ್ಲಿ 50 ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾಂಕೇತಿಕವಾಗಿ ಸಾಲದ ಚೆಕ್‌ ವಿತರಿಸಿದರು. ಆರ್ಥಿಕ ಸ್ಪಂದನಾ ಕಾರ್ಯಕ್ರಮದ ಸಾಕ್ಷ್ಯಚಿತ್ರ ಅನಾವರಣ ಮಡಲಾಯಿತು.