ಬೆಂಗಳೂರು (ಸೆ.17):  ಕೆಲದಿನಗಳ ಹಿಂದೆ ಟಿಪ್ಪು ಸುಲ್ತಾನ್‌ನನ್ನು ಹೊಗಳುವ ಮೂಲಕ ಆಡಳಿತಾರೂಢ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ಇದೀಗ ಮತ್ತೊಮ್ಮೆ ಡ್ರಗ್ಸ್‌ ವಿಚಾರವಾಗಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರಕ್ಕೀಡಾಗುವಂತೆ ಮಾತನಾಡಿದ್ದಾರೆ.

ಡ್ರಗ್ಸ್‌ ತನಿಖೆಗೆ ಸಂಬಂಧಿಸಿದಂತೆ ಕೇವಲ ಒಂದೇ ವರ್ಗದವರನ್ನು ಕರೆದು ತನಿಖೆ ಮಾಡುತ್ತಿರುವುದನ್ನು ಸಮಾಜ ಪ್ರಶ್ನೆ ಮಾಡುತ್ತಿದೆ. ಅದು ಸಹ ಹೆಣ್ಣು ಮಕ್ಕಳನ್ನೇ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಡ್ರಗ್ಸ್‌ ಜಾಲದಲ್ಲಿ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳ ಮಕ್ಕಳು, ಮಾಧ್ಯಮದವರು ಇಲ್ಲವೇ ಎಂದೂ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡ್ರಗ್ಸ್‌ ಜಾಲದ ಬಗ್ಗೆ ಕಾನೂನಿಗೆ ಗೌರವ ನೀಡುವ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

'ಡ್ರಗ್ಸ್​ ದಂಧೆಯಲ್ಲಿ ರಾಜಕಾರಣಿಗಳು, ಸಾಕ್ಷಿ ಸಮೇತ 32 ಜನರ ಲಿಸ್ಟ್ ಗೃಹ ಸಚಿವರ ಕೈ ಸೇರಲಿದೆ '

‘ಪ್ರಕರಣದ ಬಗ್ಗೆ ಸರ್ಕಾರವು ಗಂಭೀರವಾಗಿ ಪರಿಗಣಿಸಿದರೆ ಪೊಲೀಸ್‌ ಇಲಾಖೆಯು ಲಘುವಾಗಿ ಪರಿಗಣಿಸಿದೆ. ಪೊಲೀಸರಿಗೆ ಗೊತ್ತಿಲ್ಲದಿರುವ ವಿಚಾರ ಇಲ್ಲ. ದಂಧೆಯಲ್ಲಿ ಶಾಮೀಲಾಗಿರುವ ಪೊಲೀಸ್‌ ಅಧಿಕಾರಿಗಳ ಬಗ್ಗೆಯೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಷ್ಟರ ಮಟ್ಟಿಗೆ ಬೆಳೆಯಲು ಯಾರು ಕಾರಣ? ವಿದೇಶಿ ಪ್ರಜೆಗಳ ಈ ದಂಧೆಯಲ್ಲಿ ಇಲ್ಲವೇ? ಒಬ್ಬನನ್ನು ಹಿಡಿದುಕೊಂಡು ಪೊಲೀಸರು ಓಡಾಡುತ್ತಿದ್ದಾರೆ. ವಿಚಾರಣೆಗೆ ನಾನು ಆಕ್ಷೇಪ ಮಾಡುತ್ತಿಲ್ಲ. ಕೇವಲ ಸಿನಿಮಾದವರು ಮಾತ್ರ ಡ್ರಗ್ಸ್‌ ಬಳಸುತ್ತಾರಾ? ಇತರೆ ಕ್ಷೇತ್ರದವರು ಬಳಸುವುದಿಲ್ಲವೇ? ತನಿಖೆ ಸಾಗುತ್ತಿರುವ ವಿಧಾನ ಬದಲಿಸಬೇಕಿದೆ’ ಎಂದರು.

ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ‘ರಾಜ್ಯದಲ್ಲಿ ಎನ್‌ಇಪಿ ಜಾರಿ ಮಾಡಬೇಕಾದ ಜವಾಬ್ದಾರಿ ಉನ್ನತ ಶಿಕ್ಷಣ ಪರಿಷತ್‌ ಮೇಲಿದೆ. ಉನ್ನತ ಶಿಕ್ಷಣ ಪರಿಷತ್‌ಗೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಎಸ್‌.ವಿ.ರಂಗನಾಥ್‌ ಉಪಾಧ್ಯಕ್ಷರಿದ್ದಾರೆ. ಅವರು ಆರ್ಥಿಕ ಅಪರಾಧದ ಹಿನ್ನೆಲೆ ಇರುವ ಕಾಫಿ ಡೇ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಆರ್ಥಿಕ ನಷ್ಟದ ಸಂಸ್ಥೆಯಲ್ಲಿದ್ದಾರೆ. ಯಾವುದಾದರೂ ಒಂದು ಕಡೆ ಇರಬೇಕು. ಸರ್ಕಾರ ಅವರನ್ನು ಉನ್ನತ ಶ್ಕಿಷಣ ಪರಿಷತ್‌ನಿಂದ ಬಿಡುಗಡೆಗೊಳಿಸಬೇಕು ಅಥವಾ ರಂಗನಾಥ್‌ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿಗಳು ದೆಹಲಿಗೆ ಹೋಗುವ ಬಗ್ಗೆ ಕೇಳಿದ್ದೇನೆ. ಒತ್ತಡಕ್ಕೆಲ್ಲ ಮಂತ್ರಿಗಿರಿ ಆಗುವುದಿಲ್ಲ. ಚರ್ಚೆ ಮಾಡಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ಸಚಿವ ಸ್ಥಾನಕ್ಕಾಗಿ ನಾನು ಒತ್ತಡ ಹಾಕುವುದು ಏನೂ ಇಲ್ಲ’ ಎಂದರು.