ಬೆಂಗಳೂರು [ಜ.31]:  ರಾಜ್ಯಾದ್ಯಂತ ನಗರ ಸಭೆಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ತಂತ್ರಾಂಶದಡಿ ಆಸ್ತಿ ದಾಖಲೀಕರಣ ಮಾಡಿ ಡಿಜಿಟಲ್‌ ಸಹಿಯುಳ್ಳ ‘ನಮೂನೆ-3’ ಪಡೆಯದ ಆಸ್ತಿಗಳ ನೋಂದಣಿ ಸ್ಥಗಿತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ.

- ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕನಕಪುರ ಹಾಗೂ ರಾಮನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಇ- ಆಸ್ತಿ ಹಾಗೂ ಕಾವೇರಿ ತಂತ್ರಾಂಶ ಜೋಡಣೆ ಮಾಡಿ ಆದೇಶಿಸಲಾಗಿದೆ. ಹೀಗಾಗಿ ಎರಡೂ ಸ್ಥಳೀಯ ಸಂಸ್ಥೆ (ನಗರಸಭೆ) ವ್ಯಾಪ್ತಿಯಲ್ಲಿ ಇ-ಸ್ವತ್ತು ತಂತ್ರಾಂಶದಡಿ ಆಸ್ತಿ ನೋಂದಣಿ ಮಾಡಿಕೊಂಡು ಡಿಜಿಟಲ್‌ ಸಹಿ ಹೊಂದಿರುವ ‘ನಮೂನೆ-3’ ದಾಖಲೆ ಹೊಂದಿರದಿದ್ದರೆ ಅಂತಹ ಆಸ್ತಿಗಳ ನೋಂದಣಿ ಆಗುವುದಿಲ್ಲ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಬೆಂಗಳೂರು : ಅಕ್ರಮ ಕಟ್ಟಡ ಮಾಲಿಕರಿಗೆ ಬೀಳಲಿದೆ ಎರಡು ಪಟ್ಟು ತೆರಿಗೆ

ಆದೇಶ ಪತ್ರದಲ್ಲಿ, ಕನಕಪುರ ಹಾಗೂ ರಾಮನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಕಾವೇರಿ ತಂತ್ರಾಂಶದ ಜೊತೆಗೆ ಕೂಡಲೇ ಜಾರಿಗೆ ಬರುವಂತೆ ಜೋಡಣೆ ಮಾಡಬೇಕು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ನೋಂದಣಿ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಏನಿದು ನಮೂನೆ-3?

ನಗರಸಭೆಗಳ ವ್ಯಾಪ್ತಿಯ ಆಸ್ತಿಗಳಿಗೆ 2005-06ರಲ್ಲಿ ನಮೂನೆ-3 ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಬಳಿಕ ಇತ್ತೀಚೆಗೆ ಇ-ಆಸ್ತಿ ತಂತ್ರಾಂಶದಡಿ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಶಿಸ್ತುಬದ್ಧವಾಗಿ ನಿರ್ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.

ಬೆಂಗಳೂರು : ಹಲವು ಕಂಪನಿಗಳಿಗೆ ಬೀಗ!...

ಇದರ ಪ್ರಕಾರ 2019ರ ಮಾರ್ಚಲ್ಲಿ ಹೊರಡಿಸಿದ್ದ ಆದೇಶದಂತೆ 2019ರ ಏ.1ರಿಂದ ನಗರಸಭಾ ಕಚೇರಿಗಳಲ್ಲಿ ಇ-ಆಸ್ತಿ ತಂತ್ರಾಂಶದ ಅಡಿ ನಮೂನೆ -3ನ್ನು ಡಿಜಿಟಲ್‌ ಸಹಿಯೊಂದಿಗೆ ವಿತರಿಸುತ್ತಿದೆ. ಇದೀಗ ಕಾವೇರಿ ಆಸ್ತಿ ನೋಂದಣಿ ತಂತ್ರಾಂಶ ಹಾಗೂ ಇ-ಆಸ್ತಿ ತಂತ್ರಾಂಶ ಸಮನ್ವಯಗೊಳಿಸಿರುವುದರಿಂದ ಆಸ್ತಿ ನೋಂದಣಿಗೆ ಡಿಜಿಟಲ್‌ ದಾಖಲೆ ರೂಪದಲ್ಲಿರುವ ‘ನಮೂನೆ-3’ ಕಡ್ಡಾಯ. ಯಾವುದೇ ಮಾಲೀಕರು ತಮ್ಮ ಆಸ್ತಿಗಳಿಗೆ ಇ-ಆಸ್ತಿ ಅಡಿ ನಮೂನೆ-3 ಪಡೆಯದಿದ್ದರೆ ಅಂತಹ ಆಸ್ತಿಗಳು ನೋಂದಣಿ ಆಗುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಹಾರವೇನು?  ನಗರಸಭಾ ವ್ಯಾಪ್ತಿಯ ಸಮಸ್ತ ಆಸ್ತಿ ಮಾಲೀಕರ ಎಲ್ಲ ರೀತಿಯ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ವಿವರಗಳನ್ನು ದಾಖಲಿಸಿ ನಿಗದಿತ ಶುಲ್ಕ ಪಾವತಿಸಿಕೊಂಡು, ಅಧಿಕೃತ ಡಿಜಿಟಲ್‌ ಸಹಿ ಹೊಂದಿದ ಆಸ್ತಿ ತೆರಿಗೆ ವಹಿ ನಮೂನೆ -3 ಆನ್‌ಲೈನ್‌ ಮೂಲಕ ಒದಗಿಸಲಾಗುತ್ತದೆ. ಹೀಗಾಗಿ ಈ ಹಿಂದೆ ಕಚೇರಿಯಲ್ಲಿ ನೀಡುತ್ತಿದ್ದ ಕೈ ಬರಹದ ಸಹಿಯುಳ್ಳ ನಮೂನೆ-3 ನ್ನು ನಿಷೇಧಿಸಲಾಗಿದೆ.

ನೂತನ ನಮೂನೆ -3 ಪಡೆಯಲು ಬಯಸುವ ಆಸ್ತಿ ಮಾಲೀಕರು ಸ್ವತ್ತಿನ ಮಾಲೀಕರ ಇತ್ತೀಚಿನ ಪಾಸ್‌ ಪೋರ್ಟ್‌ ಅಳತೆಯ ಭಾವಚಿತ್ರ, ಮಾಲೀಕರ ವಿಳಾಸ ದೃಢೀಕರಣ, ಆಸ್ತಿ ಮಾಲೀಕತ್ವ ದೃಢೀಕರಿಸುವ ಕ್ರಯಪತ್ರ, ದಾನಪತ್ರ, ಹಕ್ಕುಪತ್ರ ಮುಂತಾದ ದಾಖಲೆ, ಪ್ರಸಕ್ತ ಸಾಲಿನವರೆಗೆ ಪಾವತಿಸಿದ ತೆರಿಗೆ ರಸೀದಿ ಹಾಜರುಪಡಿಸಿ ನಮೂನೆ-3 ಪಡೆಯಬಹುದು.

ಇ-ಆಸ್ತಿ ತಂತ್ರಾಂಶದಡಿ ನಗರದ ಸಮಸ್ತ ಆಸ್ತಿಗಳನ್ನು ದಾಖಲೀಕರಣಗೊಳಿಸಿ ಆನ್‌ಲೈನ್‌ನಲ್ಲಿ ನಮೂನೆ-3 ಪಡೆಯದಿದ್ದರೆ ಮನೆ ಕಟ್ಟಲು, ಖರೀದಿಸಲು, ಮಾರಾಟ ಮಾಡಲು ಆಗುವುದಿಲ್ಲ.