ಲಿಂಗರಾಜು ಕೋರಾ

ಬೆಂಗಳೂರು[ಜ.20]: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ನಿಯಮ (ಬೈಲಾ) ಹಾಗೂ ನಕ್ಷೆ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳಿಗೆ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದಿಸಿದ್ದು, ಇದರಿಂದ ಇನ್ನು ಮುಂದೆ ಸುಮಾರು ನಾಲ್ಕು ಲಕ್ಷ ಆಸ್ತಿದಾರರು ದುಪ್ಪಟ್ಟು ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಬಿಬಿಎಂಪಿಗೆ ವಾರ್ಷಿಕ .400 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗಲಿದೆ.

ಸರ್ಕಾರ ತೆಗೆದುಕೊಂಡಿರುವ ಕಠಿಣ ನಿಲುವಿನ ಹಿನ್ನೆಲೆಯಲ್ಲಿ ಉದಾಹರಣೆಗೆ ಈವರೆಗೆ ವರ್ಷಕ್ಕೆ .10 ಸಾವಿರ ಆಸ್ತಿ ತೆರಿಗೆ ಕಟ್ಟುತ್ತಿದ್ದವರು, .20 ಸಾವಿರ ತೆರಿಗೆ ಪಾವತಿಸಬೇಕಾಗುತ್ತದೆ, ಉಲ್ಲಂಘಿಸಿರುವ ನಕ್ಷೆ, ನಿಯಮ ಸರಿಪಡಿಸಿಕೊಳ್ಳುವವರೆಗೆ ಅಥವಾ ಕಟ್ಟಡ ತೆರವುಗೊಳಿಸುವವರೆಗೂ ಆಸ್ತಿದಾರರು ಈ ರೀತಿ ದುಪ್ಪಟ್ಟು ತೆರಿಗೆಯನ್ನು ದಂಡದ ರೂಪದಲ್ಲಿ ಕಟ್ಟುತ್ತಿರಬೇಕಾಗುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ 19 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಇವುಗಳಿಂದ ವಾರ್ಷಿಕ ಸುಮಾರು .3000 ಕೋಟಿವರೆಗೂ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದೆ. ಇದೀಗ ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸುವುದರಿಂದ ಬಿಬಿಎಂಪಿಗೆ ಪ್ರತಿ ವರ್ಷ ಹೆಚ್ಚುವರಿಯಾಗಿ .400 ಕೋಟಿಗಿಂತ ಹೆಚ್ಚು ತೆರಿಗೆ ಸಂಗ್ರಹವಾಗುವ ಅಂದಾಜು ಮಾಡಲಾಗಿದೆ.

ಬೆಂಗಳೂರು : ಮನೆ ನಿರ್ಮಿಸುವವರೇ ಎಚ್ಚರ!...

ಬಿಬಿಎಂಪಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡುಗಳಲ್ಲಿ ಒಟ್ಟು 3,98,006 ವಸತಿ ಹಾಗೂ ವಸತಿಯೇತರ ಕಟ್ಟಡಗಳನ್ನು ನಕ್ಷೆ, ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ. ಇವುಗಳ ಪೈಕಿ 3,62,831 ಕಟ್ಟಡಗಳು ವಾಸದ ಮನೆಗಳಾಗಿವೆ. 16,760 ಕಟ್ಟಡಗಳು ವಾಣಿಜ್ಯ ಸೇರಿದಂತೆ ವಸತಿಯೇತರ ಕಟ್ಟಡಗಳಾಗಿವೆ. ಅಲ್ಲದೆ, 18,415 ಕಟ್ಟಡಗಳು ವಸತಿ ಹಾಗೂ ವಸತಿಯೇತರ ಎರಡೂ ರೀತಿಯ ಸೌಲಭ್ಯಗಳಿಂದ ಕೂಡಿದ ಕಟ್ಟಡಗಳಾಗಿವೆ.

ಈ ಸಂಬಂಧ  ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಎನ್‌.ಅನಿಲ್‌ ಕುಮಾರ್‌ ಅವರು, ನಕ್ಷೆ ಹಾಗೂ ನಿಯಮ ಉಲ್ಲಂಘಿಸಿ ಕಟ್ಟಿರುವ 3.98 ಲಕ್ಷ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಿದರೆ ಪ್ರತಿ ವರ್ಷ ಒಟ್ಟು .401.12 ಕೋಟಿಯಷ್ಟುಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗಬಹುದೆಂದು ಅಂದಾಜಿಸಲಾಗಿದೆ. ಈ ಪೈಕಿ .176.05 ಕೋಟಿಯಷ್ಟುತೆರಿಗೆ ವಸತಿ ಕಟ್ಟಡಗಳಿಂದ, .190.11 ಕೋಟಿ ಆಸ್ತಿ ತೆರಿಗೆ ವಸತಿಯೇತರ ಕಟ್ಟಡಗಳಿಂದ ಹಾಗೂ ವಸತಿ ಹಾಗೂ ವಸತಿಯೇತರ ಎರಡೂ ರೀತಿಯ ಸೌಲಭ್ಯದ ಕಟ್ಟಡಗಳಿಂದ .34.96 ಕೋಟಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಶೀಘ್ರ ಆದೇಶ ಜಾರಿ:

ಸಚಿವ ಸಂಪುಟ ಸಭೆಯಲ್ಲಿ ಶನಿವಾರ ತೆಗೆದುಕೊಳ್ಳಲಾಗಿರುವ ನಿರ್ಧಾರದಂತೆ ನಿಯಮ ಉಲ್ಲಂಘಿಸಿರುವ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸುವ ಸಂಬಂಧ ಸರ್ಕಾರದಿಂದ ಇನ್ನಷ್ಟೇ ಆದೇಶ ಹೊರಬೀಳಬೇಕಿದೆ. ಶೀಘ್ರದಲ್ಲೇ ಆದೇಶ ಹೊರಬೀಳುವ ಸಾಧ್ಯತೆ ಇದೆ. ಆದೇಶ ಹೊರಬಿದ್ದ ಬಳಿಕವಷ್ಟೇ ಈ ದುಪ್ಪಟ್ಟು ತೆರಿಗೆ ವಿಧಿಸುವ ಪ್ರಕ್ರಿಯೆ ಯಾವ ದಿನಾಂಕದಿಂದ ಜಾರಿಗೊಳಿಸಬೇಕು. ಈ ಹಣಕಾಸು ಸಾಲಿನಿಂದಲೇ (2019-20) ಜಾರಿಗೊಳಿಸುವುದಾದರೆ ಈಗಾಗಲೇ ತೆರಿಗೆ ಪಾವತಿಸಿರುವವರಿಗೂ ದುಪ್ಪಟ್ಟು ತೆರಿಗೆ ವಸೂಲಿ ಮಾಡಬೇಕೇ ಅಥವಾ ಇನ್ನೂ ತೆರಿಗೆ ಪಾವತಿಸದವರಿಗೆ ಮಾತ್ರ ಈ ವರ್ಷ ದುಪ್ಪಟ್ಟು ತೆರಿಗೆ ವಿಧಿಸಬೇಕಾ ಎಂಬ ವಿಚಾರಗಳು ಸ್ಪಷ್ಟತೆ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ನಕ್ಷೆ-ನಿಯಮ ಉಲ್ಲಂಘನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮುನ್ನ ನಿಯಮಗಳ ಅನುಸಾರ ಕಟ್ಟಡ ನಕ್ಷೆ ಸಿದ್ಧಪಡಿಸಿ ಪಾಲಿಕೆಯಿಂದ ಅನುಮತಿ ಪಡೆಯಬೇಕು. ಸೆಟ್‌ಬ್ಯಾಕ್‌ ಬಿಡುವುದು, ನಿವೇಶನದ ವಿಸ್ತೀರ್ಣ ಹಾಗೂ ಪ್ರದೇಶಕ್ಕೆ ನಿಗದಿಪಡಿಸಿರುವಷ್ಟೇ ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುವುದು, ಮಾಲ್‌, ಹೋಟೆಲ್‌, ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಯಾವುದೇ ವಾಣಿಜ್ಯ ಚಟುವಟಿಕೆಗೆ ನಿರ್ಮಿಸುವ ಕಟ್ಟಡಗಳ ತಳಮಹಡಿಯನ್ನು ಪಾರ್ಕಿಂಗ್‌ಗೆ ಮೀಸಲಿಡಬೇಕು, ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಹೋಗುವಂತಿರಬೇಕೆಂಬುದು ಸೇರಿದಂತೆ ಸುರಕ್ಷಾ ಕ್ರಮಗಳು ಹಾಗೂ ನಿಯಮಗಳನ್ನೂ ಪಾಲಿಸಿ ನಕ್ಷೆ ಸಿದ್ಧಪಡಿಸಿದ್ದರೆ ಬಿಬಿಎಂಪಿ ಅನುಮತಿ ನೀಡುತ್ತದೆ. ಅನುಮತಿ ಸಿಕ್ಕ ಬಳಿಕವಷ್ಟೇ ಕಟ್ಟಡ ಆರಂಭಿಸಬೇಕು. ಈ ನಿಯಮಗಳನ್ನು ಶೇ.5ರಷ್ಟಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದರೆ ದುಪ್ಪಟ್ಟು ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ.

 ದುಪ್ಪಟ್ಟು ತೆರಿಗೆ ಜಾರಿ ಅಷ್ಟು ಸುಲಭವಲ್ಲ’ 

ಸರ್ಕಾರವೇನೋ ದುಪ್ಪಟ್ಟು ತೆರಿಗೆ ವಿಧಿಸುವ ನಿರ್ಧಾರ ತೆಗೆದುಕೊಂಡಿದೆ. ಆದರೆ, ಇದನ್ನು ಜಾರಿಗೊಳಿಸುವುದು ಅಷ್ಟುಸುಲಭವಲ್ಲ ಎನ್ನುತ್ತಾರೆ ನಗರಾಭಿವೃದ್ಧಿ ತಜ್ಞರು.

ಈಗಿರುವ ನಿಯಮ ಪ್ರಕಾರ, ಶೇ.5ರಷ್ಟುಪ್ರಮಾಣದಲ್ಲಿ ಕಟ್ಟಡ ನಿಯಮ ಉಲ್ಲಂಘನೆಯಾಗಿದ್ದರೆ ಅದಕ್ಕೆ ವಿನಾಯಿತಿ ನೀಡಲು ಅವಕಾಶವಿದೆ. ಆದರೆ, ಅದಕ್ಕಿಂತ ಹೆಚ್ಚು ಎಷ್ಟೇ ಪ್ರಮಾಣದಲ್ಲಿ ನಿಯಮ ಉಲ್ಲಂಘನೆಯಾಗಿದ್ದರೂ ಏಕರೂಪವಾಗಿ ದುಪ್ಪಟ್ಟು ತೆರಿಗೆ ವಿಧಿಸುವುದು ಅವೈಜ್ಞಾನಿಕ ಹಾಗೂ ಅಸಮಂಜಸ. ಇದಕ್ಕೆ ಜನರಿಂದ ವಿರೊಧ ವ್ಯಕ್ತವಾಗದೆ ಇರುವುದಿಲ್ಲ. ಇದಕ್ಕೂ ಮುನ್ನ ಎಲ್ಲಾದರೂ ಈ ರೀತಿ ದುಪ್ಪಟ್ಟು ತೆರಿಗೆ ಜಾರಿಯ ಪ್ರಯೋಗ ಮಾಡಲಾಗಿದೆಯೇ? ಅದನ್ನು ಇಡೀ ನಗರಕ್ಕೆ ಹೇಗೆ ವಿಸ್ತರಿಸಲಾಗುತ್ತದೆ ಎಂಬುದನ್ನು ಸರ್ಕಾರ ತಿಳಿಸಬೇಕಾಗುತ್ತದೆ ಎಂದು ನಗರಾಭಿವೃದ್ಧಿ ತಜ್ಞ, ನಿವೃತ್ತ ಐಎಎಸ್‌ ಅಧಿಕಾರಿ ವಿ.ರವೀಂದ್ರ ಹೇಳುತ್ತಾರೆ.

ಅಲ್ಲದೆ, ನಕ್ಷೆ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣದಲ್ಲಿ ಸಂಬಂಧಿಸಿದ ಆಸ್ತಿ ಮಾಲಿಕರ ಪಾಲು ಎಷ್ಟಿದೆಯೋ ಅಷ್ಟೇ ಪಾಲು ಬಿಬಿಎಂಪಿಯದ್ದೂ ಇರುತ್ತದೆ. ಪಾಯ ಹಾಕಿದಾಗಿನಿಂದ ಕಟ್ಟಡ ಪೂರ್ಣಗೊಳ್ಳುವವರೆಗೂ ಹಂತ ಹಂತವಾಗಿ ಖುದ್ದು ಸ್ಥಳ ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದ್ದು ಪಾಲಿಕೆ ಅಧಿಕಾರಿಗಳದ್ದು, ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಲು ಬಿಟ್ಟು ಈಗ ದುಪ್ಪಟ್ಟು ತೆರಿಗೆ ವಿಧಿಸುತ್ತೇವೆ ಎಂದರೆ ಏನು ಹೇಳುವುದು? ಈ ರೀತಿ ನಿಯಮ ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅನೇಕ ಬಾರಿ ಹಿಂದಿನ ಸರ್ಕಾರಗಳು ಹೇಳುತ್ತಲೇ ಬಂದಿವೆ. ಅದರಂತೆ ಏನು ಕ್ರಮ ಕೈಗೊಂಡಿದ್ದಾರೆ. ಎಲ್ಲವೂ ಚರ್ಚೆಯಾಗಬೇಕಾಗುತ್ತದೆ ಎನ್ನುತ್ತಾರೆ ರವೀಂದ್ರ ಅವರು.