ಕರ್ನಾಟಕ ಸರ್ಕಾರ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಕಠಿಣ ಆದೇಶ ಹೊರಡಿಸಿದೆ. ಚಿಕಿತ್ಸೆ ನಿರಾಕರಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. 

 ಬೆಂಗಳೂರು (ಏ.24): ಕೋವಿಡೇತರ ರೋಗಿಗಳಿಗೆ ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ತಾರದೆ ಚಿಕಿತ್ಸೆ ನೀಡುವುದಿಲ್ಲ ಎಂಬ ಕೆಲ ಆಸ್ಪತ್ರೆಗಳ ನಿಲುವು ತೀವ್ರ ನಿರ್ಲಕ್ಷ್ಯದಿಂದ ಕೂಡಿದ್ದು, ಈ ರೀತಿ ಬೇಡಿಕೆ ಇಡುವ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.

ಕೆಲ ಆಸ್ಪತ್ರೆಗಳು ಕೋವಿಡ್‌-19 ಹೊರತಾದ ಚಿಕಿತ್ಸೆಗಾಗಿ ತಮ್ಮಲ್ಲಿಗೆ ಬರುವ ರೋಗಿಗಳನ್ನು ಚಿಕಿತ್ಸೆಗೆ ದಾಖಲಿಸುವ ಮುನ್ನ ಕೋವಿಡ್‌ ನೆಗೆಟಿವ್‌ ಆರ್‌ಟಿಪಿಸಿಆರ್‌ ಪರೀಕ್ಷಾ ವರದಿಯನ್ನು ಕೇಳುತ್ತಿವೆ. ಇದು ಚಿಕಿತ್ಸೆಯಲ್ಲಿ ಅನಗತ್ಯ ವಿಳಂಬಕ್ಕೆ ಕಾರಣವಾಗಿದೆ. ಆದ್ದರಿಂದ ಕೋವಿಡ್‌ನ ಗುಣ ಲಕ್ಷಣಗಳಿಲ್ಲದ ರೋಗಿಗಳಿಗೆ ಆರ್‌ಟಿಪಿಸಿಆರ್‌ ಪರೀಕ್ಷಾ ವರದಿ ತೆಗೆದುಕೊಂಡು ಬನ್ನಿ ಎಂದು ಖಾಸಗಿ ಆಸ್ಪತ್ರೆಗಳು ಸೂಚಿಸುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.

ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ವ್ಯಾಯಾಮ ಮಾಡಿ!

ಕೋವಿಡ್‌-19ರ ಪರೀಕ್ಷೆ ನಡೆಸುವ ಎಲ್ಲ ಪ್ರಯೋಗಾಲಯಗಳು ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಪ್ರತ್ಯೇಕ ಸಾಲು ಇರುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಸಾಮಾಜಿಕ ಅಂತರ ಕಾಪಾಡುವಂತೆ ಆಸನ ವ್ಯವಸ್ಥೆ ಅಥವಾ ನಿಲ್ಲುವ ಮಾರ್ಕ್ಗಳನ್ನು ಮಾಡಬೇಕು. ಈ ಸೂಚನೆಯನ್ನು ಪಾಲಿಸದ ಪ್ರಯೋಗಾಲದ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.

ಕೋವಿಡ್‌ ಲ್ಯಾಬ್‌ಗಳಿಗೆ ಮೀಸಲು ತಂಡ ರೆಡಿ ಮಾಡಿ: ರಾಜ್ಯದಲ್ಲಿ ಕೋವಿಡ್‌-19ರ ಎರಡನೇ ಅಲೆ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಕೋವಿಡ್‌-19ರ ಪರೀಕ್ಷಾ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಮೈಕ್ರೋಬಯಾಲಜಿಸ್ಟ್‌, ಪ್ರಯೋಗಾಲಯದ ತಂತ್ರಜ್ಞರು, ದತ್ತಾಂಶ ದಾಖಲಿಸುವ ಸಿಬ್ಬಂದಿಯು ಸೋಂಕು ಪೀಡಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಇಡೀ ಪ್ರಯೋಗಾಲಯದ ಕೆಲಸವೇ ಸ್ಥಗಿತಗೊಳ್ಳುವ ಸಂಭವವಿದೆ. ಆದ್ದರಿಂದ ಮೆಡಿಕಲ್‌ ಕಾಲೇಜುಗಳ ಡೀನ್‌ ಅಥವಾ ನಿರ್ದೇಶಕರು ತಂಡವನ್ನು ರಚಿಸಿ ಅವರಿಗೆ ಅಗತ್ಯ ತರಬೇತಿ ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಕೋವಿಡ್ ವಿರುದ್ಧ ಹೋರಾಡೋಣ; ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸೋಣ