ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ₹94,177 ಕೋಟಿ ಖರ್ಚು ಮಾಡಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಸಿಎಜಿ ವರದಿ ಯೋಜನೆಗಳ ಟೀಕೆ ಮಾಡಿಲ್ಲ, ಬದಲಾಗಿ ಖರ್ಚಿನ ಲೆಕ್ಕವನ್ನು ಮಾತ್ರ ನೀಡಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಆ.25): ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಂಡವಾಳ ವೆಚ್ಚದ ಮೇಲೆ ಹೊರೆಯಾಗುತ್ತಿದೆ ಎಂಬ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ವರದಿಯ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಾಗಿನಿಂದ ಈವರೆಗೆ 5 ಗ್ಯಾರಂಟಿ ಯೋಜನೆಗಾಗಿ 94,177 ಕೋಟಿ ರೂ. ವೆಚ್ಚ ಮಾಡಿದೆ ಎಂದು ವರದಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಸಿಎಜಿ ವರದಿ ಯೋಜನೆಗಳ ಬಗ್ಗೆ ಟೀಕೆ ಮಾಡಿಲ್ಲ, ಬದಲಾಗಿ ಖರ್ಚು ಮಾಡಿದ ಲೆಕ್ಕವನ್ನು ಮಾತ್ರ ನೀಡಿದೆ ಎಂದು ಹೇಳಿದ್ದಾರೆ. ಸಿಎಜಿ ವರದಿಯು ಕೇವಲ ಖರ್ಚು ಮಾಡಿದ ಹಣದ ಲೆಕ್ಕ ನೀಡಬೇಕೇ ಹೊರತು, ಯೋಜನೆಗಳನ್ನು ಟೀಕಿಸಬಾರದು. ಗ್ಯಾರಂಟಿಗಳಿಂದ ಆರ್ಥಿಕವಾಗಿ ಹೊಡೆತ ಬೀಳುತ್ತದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಯಾವ ಆಧಾರದ ಮೇಲೆ ಸಿಎಜಿ ಈ ಸರ್ವೇ ಮಾಡಿದೆ ಎಂಬುದು ಗೊತ್ತಿಲ್ಲ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉತ್ತರ ನೀಡಲಿದ್ದಾರೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ಜನರಿಂದ ಸಿಗುತ್ತಿದೆ. ಶಕ್ತಿ ಯೋಜನೆಯಿಂದ ರಾಜ್ಯದ ಹಿರಿಮೆಗೆ ಸಾಕ್ಷಿಯಾಗಿದೆ. ಈ ಶಕ್ತಿ ಯೋಜನೆಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಲಭಿಸಿದೆ. ಒಟ್ಟಾರೆಯಾಗಿ ಈವರೆಗೆ 500 ಕೋಟಿಗಿಂತಲೂ ಹೆಚ್ಚು ಮಹಿಳೆಯರು ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಮಾಡಿದ್ದಾರೆ. ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ದೇಶ, ವಿದೇಶದಲ್ಲಿ ಪ್ರಶಂಸೆ ವ್ಯಕ್ತವಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ವಿವರಗಳು | |||||
ಯೋಜನೆ | ಗೃಹ ಲಕ್ಷ್ಮಿ | ಗೃಹ ಜ್ಯೋತಿ | ಯುವ ನಿಧಿ | ಶಕ್ತಿ ಯೋಜನೆ | ಅನ್ನ ಭಾಗ್ಯ |
ಫಲಾನುಭವಿಗಳು | ಜೂನ್ 2025 ರವರೆಗೆ 1.24 ಕೋಟಿ ಫಲಾನುಭವಿಗಳು | ಜುಲೈ 2025 ರವರೆಗೆ: 1.64 ಕೋಟಿ ಫಲಾನುಭವಿಗಳು | ಡಿಸೆಂಬರ್ 2023 ರಿಂದ ಜುಲೈ 2025 ರವರೆಗೆ: 2.55 ಲಕ್ಷ ಫಲಾನುಭವಿಗಳು | 533.05 ಕೋಟಿ ಫಲಾನುಭವಿಗಳಿಗೆ ತಲುಪಿದೆ. | ಡಿಸೆಂಬರ್ 2024 ರವರೆಗೆ: 72.02 ಕೋಟಿ ಫಲಾನುಭವಿಗಳು. |
ವೆಚ್ಚ | 50,005 ಕೋಟಿ ರೂ.ಗಳನ್ನು ನೇರ ವರ್ಗಾಯಿಸಲಾಗಿದೆ | 18,139 ಕೋಟಿ ರೂ.ಗಳನ್ನು ವೆಚ್ಚ | 623 ಕೋಟಿ ರೂ.ಗಳ ಅನುದಾನ ಬಿಡುಗಡೆ | 13,589 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. | ಡಿಬಿಟಿ ಮೂಲಕ 11,821.17 ಕೋಟಿ ರೂ.ಗಳ ವೆಚ್ಚವಾಗಿದೆ. |
ಇತ್ತೀಚಿನ ವಿವರ | ಜೂನ್ ತಿಂಗಳ ಡಿಬಿಟಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ ಮತ್ತು ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ | NA | ಜುಲೈ ತಿಂಗಳ ಡಿಬಿಟಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ ಮತ್ತು ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. | ಪ್ರತಿದಿನ ಮಹಿಳೆಯರು ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. | ಆಹಾರ ಧಾನ್ಯಗಳ ವಿತರಣೆ (ಫೆಬ್ರವರಿ 2025 ರಿಂದ ಆಗಸ್ಟ್ 2025): 14.68 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಆಹಾರ ಧಾನ್ಯಗಳನ್ನು ವಿತರಿಸಲಾಗಿದ್ದು, 3,322 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. |
ಒಟ್ಟಾರೆಯಾಗಿ, ಈ ಎಲ್ಲಾ ಯೋಜನೆಗಳಿಗೆ ಇದುವರೆಗೆ 94,177 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ರೇವಣ್ಣ ಮಾಹಿತಿ ನೀಡಿದರು. ಈ ಯೋಜನೆಗಳು ದೇಶ-ವಿದೇಶಗಳಲ್ಲಿಯೂ ಪ್ರಶಂಸೆ ಗಳಿಸಿವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.


