ರಾಜ್ಯ ಸರ್ಕಾರ ನಮ್ಮ ಮೆಟ್ರೋ ದರ ಹೆಚ್ಚಳಕ್ಕೆ ಪತ್ರ ಬರೆದಂತೆ, ಈಗ ತಗ್ಗಿಸಲು ಪತ್ರ ಬರೆಯಲಿ; ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು ಮೆಟ್ರೋ ದರ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದು, ದರ ಪರಿಷ್ಕರಣೆ ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ರಾಜ್ಯ ಸರ್ಕಾರ ಮತ್ತೊಂದು ಪತ್ರ ಬರೆದು ದರ ಪರಿಷ್ಕರಣೆಗೆ ಮನವಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ನವದೆಹಲಿ/ಬೆಂಗಳೂರು (ಫೆ.12): ಬೆಂಗಳೂರು ನಮ್ಮ ಮೆಟ್ರೋ ದರವನ್ನು ಏಕಾಏಕಿ ಹೆಚ್ಚಳ ಮಾಡಿದ್ದರಿಂದ ಎಲ್ಲ ವರ್ಗದ ಜನರಿಗೂ ತೀವ್ರ ಸಮಸ್ಯೆಯಾಗಿದೆ. ಇದು ಮಧ್ಯಮ ವರ್ಗ ಮತ್ತು ಬಡಜನರ ಮೇಲೆ ಬರ ಹಾಕಿದಂತಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ದರಗಳನ್ನು ಹೆಚ್ಚಳ ಮಾಡಿ, ತೆರಿಗೆ ಹೆಚ್ಚಿಸಿದ್ದಾರೆ. ಇದೀಗ ರಾಜ್ಯ ಸರ್ಕಾರ ಮನವಿ ಸಲ್ಲಿಕೆ ನಂತರವೇ ಮೆಟ್ರೋ ದರ ಹೆಚ್ಚಳ ಮಾಡಲಾಗಿದ್ದು, ಪರಿಷ್ಕರಣೆ ಮಾಡಿ ದರ ತಗ್ಗಿಸುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರು ನಗರಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಬುಧವಾರ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೆಟ್ರೋ ದರ ಏರಿಕೆಯಿಂದ ಎಲ್ಲ ವರ್ಗದವರಿಗೂ ಸಮಸ್ಯೆ ಆಗಿದೆ. ಏಕಾಏಕಿ ದರ ಏರಿಕೆ ಪ್ರಯಾಣಿಕರಿಗೆ ದುಬಾರಿಯಾಗಿದೆ. ಮಧ್ಯಮ ವರ್ಗದ ಜನರ ಮೇಲೆ ಬರ ಹಾಕಿದಂತಾಗಿದೆ. ಕರ್ನಾಟಕ ಸರ್ಕಾರ ಮತ್ತು ಮೆಟ್ರೋ ನಿಗಮ ಕೇಂದ್ರಕ್ಕೆ ಬರೆದಿತ್ತು. ನಿವೃತ್ತ ನ್ಯಾಯಾಧೀಶ ನೇತೃತ್ವದ ಸಮಿತಿ ನೇಮಕ ಆಗಿತ್ತು. ಸಮಿತಿ ನೀಡುವ ಸಲಹೆಗಳನ್ನು ಮೆಟ್ರೋ ಕಾನೂನು ಪ್ರಕಾರ ಪಾಲಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಮೆಟ್ರೋ ದರ ದುಬಾರಿ ಮಾಡಿದ್ದನ್ನು ನಿನ್ನೆ ಲೋಕಸಭೆಯಲ್ಲಿ ಕೂಡ ಮಾತಾಡಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಲ್ಲದರ ಮೇಲೂ ಜಾಸ್ತಿ ತೆರಿಗೆ ಹಾಕಿದ್ದಾರೆ. ರಾಜ್ಯ ಸರ್ಕಾರ ಪತ್ರ ಬರೆದ ಮೇಲೆ ಕೇಂದ್ರ ಇಲ್ಲ ಅಂತಾ ಹೇಳಲು ಕಾನೂನು ಪ್ರಕಾರ ಆಗಲ್ಲ. ನಿನ್ನೆ ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದೇನೆ. ಮೆಟ್ರೋ ದರ ಪರಿಷ್ಕರಣೆ ಮಾಡಿ ಕಡಿಮೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೇನೆ. ದರ ಹೆಚ್ಚಳ ದಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಇವತ್ತೇ ರಾಜ್ಯ ಸರ್ಕಾರ ಮತ್ತೊಂದು ಪತ್ರ ಬರೆದು ದರ ಪರಿಷ್ಕರಣೆ ಮಾಡಲು ಸೂಚಿಸಿದರೆ ಕೇಂದ್ರ ಸಿದ್ದವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ದರ ಶೇ.46ರಷ್ಟು ಏರಿಕೆ; ಬೆಂಗಳೂರು ಜನತೆಗೆ ಬಿಗ್ ಶಾಕ್ ಕೊಟ್ಟ ಬಿಎಂಆರ್‌ಸಿಎಲ್!
ಬೆಂಗಳೂರು ಮೆಟ್ರೋ ದರ ಹೆಚ್ಚಳ ಸಮಿತಿಯು ಯಾವ ಆಧಾರದ ಮೇಲೆ ದರ ಪರಿಷ್ಕರಣೆ ಮಾಡಿದೆ ಗೊತ್ತಿಲ್ಲ. ಈ ಸಮಿತಿ ಭಾರತದ ಮಹಾನಗರಗಳನ್ನು ಬಿಟ್ಟು ಸಿಂಗಾಪುರ ಸೇರಿ ಹಲವು ವಿದೇಶಿ ನಗರಗಳಲ್ಲಿ ಪ್ರವಾಸವನ್ನು ಮಾಡಿದಂತೆ ಕಾಣಿಸುತ್ತಿದೆ. ವಿದೇಶದ ನಗರಗಳ ಗುಣಮಟ್ಟದ ದರವನ್ನು ಬೆಂಗಳೂರಿನ ಮೆಟ್ರೋಗೆ ನಿಗಧಿಪಡಿಸಿದೆ. ಈಗಾಗಿರುವ ದರ ಪರಿಷ್ಕರಣೆಯನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಮೆಟ್ರೋ ನಿಯಮಗಳಲ್ಲಿ ತಡೆ ಹಿಡಿಯಲು ಸಾಧ್ಯವಿಲ್ಲ. ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಆದರೆ ಕೋರ್ಟ್ ಮಧ್ಯಪ್ರವೇಶ ಮಾಡುತ್ತಾ ಗೊತ್ತಿಲ್ಲ. ಅದರ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ. ದರ ಪರಿಷ್ಕರಣೆಗೆ ನಾಳೆಯೇ ಸಮಿತಿ ರಚನೆಯಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಬೆಂಗಳೂರು ಮೆಟ್ರೋಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಮ್ಮ ಮೆಟ್ರೋ ದರ ಹೆಚ್ಚಾದರೆ ಜನರು ಬೈಕ್ ಬಳಸುತ್ತಾರೆ. ಇದರಿಂದ ಟ್ರಾಫಿಕ್ ಜಾಮ್ ಮತ್ತಷ್ಟು ಹೆಚ್ಚಳವಾಗುವ ಜೊತೆಗೆ ವಾಯು ಮಾಲಿನ್ಯವೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನ ಶ್ರೀಮಂತರಿಗೆ ಮಾತ್ರವೇ ಇನ್ನು ಮೆಟ್ರೋ, ಬಡವ, ಮಧ್ಯಮವರ್ಗಕ್ಕೆ ಸರ್ಕಾರಗಳೇ ಶತ್ರು!