ಬೆಂಗಳೂರಿನ ಶ್ರೀಮಂತರಿಗೆ ಮಾತ್ರವೇ ಇನ್ನು ಮೆಟ್ರೋ, ಬಡವ, ಮಧ್ಯಮವರ್ಗಕ್ಕೆ ಸರ್ಕಾರಗಳೇ ಶತ್ರು!
ಬೆಂಗಳೂರು ಮೆಟ್ರೋ ದರ ಶೇ.50 ರಷ್ಟು ಏರಿಕೆಯಾಗಿದ್ದು, ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಹೊಸ ದರ ಏರಿಕೆಯಿಂದಾಗಿ ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಆಗಿದೆ.

ಬೆಂಗಳೂರು (ಫೆ.10): ಒಂದೆರಡಲ್ಲ ಬರೋಬ್ಬರಿ ಶೇ. 50ರಷ್ಟು ಮೆಟ್ರೋ ದರವನ್ನು ಏಕಾಏಕಿ ಏರಿಕೆ ಮಾಡಲಾಗಿದೆ. ಇದರೊಂದಿಗೆ ಬೆಂಗಳೂರು ಮೆಟ್ರೋ ಇನ್ನು ಶ್ರೀಮಂತರಿಗೆ ಮಾತ್ರವೇ ಎನ್ನುವಂತಾಗಿದೆ. ಶನಿವಾರದವರೆಗೂ ಮೆಟ್ರೋ ಪ್ರಯಾಣಕ್ಕಾಗಿ 100 ರೂಪಾಯಿ ಒಬ್ಬ ವ್ಯಕ್ತಿ ಖರ್ಚು ಮಾಡಿದ್ದರೆ, ಈಗ ಅಷ್ಟೇ ದೂರದ ಪ್ರಯಾಣಕ್ಕೆ ಭಾನುವಾರದಿಂದ 146 ರೂಪಾಯಿ ತೆರಬೇಕಾಗಿದೆ. ಎಸಿ ರೂಮ್‌ನಲ್ಲಿ ಕುಳಿತುಕೊಂಡು, ಎಸಿ ಕಾರ್‌ಗಳಲ್ಲಿ ತಿರುಗಾಡಿಕೊಂಡು ಬೆಂಗಳೂರು ಮೆಟ್ರೋ ದರವನ್ನು ದರ ಪರಿಶೀಲನಾ ಸಮಿತಿಯ ಅಧಿಕಾರಿಗಳು ಏರಿಕೆ ಮಾಡಿದ್ದಾರೆ ಅನ್ನೋ ಮಾತುಗಳು ಸಾರ್ವಜನಿಕರ ವಲಯದಿಂದ ಕೇಳಿ ಬಂದಿವೆ. ಹೊಸ ದರ ಏರಿಕೆಯೊಂದಿಗೆ ಬೆಂಗಳೂರು ಈಗ ಇಡೀ ದೇಶದಲ್ಲಿಯೇ ಅತ್ಯಂತ ದುಬಾರಿ ಮೆಟ್ರೋ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಬಡವ ಹಾಗೂ ಮಧ್ಯಮವರ್ಗದರ ಬಾಧೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ, ಅವರ ಕಿಸೆಯಲ್ಲಿ ಒಂದಷ್ಟು ಹಣ ಉಳಿಸುವಲ್ಲಿ ಯಾವ ಆಸಕ್ತಿಯೂ ಹೊಂದಿಲ್ಲ ಎನ್ನುವುದು ಈ ತೀರ್ಮಾನಗಳಿಂದ ಅರ್ಥವಾಗಿದೆ.
ಆಡಿ, ಮರ್ಸೀಡೀಸ್, ಬೆಂಜ್ ಕಾರುಗಳನ್ನು ಬೆಂಗಳೂರು ಟ್ರಾಫಿಕ್‌ಗಳಲ್ಲಿ ಓಡಿಸಲು ಸಾಧ್ಯವಿಲ್ಲ ಅನ್ನೋರು ಮಾತ್ರವೇ ಈಗ ಬೆಂಗಳೂರು ಮೆಟ್ರೋ ಏರಬಹುದಾಗಿದೆ. ಇನ್ನು ಶ್ರೀಮಂತರಿಗಾಗಿ ಮಾತ್ರವೇ ಮೆಟ್ರೋ, ಬಡವ ಹಾಗೂ ಮಧ್ಯಮ ವರ್ಗಕ್ಕೆ ಸರ್ಕಾರಗಳೇ ಶತ್ರು ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ನಮ್ಮ ಮೆಟ್ರೋ ನಮಗಲ್ಲ: ದರ ಏರಿಕೆಗೆ ಜನಾಕ್ರೋಶ
ದೇಶದಲ್ಲಿಯೇ ಅತ್ಯಂತ ಹಳೆಯ ಮೆಟ್ರೋ ಎನ್ನಲಾಗುವ ಕೋಲ್ಕತ್ತಾ ಮೆಟ್ರೋದಲ್ಲಿ ಅತ್ಯಂತ ಕನಿಷ್ಠ ದರ ಇಡಲಾಗಿದೆ. ಇದರಿಂದಾಗಿ ಅಲ್ಲಿನ ಮೆಟ್ರೋಗೆ ಪ್ರಯಾಣಿಕರ ದಟ್ಟಣೆಯೂ ಹೆಚ್ಚು. ಆರು ಬಣ್ಣಗಳ ಮಾರ್ಗಗಳನ್ನು ಇದು ಹೊಂದಿದೆ. ಇಲ್ಲಿ 2 ಕಿಮೀವರೆಗಿನ ಕನಿಷ್ಠ ದರ 5 ರೂಪಾಯಿ ಇದ್ದರೆ, ಗರಿಷ್ಠ 25 ಕಿ.ಮೀ ಪ್ರಯಾಣಕ್ಕೆ 25 ರೂಪಾಯಿ ದರವಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 25 ಕಿಮೀ ಪ್ರಯಾಣಕ್ಕೆ 50 ರೂಪಾಯಿ ನೀಡಬೇಕಿದ್ದರೆ. ಅದೇ ಬೆಂಗಳೂರಿನಲ್ಲಿ 90 ರೂಪಾಯಿ ವೆಚ್ಚ ಮಾಡಬೇಕಿರುವುದು ವಿಪರ್ಯಾಸ. ಕರ್ನಾಟಕದಲ್ಲಿ 25 ಕಿ.ಮೀಗಿಂತ ಅಧಿಕ ದೂರದ ಪ್ರಯಾಣಕ್ಕೆ ದಾಖಲೆಯ 90 ರೂಪಾಯಿ ಇದ್ದರೆ, ಮುಂಬೈನಲ್ಲಿ 42 ಕಿ.ಮೀವರೆಗಿನ ನಂತರದ ಪ್ರಯಾಣಕ್ಕೆ ಕೇವಲ 80 ರೂಪಾಯಿ ದರವಿದೆ.
ನಮ್ಮ ಮೆಟ್ರೋ ದರ ಶೇ.46ರಷ್ಟು ಏರಿಕೆ; ಬೆಂಗಳೂರು ಜನತೆಗೆ ಬಿಗ್ ಶಾಕ್ ಕೊಟ್ಟ ಬಿಎಂಆರ್‌ಸಿಎಲ್!
ಮೆಟ್ರೋ ಬೆಲೆ ಏರಿಕೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಬೆಲೆ ಏರಿಕೆ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಪರಿಷ್ಕೃತ ದರದಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತೆ. ಕೂಡಲೇ ಮೆಟ್ರೋ ಟಿಕೆಟ್ ಬೆಲೆ ಏರಿಕೆ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ. ಬಿಎಂಆರ್ಸಿಎಲ್ ಕಚೇರಿಗೆ ಭೇಟಿ ನೀಡಿ ಬೆಲೆ ಏರಿಕೆ ಹಿಂಪಡೆಯುವಂತೆ ಒತ್ತಾಯ ಮಾಡಲಾಗಿದೆ. ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಭೇಟಿ ಮಾಡಿ ಒತ್ತಾಯ ಮಾಡಿದ್ದಾರೆ. ಬಿಜೆಪಿ ನಿಯೋಗದಲ್ಲಿ ಶಾಸಕ ಸಿ.ಕೆ ರಾಮಮೂರ್ತಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಇದ್ದರು. ಭಾನುವಾರ ಮೆಟ್ರೋ ಟಿಕೆಟ್ ದರ ಏರಿಕೆಯಾಗಿತ್ತು. ಸುಮಾರು 46 ಪರ್ಸೆಂಟ್ ಟಿಕೆಟ್ ದರ ಏರಿಕೆ ಆಗಿದೆ . ಸಾರ್ವಜನಿಕ ವಲಯದಲ್ಲೂ ಬೆಲೆ ಏರಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಮಟ್ರೋ ವಿರುದ್ಧ ಜನಸಾಮಾನ್ಯರು ಸಹ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.