ವಿಧಾನಸಭೆ [ಮಾ.03]:  ನಾಗರಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ಜಾರಿಯಾಗಿರುವ ‘ಜನ ಸೇವಕ್‌’ ಯೋಜನೆಯನ್ನು ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಸೋಮವಾರ ಸದನದಲ್ಲಿ ಬಾವಿಗಿಳಿದು ನಡೆಸಿದ ಪ್ರತಿಭಟನೆ, ತೀವ್ರ ಗದ್ದಲ ನಡುವೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದರು.

ಟಿ.ದಾಸರಹಳ್ಳಿ ಕ್ಷೇತ್ರದಲ್ಲಿ ಜನ ಸೇವಕ್‌ ಯೋಜನೆಯನ್ನು ಆರಂಭಿಸಲಾಗಿದೆ. ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆಯನ್ನು ತಲುಪಿಸಿ ಅವರ ಜೀವನವನ್ನು ಸುಗಮಗೊಳಿಸುವುದು ಯೋಜನೆಯ ಉದ್ದೇಶವಾಗಿದೆ. ರಾಜಾಜಿನಗರ, ಬೊಮ್ಮನಹಳ್ಳಿ, ಮಹದೇವಪುರ ಕ್ಷೇತ್ರಗಳಿಗೆ ಯೋಜನೆಯನ್ನು ವಿಸ್ತರಿಸಲಾಗಿದೆ. ಮುಂದಿನ ದಿನದಲ್ಲಿ ರಾಜ್ಯದ ಎಲ್ಲ ಭಾಗಗಳಿಗೆ ಇದನ್ನು ವಿಸ್ತರಿಸಲಾಗುವುದು. ಐದು ಸೇವೆಗಳಿಗೆ ಸಿಮೀತವಾಗಿದ್ದ ಜನ ಸೇವಕ್‌ ಯೋಜನೆ ಈಗ 53 ಸೇವೆಗಳಿಗೆ ವಿಸ್ತರಿಸಲಾಗಿದೆ ಎಂದರು.

BSY ಮಹದಾಯಿಗಾಗಿ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಲಿ: ಪ್ರಹ್ಲಾದ ಜೋಶಿ...

ಬೆಂಗಳೂರು ನಗರದಲ್ಲಿ ಬೆಲೆ ಬಾಳುವ ಜಮೀನು ಕಬಳಿಕೆಯನ್ನು ತಡೆಯಲು ಮತ್ತು ಕಬಳಿಸಿದ ಜಮೀನನ್ನು ವಾಪಸ್‌ ಪಡೆಯಲು ಕೆ.ಜಿ.ಬೋಪಯ್ಯ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ. ಇದರಿಂದ ಮುಂದಿನ ದಿನದಲ್ಲಿ ಅನಧಿಕೃತವಾಗಿ ಜಮೀನು ಒತ್ತುವರಿಯನ್ನು ತಡೆಯಬಹುದಾಗಿದೆ. ಸಬ್‌ ಅರ್ಬನ್‌ ರೈಲ್ವೆ ಯೋಜನೆಯು ಬೆಂಗಳೂರಿಗೂ ವರದಾನವಾಗಿದ್ದು, ಜನ ದಟ್ಟಣೆ, ವಾಹನ ದಟ್ಟಣೆ ಕಡಿಮೆಯಾಗುವುದರಲ್ಲಿ ಸಂದೇಹ ಇಲ್ಲ. ಬಂಡವಾಳ ಹೂಡಿಕೆದಾರರಿಗೂ ಯೋಜನೆ ಲಾಭವಾಗಲಿದೆ. ಇದು 18,900 ಕೋಟಿ ರು. ಯೋಜನೆಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ 20:20 ಅನುಪಾತದಲ್ಲಿ ಬಂಡವಾಳ ಹೂಡಲಿದೆ. ಶೇ.60ರಷ್ಟುಹೂಡಿಕೆದಾರರಿಂದ ಬರಲಿದೆ ಎಂದು ಹೇಳಿದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನುಗಳನ್ನು ಅತಿಕ್ರಮಣ ಮಾಡಿ ಮನೆ ನಿರ್ಮಾಣ ಮಾಡಿದ ನಿವಾಸಿಗಳಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94 ಸಿ, 94 ಸಿಸಿ ಅನ್ವಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂಬತ್ತು ಸಾವಿರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಸಾವಿರ ಸೇರಿದಂತೆ 10 ಸಾವಿರ ಜನರಿಗೆ ಅವರ ಕಟ್ಟಡಗಳನ್ನು ಸಕ್ರಮಗೊಳಿಸಿ ಹಕ್ಕು ಪತ್ರವನ್ನು ವಿತರಿಸಲಾಗಿದೆ. ಇತ್ತೀಚಿನ ದಿನದಲ್ಲಿ ಬೆಂಗಳೂರು ಜನರಿಗೆ 10 ಸಾವಿರ ಮನೆಗಳನ್ನು ಸಕ್ರಮಗೊಳಿಸಿದ್ದು ಒಂದು ಇತಿಹಾಸವೇ ಎಂದು ಅಭಿಪ್ರಾಯಪಟ್ಟರು.