ಹುಬ್ಬಳ್ಳಿ[ಫೆ.29]: ಮಹದಾಯಿ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿ ಒಂದು ವಾರದೊಳಗೆ ನೋಟಿಫಿಕೇಶನ್‌ ಹೊರಡಿಸಿದ್ದೇವೆ. ಇದೀಗ ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಇದಕ್ಕೆ  500 ಕೋಟಿ ಮೀಸಲಿಟ್ಟು, ಕಾಮಗಾರಿ ಪ್ರಾರಂಭಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಮಹದಾಯಿ, ಕಳಸಾ- ಬಂಡೂರಿ ಯೋಜನೆಗಾಗಿ . 500 ಕೋಟಿ ಮೀಸಲಿಡುವಂತೆ ಕೋರಿದ್ದೇನೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿಂದೆ ಯಡಿಯೂರಪ್ಪ ಅವರೇ ಉಪಮುಖ್ಯಮಂತ್ರಿಯಾಗಿದ್ದಾಗ ಕಾಲುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಕೆಲಸ ಪ್ರಾರಂಭಿಸಿದ್ದರು. ಹೀಗಾಗಿ, ಈಗಲೂ ಹಣ ಮೀಸಲಿಟ್ಟು ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದರು.

ಮಹದಾಯಿ: ಕರ್ನಾಟಕಕ್ಕೆ ಜಯ, ಗೋವಾದ ತಕರಾರಿಗೆ ಮಣೆ ಹಾಕದ ಕೇಂದ್ರ!

ಇನ್ನು ಮಹದಾಯಿಯಡಿ ಯಾವ್ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಯಾವ್ಯಾವ ಯೋಜನೆಗಳಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು ಎಂಬುದನ್ನು ಅಧ್ಯಯನ ಮಾಡಲು ಕೂಡಲೇ ತಜ್ಞರ ಕಮಿಟಿ ರಚಿಸಬೇಕು. ಕುಡಿಯುವ ನೀರಿನ ಯೋಜನೆಗಂತೂ ಯಾವುದೇ ಸಮಸ್ಯೆಯಿಲ್ಲ. ಆ ಬಗ್ಗೆ ಒಂಟಠಿವರೆ ತಿಂಗಳ ಹಿಂದೆಯೇ ಕೇಂದ್ರ ಪರಿಸರ ಇಲಾಖೆ ಸ್ಪಷ್ಟಪಡಿಸಿದೆ. ಆದಕಾರಣ ಕುಡಿಯುವ ನೀರಿನ ಯೋಜನೆಗೆ ಸಮಸ್ಯೆಯಾಗಲ್ಲ ಎಂದರು.

ನಾಲ್ಕೈದು ತಿಂಗಳ ಹಿಂದೆಯೇ ನಾನೊಂದು ಕಾರ್ಯಕ್ರಮದಲ್ಲಿ ಐದಾರು ತಿಂಗಳಲ್ಲಿ ರಾಜ್ಯಕ್ಕೆ ಸಿಹಿ ಸುದ್ದಿ ನೀಡುತ್ತೇವೆ ಎಂದು ಹೇಳಿದ್ದೆ. ಅದರಂತೆ ಈಗ ಸಿಹಿ ಸುದ್ದಿ ನೀಡಿದ್ದೇವೆ ಎಂದು ತಿಳಿಸಿದರು.

ಇನ್ನು 60-70 ವರ್ಷಗಳಲ್ಲಿ ಆಗದೇ ಇರುವ ಅಂತಾರಾಜ್ಯ ಜಲ ವಿವಾದಗಳನ್ನು ಕೇಂದ್ರದ ಮೋದಿ ಸರ್ಕಾರ ಬಗೆಹರಿಸುತ್ತಿದೆ. ಅತ್ತ ನರ್ಮದಾ ನದಿಯ ವಿವಾದ ಬಗೆಹರಿಸಿದೆ. ಇತ್ತ ಮಹದಾಯಿ ಸಮಸ್ಯೆಯನ್ನು ಬಗೆಹರಿಸಿದೆ ಎಂದ ಅವರು, ಮಹದಾಯಿ ವಿಷಯದಲ್ಲಿ ಎರಡು ದಿನಗಳ ಹಿಂದೆಯಷ್ಟೇ ರಾಜ್ಯದ ಸಚಿವರಾದ ರಮೇಶ ಜಾರಕಿಹೊಳಿ, ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಸುರೇಶ ಅಂಗಡಿ ಸೇರಿದಂತೆ ಎಲ್ಲರೂ ಸೇರಿ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ನೋಟಿಫಿಕೇಶನ್‌ ಹೊರಡಿಸುವಂತೆ ಕೋರಿದ್ದೇವು. ಅದಕ್ಕೆ ಸ್ಪಂದಿಸಿದ್ದ ಅವರು ಕೇವಲ ಒಂದೇ ದಿನದಲ್ಲಿ ನೋಟಿಫಿಕೇಶನ್‌ ಹೊರಡಿಸಿದ್ದಾರೆ. ಇದಕ್ಕೆ ರಾಜ್ಯದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದರು.

ಮಹದಾಯಿ: ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ರೆ ನ್ಯಾಯ ಸಿಕ್ತು ಅಂತಲ್ಲ, ಜಾರಕಿಹೊಳಿ

ಮಹದಾಯಿ ವಿಷಯವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬಾರದೆಂದು ಗೋವಾ ತಡೆಯಾಜ್ಞೆ ತರುವ ಪ್ರಯತ್ನ ನಡೆಸುತ್ತಿದೆಯೆಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನೋಟಿಫಿಕೇಶನ್‌ ಹೊರಡಿಸಿರುವುದರಿಂದ ಯಾವುದೇ ಸಮಸ್ಯೆಯಾಗಲ್ಲ. ಕುಡಿಯುವ ನೀರಿನ ಯೋಜನೆಗಂತೂ ಎಳ್ಳಷ್ಟುಸಮಸ್ಯೆಯಾಗಲ್ಲ. ಈ ಸಂಬಂಧ ಕಾನೂನು ತಜ್ಞರೊಂದಿಗೆ ಮಾತನಾಡುತ್ತೇನೆ ಎಂದರು. ಇನ್ನೂ ಮಹದಾಯಿಗಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡಿದವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ತಿಳಿಸಿದರು.

ಮೇಕೆದಾಟು:

ಇನ್ನು ರಾಜ್ಯದ ಇನ್ನೊಂದು ಪ್ರಮುಖ ಯೋಜನೆಯಾಗಿರುವ ಮೇಕೆದಾಟುವಿನ ಬಗ್ಗೆಯೂ ಕೇಂದ್ರ ಜಲಸಂಪನ್ಮೂಲ ಸಚಿವರೊಂದಿಗೆ ಪ್ರಸ್ತಾಪಿಸಿದ್ದೇನೆ. ಅದಕ್ಕೂ ಪೂರಕ ವಾತಾವರಣವಿದೆ. ಅದಕ್ಕೆ ಸಂಬಂಧಪಟ್ಟರಾಜ್ಯಗಳೊಂದಿಗೆ ಶೀಘ್ರವೇ ಮಾತನಾಡುತ್ತೇವೆ. ಆ ವಿಷಯವಾಗಿ ಶೀಘ್ರವೇ ಸಿಹಿ ಸುದ್ದಿ ಕೊಡುವ ಪ್ರಯತ್ನ ಮಾಡುತ್ತೇವೆ ಎಂದು ನುಡಿದರು.

ನದಿ ಜೋಡಣೆ:

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕನಸಾಗಿದ್ದ ನದಿ ಜೋಡಣೆ ಯೋಜನೆ ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ನುಡಿದ ಅವರು, ಈ ಸಂಬಂಧ ಈಗಾಗಲೇ ಅಂತಾರಾಜ್ಯ ಟ್ರಿಬುನಲ್‌ ಡಿಸ್‌ಪ್ಯೂಟ್‌ ಆ್ಯಕ್ಟ್ನ್ನು ಲೋಕಸಭೆಯಲ್ಲಿ ಪಾಸು ಮಾಡಲಾಗಿದೆ. ಇದಕ್ಕೆ ಕೆಲ ರಾಜ್ಯಗಳು ಆತಂಕ ವ್ಯಕ್ತಪಡಿಸಿವೆ. ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಎಲ್ಲ ರಾಜ್ಯಗಳಿಗೂ ಮನವರಿಕೆ ಮಾಡಿಕೊಡುತ್ತೇವೆ. ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು. ಅಲ್ಲದೇ, ನದಿ ಜೋಡಣೆಯನ್ನೂ ಘೋಷಣೆ ಮಾಡಿದ ನಂತರವೇ ಜಾರಿಗೊಳಿಸಬೇಕು ಅಂತೇನೂ ಇಲ್ಲ. ಈಗಾಗಲೇ ನದಿ ಜೋಡಣೆ ಕೆಲಸ ಕೆಲವೆಡೆ ಪ್ರಾರಂಭವಾಗಿದೆ. ಕರ್ನಾಟಕದಲ್ಲೂ ಯಾವ್ಯಾವ ನದಿ ಜೋಡಣೆ ಮಾಡಬೇಕೋ ಆ ಕೆಲಸವನ್ನೂ ಮಾಡುತ್ತೇವೆ ಎಂದು ನುಡಿದರು.

ಸನ್ಮಾನ:

ಬಳಿಕ ಸಚಿವರನ್ನು ಬಿಜೆಪಿ ಮುಖಂಡರು, ಹಸಿರು ಟಾವೆಲ್‌ ಹಾಕಿ ಸನ್ಮಾನಿಸಿದರು. ಬಳಿಕ ವಾದ್ಯಗಳೊಂದಿಗೆ ಸಚಿವರನ್ನು ಭವ್ಯವಾಗಿ ಸ್ವಾಗತಿಸಿದರು. ಈ ವೇಳೆ ಶಿವಾನಂದ ಮುತ್ತಣ್ಣವರ, ಉಮೇಶ ದುಶಿ ಸೇರಿದಂತೆ ಹಲವರಿದ್ದರು.

ಅಂತಾರಾಜ್ಯ ಜಲವಿವಾದ ತಿದ್ದುಪಡಿ ಆ್ಯಕ್ಟ್: ಈ ಸಲ ಪಾಸ್‌

ಅಂತಾರಾಜ್ಯ ಜಲವಿವಾದಗಳ ನ್ಯಾಯಾಧಿಕರಣ ತಿದ್ದುಪಡಿ ಕಾಯ್ದೆ ಲೋಕಸಭೆಯಲ್ಲಿ ಪಾಸಾಗಿದೆ. ಈ ಅಧಿವೇಶನದಲ್ಲಿ ರಾಜ್ಯಸಭೆಯಲ್ಲೂ ಪಾಸಾಗುವ ಸಾಧ್ಯತೆ ಇದೆ. ಇದು ಕಾಯ್ದೆಯಾದರೆ ಅಂತಾರಾಜ್ಯ ಜಲವಿವಾದಗಳು ಶೀಘ್ರವೇ ಬಗೆಹರಿಯಲಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಮಾಧ್ಯಮ ಸಂವಾದದಲ್ಲಿ ಮಾತನಾಡಿ, ಈ ಆ್ಯಕ್ಟ್ ಜಾರಿಯಾದರೆ ಅಂತಾರಾಜ್ಯ ಜಲವಿವಾದಗಳು ವರ್ಷಗಟ್ಟಲೇ ಮುಂದುವರಿಯುವ ಪ್ರಮೇಯವೇ ಬರಲ್ಲ ಎಂದರು.

ಈ ಆ್ಯಕ್ಟ್ ನಡಿಯೇ ಎಲ್ಲ ಅಂತಾರಾಜ್ಯ ಜಲವಿವಾದಗಳಿಗೆ ಒಂದೇ ನ್ಯಾಯಾಧಿಕರಣ ರಚನೆಯಾಗುತ್ತದೆ. ಆದರೆ ಬೆಂಚ್‌ಗಳು (ಪೀಠ) ಮಾತ್ರ ಪ್ರತ್ಯೇಕವಾಗಿರುತ್ತವೆ. ಪ್ರತಿ ಚೆಂಚ್‌ಗೂ ಯಾವುದೇ ವಿವಾದವಿದ್ದರೂ 18 ತಿಂಗಳಲ್ಲೇ ಬಗೆಹರಿಸಬೇಕೆಂಬ ಕಾಲಮಿತಿ ಇರುತ್ತದೆ. ಅಷ್ಟರೊಳಗೆ ಆ ವಿವಾದವನ್ನು ಬಗೆಹರಿಸಿ ಆವಾರ್ಡ್‌ ಮಾಡಬೇಕು ಎಂಬ ನಿಯಮ ಇದರಲ್ಲಿರುತ್ತದೆ ಎಂದರು.

ಈ ಆ್ಯಕ್ಟ್ ಬಂದರೆ ಯಾವುದೇ ಜಲವಿವಾದವೂ ವರ್ಷಗಟ್ಟಲೇ ದಶಕಗಟ್ಟಲೇ ವಿಚಾರಣೆ ನಡೆಯುವುದು ನಡೆಯುವುದು ತಪ್ಪುತ್ತದೆ. 18 ತಿಂಗಳಲ್ಲಿ ಆ ವಿವಾದವೇ ಬಗೆಹರಿಯುತ್ತದೆ. ಇದರಿಂದ ಆ ರಾಜ್ಯಗಳು ದಶಕಗಳ ಕಾಲ ಕಾಯುವುದು ತಪ್ಪುತ್ತದೆ ಎಂದು ನುಡಿದರು.

ಈ ಆ್ಯಕ್ಟ್ ಬಗ್ಗೆ ಕೆಲ ರಾಜ್ಯಗಳು ಆಕ್ಷೇಪಿಸಿವೆ. ಯಾವ ರಾಜ್ಯಗಳು ಆಕ್ಷೇಪಿಸಿವೆಯೋ ಆ ರಾಜ್ಯಗಳೊಂದಿಗೆ ಕೇಂದ್ರ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಗುವುದು. ಬಹುತೇಕ ಇದೇ ಅಧಿವೇಶನದಲ್ಲಿ ಈ ಕಾಯ್ದೆ ಪಾಸಾಗುವ ಸಾಧ್ಯತೆ ಇದೆ ಎಂದು ನುಡಿದರು.

ಮಹದಾಯಿ:

ಮಹದಾಯಿ ವಿಷಯದಲ್ಲಿ ಸುಪ್ರೀಂಕೋರ್ಟ್‌ ಸೂಚನೆ ನೀಡಿದ ವಾರದಲ್ಲೇ ಗೆಜೆಟ್‌ ನೋಟಿಫಿಕೇಶನ್‌ನ್ನು ಕೇಂದ್ರ ಸರ್ಕಾರ ಮಾಡಿದೆ. ಇದು ಸ್ವಾಗತಾರ್ಹ. ಮೂರು ರಾಜ್ಯಗಳು ಹೆಚ್ಚುವರಿ ನೀರು ಬಯಸಿ ಮೇಲ್ಮನವಿ ಸಲ್ಲಿಸಿವೆ. ಅವುಗಳ ವಿಚಾರಣೆಯೂ ನಡೆಯಲಿದೆ. ಆದರೆ ಸದ್ಯ ನೋಟಿಪಿಕೇಶನ್‌ ಹೊರಡಿಸಿರುವುದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಯಾವುದೇ ಸಮಸ್ಯೆಯಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದರು.

ಕೆಲವೆಡೆ ಅರಣ್ಯ ಇಲಾಖೆ ಅನುಮತಿಯನ್ನೂ ಪಡೆಯಬೇಕಾಗುತ್ತೆ. ಅವುಗಳನ್ನೆಲ್ಲ ಪಡೆಯಬೇಕಾಗುತ್ತೆ. ಆದರೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಮಾತ್ರ ಪರಿಸರ ಇಲಾಖೆ ಅನುಮತಿ ಅಗತ್ಯವಿಲ್ಲ. ನಾವು ನಮ್ಮ ರಾಜ್ಯದ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ನುಡಿದರು.