ಬೆಂಗಳೂರು(ಮಾ.28): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಅಧಿಕಾರಾವಧಿ ಐದು ವರ್ಷಕ್ಕೆ ಹೆಚ್ಚಿಸುವುದು, ಹೊಸದಾಗಿ ಮುಖ್ಯ ಆಯುಕ್ತ ಹುದ್ದೆ ಮತ್ತು ವಲಯ ಆಯುಕ್ತರ ಹುದ್ದೆ ಸೃಷ್ಟಿ, ವಾರ್ಡ್‌ ಕಮಿಟಿ ರಚನೆ ಸೇರಿದಂತೆ ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಬಿಬಿಎಂಪಿ ವಿಧೇಯಕ ಜಾರಿಗೊಳಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಚಿವ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸಭೆಯಲ್ಲಿ ಬಿಬಿಎಂಪಿ ವಿಧೇಯಕ ಅಂಗೀಕರಿಸಲು ಆಡಳಿತ ಪಕ್ಷದಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಂಟಿ ಸದನ ಸಲಹಾ ಸಮಿತಿಗೆ ವಹಿಸಲಾಗಿದೆ. ಸಮಿತಿಯು ಚರ್ಚಿಸಿ ವಿಧೇಯಕದಲ್ಲಿ ಕೆಲವೊಂದು ಅಂಶಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೆ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುತ್ತದೆ.

ಬಿಬಿಎಂಪಿಯು 714 ಚ.ಕಿ.ಮೀ.ಪ್ರದೇಶ ಒಳಗೊಂಡಿದೆ. ವಿಶ್ವವಿಖ್ಯಾತ ಪಡೆದಿರುವ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ತರುವುದು ವಿಧೇಯಕ ಉದ್ದೇಶವಾಗಿದೆ. ಬೆಂಗಳೂರಲ್ಲಿ ಇಂದಿಗೂ 1976ರ ಕೆಎಂಸಿ ಕಾಯ್ದೆಯಡಿಯಲ್ಲಿಯೇ ತೆರಿಗೆ, ಉಪಕರ, ದಂಡ ವಿಧಿಸಲಾಗುತ್ತಿದೆ. ಅದಕ್ಕೆ ತಿದ್ದುಪಡಿ ತಂದು ಹೊಸ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಬಿಬಿಎಂಪಿ ಚುನಾವಣೆ ನಡೆದ ಬಳಿಕ ಮೊದಲ ಸಭೆಯಲ್ಲಿ ಮೇಯರ್‌, ಉಪಮೇಯರ್‌ ಆಯ್ಕೆಯಾಗಲಿದ್ದಾರೆ. ಇವರ ಅವಧಿಯು ಒಂದು ವರ್ಷದಿಂದ 5 ವರ್ಷಕ್ಕೆ ಹೆಚ್ಚಳವಾಗಲಿದೆ. ಪಾಲಿಕೆ ವ್ಯಾಪ್ತಿಗೆ ಒಬ್ಬ ಮುಖ್ಯ ಆಯುಕ್ತರ ಹುದ್ದೆ ಸೃಷ್ಟಿಸಿ ಅದಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯ ನಿಯೋಜನೆ ಮಾಡುವುದು ವಿಧೇಯಕದಲ್ಲಿದೆ. ವಲಯ ಆಯಕ್ತರ ಹುದ್ದೆಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿ ಅಧಿಕಾರಿ ನಿಯೋಜನೆ ಮಾಡುವುದು, ವಲಯ ಸಮಿತಿ ರಚನೆ ಮಾಡುವುದು ಮತ್ತು ಪ್ರತಿ ವಾರ್ಡ್‌ನಲ್ಲಿ ವಾರ್ಡ್‌ ಸಮಿತಿ ರಚನೆ ಮಾಡಿ ಅದರ ಕೆಳಗೆ ಹಲವು ಏರಿಯಾ ಸಭಾ ರಚನೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಮನರಂಜನಾ ತೆರಿಗೆ ವಿಧಿಸಲು ಅವಕಾಶ ಇದೆ.

ಪಾಲಿಕೆಗೆ ಮುಖ್ಯ ಆಯುಕ್ತರನ್ನು ನಿಯೋಜಿಸಿ ಅವರ ಕೆಳಗೆ ನಾಲ್ಕು ವಲಯಗಳಿಗೆ ನಾಲ್ಕು ಆಯುಕ್ತರನ್ನು ನೇಮಕ ಮಾಡಲಾಗುವುದು. ಆದರೆ, ಇದರಲ್ಲಿ ಬಿಬಿಎಂಪಿಯ ವಿಭಜನೆ ಮಾಡುವ ಉದ್ದೇಶ ಇಲ್ಲ ಎಂದು ಹೇಳಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ. ಬಿಬಿಎಂಪಿಗೆ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಆದಾಯ ಬರುತ್ತಿಲ್ಲ. ಹೀಗಾಗಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ವೈಜ್ಞಾನಿಕವಾಗಿ ತೆರಿಗೆ, ದಂಡ ವಿಧಿಸುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.