ಬೆಂಗಳೂರು(ಮೇ.14): ರಾಜ್ಯದಲ್ಲಿ ಕೊರೋನಾ ಸೋಂಕಿತರ 1 ಸಾವಿರದ ಗಡಿ ಮುಟ್ಟುತ್ತಿದ್ದು, ಪ್ರತಿ ಸೋಂಕಿತರ ಚಿಕಿತ್ಸೆಗೆ ಸರಾಸರಿ 3.5 ಲಕ್ಷ ರು. ವೆಚ್ಚವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾದರೆ ರೋಗಿಗಳಿಂದಲೇ ಚಿಕಿತ್ಸಾ ವೆಚ್ಚ ಭರಿಸುವಂತೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ. ಇದರಲ್ಲಿ 433 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದು, ಪ್ರಸ್ತುತ 460 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಮತ್ತಿಬ್ಬರು ಬಲಿ, 34 ಹೊಸ ಕೇಸ್‌!

ಈವರೆಗೆ ಬಿಡುಗಡೆಯಾಗಿರುವ 433 ಮಂದಿ ಪೈಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ 136 ರೋಗಿಗಳಿಗೆ ಸರಾಸರಿ 3.48 ಲಕ್ಷ ರು.ಗಳಂತೆ 4.74 ಕೋಟಿ ರು. ವೆಚ್ಚವಾಗಿದೆ. ಒಟ್ಟಾರೆ ಗುಣಮುಖರಾದವರ ಚಿಕಿತ್ಸೆಗೆ ಈವರೆಗೆ 15 ಕೋಟಿ ರು. ವೆಚ್ಚವಾಗಿದೆ. ಆದರೆ, ಆರೋಗ್ಯ ಇಲಾಖೆಯು ಗುಣಮುಖರಾದವರಿಂದ ಒಂದು ನಯಾಪೈಸೆ ಶುಲ್ಕವನ್ನೂ ಪಡೆದುಕೊಂಡಿಲ್ಲ.

ಮೊದಲ ಹಂತದಲ್ಲಿ ಚಿಕಿತ್ಸೆ ನೀಡುತ್ತಿದ್ದ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಅನುದಾನದಲ್ಲೇ ಚಿಕಿತ್ಸೆ ನೀಡಿದ್ದರೆ ಬಳಿಕ ಆಯುಷ್ಮಾನ್‌ ಭಾರತ್‌ ಯೋಜನೆಯಡಿಗೆ ಕೊರೋನಾ ಚಿಕಿತ್ಸೆಯನ್ನು ತರಲಾಯಿತು. ಹೀಗಾಗಿ ಎಲ್ಲಾ ಆಸ್ಪತ್ರೆಗಳು ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡುತ್ತಿವೆ.

ಕೊರೋನಾ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ 3.5 ಲಕ್ಷ ರೂ. ವೆಚ್ಚ!

ಆದರೆ, ಆಯುಷ್ಮಾನ್‌ ಭಾರತ್‌ ಯೋಜನೆ ವ್ಯಾಪ್ತಿಗೆ ಸಂಪೂರ್ಣವಾಗಿ ಬಾರದ ಎಪಿಎಲ್‌ ಕಾರ್ಡ್‌ದಾರರು, ಒಂದು ಕುಟುಂಬದಿಂದ 5-6 ಮಂದಿ ಸೋಂಕಿತರಾದವರ ಕುಟುಂಬಗಳಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯ ಮಿತಿಯಲ್ಲಿ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ. ಏಕೆಂದರೆ, ಆಯುಷ್ಮಾನ್‌ ಭಾರತ್‌ ಯೋಜನೆಯಡಿ ವರ್ಷಕ್ಕೆ ಕುಟುಂಬ ಒಂದಕ್ಕೆ 5 ಲಕ್ಷ ರು. ಮಾತ್ರ ಬಳಕೆಗೆ ಮಿತಿ ಇದೆ. ಸರ್ಕಾರ ಈ ನಿಯಮ ಸಡಿಲಿಸಿ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು, ಮುಂದಿನ ಹಂತದಲ್ಲಿ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು. ಹೀಗಾಗಿ ರೋಗಿಗಳಿಂದಲೇ ಚಿಕಿತ್ಸೆ ವೆಚ್ಚ ಭರಿಸಬೇಕು. ಬಿಪಿಎಲ್‌ ವರ್ಗದಿಂದ ಪಾವತಿ ಸಾಧ್ಯವಾಗದಿದ್ದರೆ ಕನಿಷ್ಠ ಎಪಿಎಲ್‌ ವರ್ಗದವರಿಗಾದರೂ ಚಿಕಿತ್ಸೆ ವೆಚ್ಚ ವಿಧಿಸಬೇಕು ಎಂಬ ಚರ್ಚೆ ಆರೋಗ್ಯ ಇಲಾಖೆ ಹಂತದಲ್ಲಿ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಾಧ್ಯತೆ ತಳ್ಳಿ ಹಾಕಿದ ಅಧಿಕಾರಿಗಳು

ಈ ಬಗ್ಗೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು, ‘ಇಂತಹ ಯಾವುದೇ ಚಿಂತನೆಯನ್ನು ಆರೋಗ್ಯ ಇಲಾಖೆ ಮಾಡಿಲ್ಲ. ಪ್ರಸ್ತುತ ರಾಜ್ಯ ಸರ್ಕಾರದ ಮೊದಲ ಗುರಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು. ಇಂತಹ ಸಂಕಷ್ಟದಲ್ಲಿ ನಮ್ಮ ರಾಜ್ಯ ಮಾತ್ರವೇ ಅಲ್ಲ ಯಾರೂ ಶುಲ್ಕ ವಿಧಿಸಲು ಸಾಧ್ಯವಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕೊರೋನಾ ಜಾಗೃತಿಯ ಧ್ವನಿ ದಕ್ಷಿಣಕನ್ನಡದ ಹೆಣ್ಮಕ್ಕಳದ್ದು!

‘ಇಂತಹ ಸಮಸ್ಯೆಯಾಗದಂತೆ ‘ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ’ ಯೋಜನೆಯಡಿ ಕೊರೋನಾ ಸೋಂಕಿನ ಚಿಕಿತ್ಸೆಯನ್ನೂ ತರಲಾಗಿದೆ. ಮೊದಲಿಗೆ 1,600 ಪ್ರಾಥಮಿಕ, ದ್ವಿತೀಯ ಹಂತದ ಹಾಗೂ ಸಂಕೀರ್ಣ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವುಗಳನ್ನು 1,600 ಪ್ರೊಸಿಜ​ರ್‍ಸ್ (ವಿಧಾನ) ಎಂದು ಪರಿಗಣಿಸಿದ್ದು ಪ್ರಸ್ತುತ ಕೊರೋನಾ ಸೋಂಕಿನಿಂದ ಉಂಟಾಗುವ ವಿವಿಧ ಕಾಯಿಲೆಗಳನ್ನು ಗುರುತಿಸಿ ಹೆಚ್ಚುವರಿ ಪ್ರೊಸಿಜರ್‌ ಕೋಡ್‌ ನೀಡಲಾಗಿದೆ. ಇನ್‌ಫ್ಲ್ಯುಯೆಂಜಾಗೆ ಸಂಬಂಧಿಸಿದ ಕಾಯಿಲೆಗಳನ್ನು ಗುರುತಿಸಿ ಆಯುಷ್ಮಾನ್‌ ಭಾರತ್‌ - ಆರೋಗ್ಯ ಕರ್ನಾಟಕ ಯೋಜನೆಯಡಿ ಕೊರೋನಾ ಸೋಂಕಿತರಿಗೆ ವೈದ್ಯಕೀಯ ವೆಚ್ಚ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಹಣಕಾಸಿನ ಯಾವುದೇ ಸಮಸ್ಯೆ ಉಂಟಾಗಿಲ್ಲ’ ಎಂದು ಹೇಳಿದರು.