ಬೆಂಗಳೂರು (ಮಾ.13):  ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಸೋಂಕು ಹೆಚ್ಚುತ್ತಿರುವ ಕೆಲ ಜಿಲ್ಲೆಗಳಲ್ಲಿ ನಿರ್ದಿಷ್ಟಪ್ರಮಾಣದ ಸೋಂಕು ಪರೀಕ್ಷೆಯ ಹೊಸ ಗುರಿ ನಿಗದಿ ಮಾಡಿದೆ.

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಆರೋಗ್ಯ ಇಲಾಖೆ ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಪ್ರಕಾರ ಎಂಟು ಜಿಲ್ಲೆಗಳಲ್ಲಿ ಹೊಸದಾಗಿ ಸೋಂಕು ಪರೀಕ್ಷೆ ಪ್ರಮಾಣವನ್ನು ನಿಗದಿ ಮಾಡಿದೆ. ಈ ಪೈಕಿ ಅತಿ ಹೆಚ್ಚು ಪರೀಕ್ಷೆಗಳನ್ನು ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಯ ಪ್ರದೇಶಕ್ಕೆ ನಿಗದಿ ಮಾಡಿದೆ. ಬೆಂಗಳೂರಿನಲ್ಲಿ ನಿತ್ಯ 40 ಸಾವಿರ ಸೋಂಕು ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ.

ಇಳಿದಂತೆ ಮೈಸೂರು 5,000, ತುಮಕೂರು 3,500, ಬೆಳಗಾವಿ ಮತ್ತು ದಕ್ಷಿಣ ಕನ್ನ ಡ ಜಿಲ್ಲೆಯಲ್ಲಿ 3,000 ವಿಜಯಪುರ ಮತ್ತು ಉಡುಪಿ ಜಿಲ್ಲೆಯಲ್ಲಿ 2,000 ಹಾಗೂ ಕೊಡಗಿನಲ್ಲಿ 1,000 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದು ತಿಳಿಸಿದೆ.

ಎರಡನೇ ಅಲೆ ಭೀತಿ: ಕೋವಿಡ್‌ ಟೆಸ್ಟ್‌ ಹೆಚ್ಚಳಕ್ಕೆ ತಾಕೀತು ..

ಇನ್ನು ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ಬಾಗಲಕೋಟೆ, ವಿಜಯಪುರ, ಬೀದರ್‌, ಕಲಬುರಗಿ, ಬೆಂಗಳೂರು ಗ್ರಾಮಾಂತರಗಳಲ್ಲಿನ ಈಗಾಗಲೇ ನಿಗದಿ ಪಡಿಸಿರುವ ಗುರಿಯನ್ನು ತಲುಪಲು ಅಗತ್ಯ ಕ್ರಮ ಕೈಗೊಳ್ಳಬೇಕು. ದಾವಣಗೆರೆ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬಳ್ಳಾರಿ, ಮೈಸೂರು, ಬೆಳಗಾವಿ ಜಿಲ್ಲೆಗಳಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸೂಚಿಸಲಾಗಿದೆ. ಆದರೆ, ಎಷ್ಟುಹೆಚ್ಚಿಸಬೇಕು ಎಂಬುದನ್ನು ತಿಳಿಸಿಲ್ಲ.

ಇದಲ್ಲದೆ, ದಕ್ಷಿಣ ಕನ್ನಡ, ಬೀದರ್‌, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕಲಬುರಗಿ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರತಿ ಸೋಂಕಿತನಿಗೂ ಕನಿಷ್ಠ ಪಕ್ಷ 20 ಸಂಪರ್ಕಿತರನ್ನು ಪತ್ತೆ ಹಚ್ಚಬೇಕು ಎಂದು ನಿರ್ದೇಶನ ನೀಡಲಾಗಿದೆ.