ಬೆಂಗಳೂರು(ಡಿ.13): ಸಾರಿಗೆ ನೌಕರರು ಪಟ್ಟು ಸಡಿಲಿಸದೆ ಮುಷ್ಕರ ಮುಂದುವರೆಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಖಾಸಗಿ ಬಸ್ಸುಗಳನ್ನು ಸರ್ಕಾರಿ ಪ್ರಯಾಣದ ದರದಲ್ಲಿ ಕಾರ್ಯಾಚರಣೆಗಿಳಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ, ‘ಸರ್ಕಾರದಿಂದ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ. ಬಂದರೂ ಸರ್ಕಾರದ ದರದಲ್ಲಿ ಖಾಸಗಿ ಬಸ್ಸುಗಳ ಕಾರ್ಯಾಚರಣೆ ಸಾಧ್ಯವಿಲ್ಲ’ ಎಂದು ಖಾಸಗಿ ಬಸ್‌ ಮಾಲೀಕರ ‘ರಾಜ್ಯ ಟ್ರಾವೆಲ್ಸ್‌ ಆಪರೇಟ​ರ್‍ಸ್ ಸಂಘ’ ಹೇಳಿದೆ.

ಖಾಸಗಿ ಬಸ್‌, ಆಟೋಗಳಲ್ಲಿ ಡಬಲ್ ರೇಟ್

‘ಸಾರಿಗೆ ನೌಕರರು ಮೊಂಡಾಟ ಮುಂದುವರೆಸಿದರೆ ಖಾಸಗಿ ಬಸ್‌ಗಳನ್ನು ಸರ್ಕಾರಿ ದರದಲ್ಲಿ ಸಂಚರಿಸಲು ಅನುಮತಿ ನೀಡಲಾಗುವುದು. ತನ್ಮೂಲಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಶನಿವಾರ ಹೇಳಿದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಟ್ರಾವೆಲ್ಸ್‌ ಆಪರೇಟ​ರ್‍ಸ್ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ನಟರಾಜ್‌ ಶರ್ಮಾ, ‘ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳನ್ನು ಕಾರ್ಯಾಚರಣೆಗಿಳಿಸುವ ಸಂಬಂಧ ಇದುವರೆಗೂ ಸರ್ಕಾರದಿಂದ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಸಂಪರ್ಕಿಸಿದರೂ ಸರ್ಕಾರದ ದರದಲ್ಲಿ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬಿಎಂಟಿಸಿ ಚಾರ್ಜಿಂಗ್‌ ಸೆಂಟರ್‌ನಲ್ಲಿ ಖಾಸಗಿ ಬಸ್‌ಗಳಿಗೂ ಅವಕಾಶ?

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ 14 ಸಾವಿರ ಖಾಸಗಿ ಬಸ್ಸುಗಳಿವೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಪ್ರಸ್ತುತ 1 ಸಾವಿರ ಬಸ್ಸುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಸರ್ಕಾರದ ದರದಲ್ಲಿ ಬಸ್‌ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ. ನಮ್ಮದೇ ದರಕ್ಕೆ ಒಪ್ಪಿದರೆ ಮಾತ್ರ ಒಪ್ಪಬಹುದು. ಆದರೆ, ಕಾರ್ಯಾಚರಣೆಗೆ ಎಲ್ಲ ಬಸ್ಸುಗಳೂ ಲಭ್ಯವಾಗುವುದಿಲ್ಲ. ಕೋವಿಡ್‌ ನಷ್ಟದಿಂದ ಬಸ್‌ ಕಾರ್ಯಾಚರಣೆ ಮಾಡಲಾಗದೆ ನಷ್ಟದಲ್ಲಿದ್ದೇವೆ. ಈಗ ಎಲ್ಲಾ ಬಸ್ಸುಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆಗೆ ಟ್ಯಾಕ್ಸ್‌ ಕಟ್ಟಬೇಕು. ಇದು ಮಾಲೀಕರಿಗೆ ಕಷ್ಟವಾಗುತ್ತದೆ. ಸದ್ಯ ಒಂದು ಸಾವಿರ ಬಸ್ಸುಗಳನ್ನು ಮಾತ್ರ ಕಾರ್ಯಾಚರಣೆಗೆ ಇಳಿಸಬಹುದು’ ಎಂದು ಅವರು ತಿಳಿಸಿದರು.