ಬೆಂಗಳೂರು(ನ.11): ಗುತ್ತಿಗೆ ಆಧಾರದಡಿ 300 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಮುಂದಾಗಿರುವ ಬಿಎಂಟಿಸಿ ಈ ಬಸ್‌ಗಳ ಚಾರ್ಜಿಂಗ್‌ಗಾಗಿ ಸ್ಥಾಪಿಸಲಾಗುವ ಕೇಂದ್ರಗಳಲ್ಲಿ ಖಾಸಗಿ ಎಲೆಕ್ಟ್ರಿಕ್‌ ವಾಹನಗಳಿಗೂ ಚಾರ್ಜಿಂಗ್‌ಗೆ ಅವಕಾಶ ನೀಡಿ ಆದಾಯ ಗಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.

ಚಾರ್ಜಿಂಗ್‌ ಕೇಂದ್ರಗಳಲ್ಲಿ ಬಸ್‌ಗಳ ಬ್ಯಾಟರಿ ಚಾರ್ಜ್‌ ಮಾಡುವುದರ ಜೊತೆಗೆ ಖಾಸಗಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ಗೂ ಅವಕಾಶ ಕಲ್ಪಿಸುವುದರಿಂದ ನಿಗಮಕ್ಕೂ ಆದಾಯ ಬರಲಿದೆ. ಆದರೆ, ನಿಗಮಕ್ಕೆ ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣೆಯಲ್ಲಿ ಯಾವುದೇ ಅನುಭವ ಇಲ್ಲ. ಚಾರ್ಜಿಂಗ್‌ ಕೇಂದ್ರ ತಾಂತ್ರಿಕಯ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ. ಗುತ್ತಿಗೆ ಪಡೆಯುವ ಕಂಪನಿಯೆ ನಿರ್ವಹಣೆ ಹೊಣೆ ಹೊರುವುದರಿಂದ ಖಾಸಗಿ ಎಲೆಕ್ಟ್ರಿಕ್‌ ವಾಹನಗಳಿಗೂ ಚಾರ್ಜಿಂಗ್‌ಗೆ ಅವಕಾಶ ನೀಡುವುದರ ಸಾಧಕ-ಬಾಧಕಗಳ ಕುರಿತು ಕೂಲಂಕಷವಾಗಿ ಚರ್ಚಿಸಿ, ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಬಿಎಂಟಿಸಿಯಿಂದ ಮತ್ತಷ್ಟು ಎಲೆಕ್ಟ್ರಿಕ್‌ ಬಸ್‌ ಸಂಚಾರ

ಕೇಂದ್ರ ಸರ್ಕಾರದ ಫೇಮ್‌-2 ಯೋಜನೆಯಡಿ ನೀಡಲಾಗುವ ಅನುದಾನ ಹಾಗೂ ರಾಜ್ಯ ಸರ್ಕಾರದ ಸಹಾಯಧನ ಬಳಸಿಕೊಂಡು 300 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಮುಂದಾಗಿದೆ. ಈ ಸಂಬಂಧ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಿರುವ ನಿಗಮ, ಗುತ್ತಿಗೆ ಮಾದರಿಯಲ್ಲಿ ನಿಗಮಕ್ಕೆ ಬಸ್‌ ಪೂರೈಸುವ ಕಂಪನಿಯೆ ಚಾರ್ಜಿಂಗ್‌ ಘಟಕ ಸ್ಥಾಪಿಸುವಂತೆ ಷರತ್ತು ವಿಧಿಸಿದೆ. ಈ ಚಾರ್ಜಿಂಗ್‌ ಕೇಂದ್ರಗಳಿಗೆ ಡಿಪೋಗಳು ಹಾಗೂ ಬಸ್‌ ನಿಲ್ದಾಣಗಳಲ್ಲಿ ನಿಗಮವೇ ಜಾಗ ನೀಡಲಿದೆ.
ಟೆಂಡರ್‌ ಚಾಲ್ತಿಯಲ್ಲಿದೆ :

ಈಗಾಗಲೇ ತೆಲಂಗಾಣ ಮೂಲದ ಒಲೆಕ್ಟ್ರಾ ಗ್ರೀನ್‌ ಟೆಕ್‌ ಕಂಪನಿ ಪ್ರಾಯೋಗಿಕ ಸಂಚಾರಕ್ಕೆ ಒಂದು ಎಲೆಕ್ಟ್ರಿಕ್‌ ಬಸ್‌ ನೀಡಿದ್ದು, ನಗರದ ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಪ್ರಾಯೋಗಿಕ ಸಂಚಾರ ಮಾಡದ ಮಾತ್ರಕ್ಕೆ ಈ ಕಂಪನಿಗೆ ಗುತ್ತಿಗೆ ನೀಡುವುದಿಲ್ಲ. ಟೆಂಡರ್‌ನಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದು, ಕಡಿಮೆ ಮೊತ್ತಕ್ಕೆ ಬಿಡ್‌ ಸಲ್ಲಿಸುವ ಹಾಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಕಂಪನಿಗೆ ಗುತ್ತಿಗೆ ಸಿಗಲಿದೆ. ಟೆಂಡರ್‌ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿರುವುದರಿಂದ ನಗರದಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರಕ್ಕೆ ಕೊಂಚ ಸಮಯ ಬೇಕಾಗುತ್ತದೆ ಎಂದರು.