ಭದ್ರತಾ ಕಾರಣಗಳಿಗಾಗಿ ಆರ್‌ಸಿಬಿ ವಿಜಯೋತ್ಸವವನ್ನು ಭಾನುವಾರ ನಡೆಸಬೇಕೆಂದು ಪೊಲೀಸರು ಸೂಚಿಸಿದ್ದರೂ, ಸರ್ಕಾರ ಸೋಮವಾರವೇ ನಡೆಸಲು ಪಟ್ಟು ಹಿಡಿದಿತ್ತು. ಈ ಆತುರದ ನಿರ್ಧಾರದ ಹಿಂದಿನ ಕಾರಣವೇನು ಎಂದು ವಿಪಕ್ಷಗಳು ಪ್ರಶ್ನಿಸಿವೆ. ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, 56 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರು (ಜೂ.5): ಬೆಂಗಳೂರು ಪೊಲೀಸರು ಲಾಜಿಸ್ಟಿಕಲ್ ಮತ್ತು ಭದ್ರತಾ ಕಾರಣಗಳಿಗಾಗಿ ಭಾನುವಾರದಂದು ಆರ್‌ಸಿಬಿ ವಿಜಯೋತ್ಸವ ನಡೆಸಬೇಕೆಂದು ಸೂಚಿಸಿದ್ದರೂ, ಕರ್ನಾಟಕ ಸರ್ಕಾರ ಮಾತ್ರ ಐಪಿಎಲ್ ಗೆಲುವಿನ ಮರುದಿನ ಆರ್‌ಸಿಬಿಗೆ ಅಭಿನಂದನಾ ಸಮಾರಂಭವನ್ನು ನಡೆಸಬೇಕು ಎಂದು ಪಟ್ಟು ಹಿಡಿದಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.
ಭಾನುವಾರ ರಜಾ ದಿನವಾಗಿರುವುದರಿಂದ ಸಂಚಾರ ಅಡಚಣೆಯನ್ನು ಕಡಿಮೆ ಮಾಡಲು ಮತ್ತು ಭದ್ರತಾ ವ್ಯವಸ್ಥೆಗಳನ್ನು ಯೋಜಿಸಲು ಮತ್ತು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲು ಸಾಕಷ್ಟು ಸಮಯವನ್ನು ಒದಗಿಸಲು ಪೊಲೀಸರು ಶಿಫಾರಸು ಮಾಡಿದ್ದರು ಎಂದು ವರದಿಯಾಗಿದೆ.
ಜೂನ್ 3 ಮತ್ತು 4 ರಂದು ಆರ್‌ಸಿಬಿಯ ಐಪಿಎಲ್ ಗೆಲುವಿನ ನಂತರ ಬೆಂಗಳೂರಿನ ಬೀದಿಗಳಲ್ಲಿ ಜಮಾಯಿಸಿದ್ದ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ತಡರಾತ್ರಿಯವರೆಗೆ, ಅಂದರೆ ಬೆಳಿಗ್ಗೆ 4 ಗಂಟೆಯವರೆಗೆ ಕೆಲಸ ಮಾಡಿದರು. ತಮ್ಮ ಶಿಫ್ಟ್‌ನಲ್ಲಿ ಕೆಲಸ ಮಾಡಿ ಸಾಕಷ್ಟು ದಣಿದಿದ್ದ ಪೊಲೀಸರು ಮರುದಿನ ಬೆಳಿಗ್ಗೆ ಮತ್ತೊಂದು ಹೆಚ್ಚಿನ ಒತ್ತಡದ ಕಾರ್ಯಕ್ರಮಕ್ಕಾಗಿ ಮತ್ತೆ ನಿಯೋಜಿಸುವುದು "ತೊಂದರೆದಾಯಕ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಕಳವಳಗಳನ್ನು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಲಾಗಿದ್ದರೂ, ಸರ್ಕಾರ ಮಾತ್ರ ತನ್ನ ನಿರ್ಧಾರದಿಂದ ಅಚಲವಾಗಿತ್ತು ಮತ್ತು ಮರುದಿನವೇ ಸಮಾರಂಭವನ್ನು ನಡೆಸಲು ತೀರ್ಮಾನ ಮಾಡಿತ್ತು. ಆದರೆ, ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ ಅವರು ಸರ್ಕಾರವನ್ನು ಯೋಜನೆಯಿಂದ ದೂರವಿಟ್ಟರು.
"ನಾವಲ್ಲ. ಆಚರಣೆಗಳ ಬಗ್ಗೆ ನಾವು ಆರ್‌ಸಿಬಿ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘಕ್ಕೆ (ಕೆಎಸ್‌ಸಿಎ) ಯಾವುದೇ ವಿನಂತಿಯನ್ನು ಮಾಡಿಲ್ಲ. ಅವರೇ ಅದನ್ನು ಆಯೋಜಿಸಿದ್ದರು. ಇದು ಬೆಂಗಳೂರು ತಂಡವಾದ್ದರಿಂದ, ಸರ್ಕಾರವು ಆಚರಣೆಯ ಭಾಗವಾಗಿರಬೇಕು ಎಂದು ನಾವು ಭಾವಿಸಿದ್ದೇವೆ. ಅಷ್ಟೇ" ಎಂದು ಅವರು ಹೇಳಿದ್ದಾರೆ.
ಸರ್ಕಾರದ ಈ ನಿರ್ಧಾರದ ಹಿಂದಿನ ತುರ್ತು ಏನೆಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ. "ಈ ಕಾರ್ಯಕ್ರಮವನ್ನು ನಡೆಸಲು ಇಷ್ಟೊಂದು ಆತುರ ಏಕೆ ಇತ್ತು? ಬೇರೆ ಯಾರಾದರೂ ಇದನ್ನು ಏರ್ಪಡಿಸಿದ್ದರೂ, ಸರ್ಕಾರ ಅದನ್ನು ಏಕೆ ಅನುಮೋದಿಸಿತು? ಇದನ್ನು 3 ರಿಂದ 7 ದಿನಗಳ ನಂತರ ಸುಲಭವಾಗಿ ನಡೆಸಬಹುದಿತ್ತು" ಎಂದಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಕಾರ್ಯಕ್ರಮವನ್ನು ಆಯೋಜಿಸಲು ಆತುರಪಟ್ಟಿದ್ದನ್ನು ಪ್ರಶ್ನೆ ಮಾಡಿದ್ದಾರೆ. "ಈ ಘಟನೆಗೆ ಸರ್ಕಾರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಂತರ ಕಾರ್ಯಕ್ರಮ ನಡೆಸಿದ್ದರೆ ಏನು ತಪ್ಪಾಗುತ್ತಿತ್ತು? ಅವರು ಏಕೆ ಇಷ್ಟೊಂದು ಆತುರದಲ್ಲಿದ್ದರು? ಇದು 'ಬ್ರ್ಯಾಂಡ್ ಬೆಂಗಳೂರು' ಅಲ್ಲ, ಇದು ಡೆತ್ ಬೆಂಗಳೂರು" ಎಂದು ಹೇಳಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಜನಸಂದಣಿಯನ್ನು ನಿರ್ವಹಿಸಲು 5,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದರು. ಆದರೆ, ಸರ್ಕಾರ ಅಭಿಮಾನಿಗಳ ಸುರಕ್ಷತೆಗಿಂತ ರಾಜಕೀಯ ಮತ್ತು ಪ್ರಚಾರಕ್ಕೆ ಆದ್ಯತೆ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದರು, 56 ಮಂದಿ ಗಾಯಗೊಂಡಿದ್ದಾರೆ.


