ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ನೂಕುನುಗ್ಗಲಿನಿಂದ 11 ಜನ ಸಾವನ್ನಪ್ಪಿದ ಘಟನೆಯನ್ನು ಸಿಟಿ ರವಿ 'ಸರ್ಕಾರದ ಪ್ರಾಯೋಜಿತ ಹತ್ಯಾಕಾಂಡ' ಎಂದು ಕರೆದಿದ್ದಾರೆ.
ಚಿಕ್ಕಮಗಳೂರು (ಜೂ.5): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ನೂಕುನುಗ್ಗಲಿನಿಂದ 11 ಜನ ಸಾವನ್ನಪ್ಪಿದ ದುರಂತ ಘಟನೆಗೆ ಸಿಟಿ ರವಿ ಅವರು ತೀವ್ರ ಸಂತಾಪ ಸೂಚಿಸಿದರು. ಈ ಘಟನೆ 'ಸರ್ಕಾರದ ಪ್ರಾಯೋಜಿತ ಹತ್ಯಾಕಾಂಡ ಎಂದು ಕರೆದರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಚಾರದ ಹಪಾಹಪಿಯಿಂದ ದುರಂತ:
ಇದು ಸರ್ಕಾರದ ಪ್ರಚಾರದ ಹಪಹಪಿತನದಿಂದ ಸಂಭವಿಸಿದ ಸಾವು. ಜನ ಸೇರಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿತ್ತು, ಸರ್ಕಾರವೇ ಈ ಕಾರ್ಯಕ್ರಮವನ್ನು ಘೋಷಿಸಿತ್ತು. ಆದರೂ, ಜನರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯ ವಹಿಸಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಸರ್ಕಾರಕ್ಕೆ ಜನರ ರಕ್ಷಣೆ ಆದ್ಯತೆಯಾಗಬೇಕಿತ್ತೇ ಹೊರತು, ಪ್ರಚಾರದ ತೆವಲು ಅಲ್ಲ. ಈ ದುರಂತಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೈತಿಕ ಹೊಣೆಯನ್ನು ಹೊರಬೇಕು ಎಂದು ಒತ್ತಾಯಿಸಿದರು.
ಅಲ್ಲು ಅರ್ಜುನ್ ಜೈಲಿಗೆ ಕಳಿಸಿದಿರಿ, ಈಗ ನೀವು ಹೋಗಬೇಕು ತಾನೆ?
ಈ ಹಿಂದೆ ಮಹಿಳೆಯೊಬ್ಬಳು ಮೃತಪಟ್ಟಿದ್ದಕ್ಕೆ ತೆಲುಗು ನಟ ಅಲ್ಲು ಅರ್ಜುನ್ ಎ1 ಮಾಡಿ ಜೈಲಿಗೆ ಹಾಕಿದ್ರಿ . ಈಗ ನೀವೇ ಜೈಲಿಗೆ ಹೋಗಬೇಕು, ಮಾನ ಮಾರ್ಯಾದೆ ಇದ್ರೆ ರಾಜೀನಾಮೆ ಕೊಡಿ. ಬೇರೆಯವರ ಪ್ರಕರಣಗಳಾದಾಗ ಸಂವಿಧಾನ ಕಾನೂನು ಎನ್ನುವ ನೀವು, ನಿಮ್ಮದೇ ಪ್ರಯೋಜಿತಾ ಸಾವುಗಳಾದಾಗ ಅದು ನಮ್ದಲ್ಲ ಅಂತ ಕಾಗಕ್ಕ-ಗೂಬಕ್ಕನ ಕಥೆ ಹೇಳೋಕೆ ಶುರು ಮಾಡ್ತೀರಿ ಎಂದು ಹರಿಹಾಯ್ದರು.
ನ್ಯಾಯಾಂಗ ತನಿಖೆ ಆಗಬೇಕು:
ಸಿ.ಟಿ. ರವಿ ಮ್ಯಾಜಿಸ್ಟ್ರೇಟ್ ತನಿಖೆಯನ್ನು ವಿರೋಧಿಸಿದ್ದು, ಈ ಪ್ರಕರಣದ ತನಿಖೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಮ್ಯಾಜಿಸ್ಟ್ರೇಟ್ ತನಿಖೆಯಿಂದ ಸತ್ಯ ಬಯಲಿಗೆ ಬರುವುದಿಲ್ಲ ಎಂದ ಸಿಟಿ ರವಿ ಅವರು, ಮೃತರ ಕುಟುಂಬಗಳಿಗೆ ತಕ್ಷಣವೇ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಘಟನೆಯ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಸರ್ಕಾರ ಪೂರ್ವ ತಯಾರಿ ಇಲ್ಲದೇ ಆತುರದಲ್ಲಿ ಕಾರ್ಯಕ್ರಮ ಮಾಡಲಾಗಿದೆ. ಸರ್ಕಾರದ ಈ ನಿರ್ಲಕ್ಷ್ಯದಿಂದ 11ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಯಾವುದೇ ಪೂರ್ವಸಿದ್ಧತೆ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ್ದು ದುರಂತಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
