ಬೆಂಗಳೂರು [ಜ.10]:  ಕಳೆದ ಅಕ್ಟೋಬರ್‌ ತಿಂಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಹೊಸದಾಗಿ 50 ಹೊಸ ತಾಲೂಕು ಪಂಚಾಯಿತಿಗಳನ್ನು ರಚಿಸಿ ಆದೇಶಿಸಿದ್ದರೂ ಈವರೆಗೆ ಕಾರ್ಯನಿರ್ವಹಿಸದೇ ಇರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ, ಈ ಕೂಡಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯಿತಿಗಳು ಕಾರ್ಯನಿರ್ವಹಿಸಲು ಬೇಕಾದ ಸಿಬ್ಬಂದಿ, ಕಟ್ಟಡ, ಪೀಠೋಪಕರಣ ಮುಂತಾದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದೆ.

ಹೊಸ ತಾಲೂಕು ಪಂಚಾಯಿತಿ ರಚಿಸಿ ಅಧಿಸೂಚನೆ ಹೊರಡಿಸಿ ಮೂರು ತಿಂಗಳಾಗುತ್ತಾ ಬಂದಿದ್ದರೂ, ಸಿಬ್ಬಂದಿ, ಕಟ್ಟಡ, ಅನುದಾನ, ಪೀಠೋಪಕರಣ, ಹಳೆಯ ಮತ್ತು ಹೊಸ ತಾಲೂಕು ಪಂಚಾಯಿತಿ ಸದಸ್ಯರ ವಿಭಜನೆ, ಅನುದಾನದ ವಿಭಜನೆ ಸೇರಿದಂತೆ ಹಲವು ಕಾರ್ಯಗಳು ಉಪ ಚುನಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಮಧ್ಯೆ ಸ್ಥಳೀಯ ಜನಪ್ರತಿನಿಧಿಗಳು ಹೊಸ ತಾಲೂಕು ರಚನೆಗಾಗಿ ಹೋರಾಟ ಮಾಡಿದರೂ ತಾ.ಪಂ.ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅವರು ಸುತ್ತೋಲೆ ಹೊರಡಿಸಿ ನೂತನ ತಾಲೂಕು ಪಂಚಾಯತ್‌ಗಳು ಕಾರ್ಯನಿರ್ವಹಿಸಲು ಗಮನ ಹರಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯಾರ್ಯಾರಿಗೆ ಸಂಪುಟದಲ್ಲಿ ಸ್ಥಾನ.. ಕೆಲವರಿಗೆ ಕೋಕ್..ಕೆಲವರಿಗೆ ಶಾಕ್!...

ಪ್ರಮುಖವಾಗಿ ಹೊಸದಾಗಿ ರಚನೆಗೊಂಡ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯ ಹುದ್ದೆಗೆ ಸಮಾನಾಂತರ ಹುದ್ದೆ ಹೊಂದಿರುವ ಅಧಿಕಾರಿಯನ್ನು ಹೆಚ್ಚುವರಿ ಪ್ರಭಾರದಲ್ಲಿ ಇಡಬೇಕು. ಉಳಿದಂತೆ ಸಹಾಯಕ ನಿರ್ದೇಶಕರು ಮತ್ತು ಇತರೆ ಅನುಮೋದಿತ ಸಿಬ್ಬಂದಿಯ ಹುದ್ದೆಗಳಿಗೆ ಮೂಲ ತಾ.ಪಂ.ನಲ್ಲಿರುವ ಅಧಿಕಾರಿ/ ಸಿಬ್ಬಂದಿಯನ್ನು ಅಥವಾ ಹೊಸದಾಗಿ ರಚನೆಗೊಂಡಿರುವ ತಾ.ಪಂ. ಕೇಂದ್ರ ಸ್ಥಾನದಲ್ಲಿ ಇರುವ ಜಿಲ್ಲಾ ಪಂಚಾಯಿತಿಯ ಅಧೀನ ಕಚೇರಿಯ ಸಮಾನಾಂತರ ಅಧಿಕಾರಿ/ ಸಿಬ್ಬಂದಿಯನ್ನು ಹೆಚ್ಚುವರಿ ಪ್ರಭಾರದಲ್ಲಿ ನೇಮಕ ಮಾಡಬೇಕು. ಹೊಸ ತಾಲೂಕು ಪಂಚಾಯಿತಿಯ ಕೇಂದ್ರ ಸ್ಥಾನ ಒಂದು ವೇಳೆ ಗ್ರಾಮ ಪಂಚಾಯಿತಿಯಾಗಿದ್ದರೆ ಗ್ರಾ.ಪಂ. ಕಟ್ಟಡದಲ್ಲಿ ತಾ.ಪಂ. ಕಚೇರಿ ತೆರೆಯಬೇಕು. ಒಂದು ವೇಳೆ ಪಟ್ಟಣ ಪ್ರದೇಶವಾಗಿದ್ದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಇಲ್ಲವೇ ಬಾಡಿಗೆ ಕಟ್ಟಡದಲ್ಲಿ ಕಚೇರಿ ಆರಂಭಿಸಬೇಕು. ಜತೆಗೆ ಹೊಸದಾಗಿ ತಾ.ಪಂ. ಕಟ್ಟಡ ನಿರ್ಮಿಸಲು ಅಗತ್ಯವಾದ ವಿಸ್ತೀರ್ಣದ ಜಾಗ ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಾತ್ಕಾಲಿಕವಾಗಿ ಕಚೇರಿ ತೆರೆಯಲು ಗುರುತಿಸಿರುವ ಸರ್ಕಾರಿ ಕಟ್ಟಡಗಳ ದುರಸ್ತಿ ಅಥವಾ ವಿಸ್ತೀರ್ಣಕ್ಕೆ ಮತ್ತು ಕಚೇರಿಗೆ ಅಗತ್ಯವಾದ ಪೀಠೋಪಕರಣಗಳಿಗೆ ಬೇಕಾಗುವ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಮೂಲ ತಾಲೂಕು ಪಂಚಾಯಿತಿಯಲ್ಲಿ ಉಳಿದಿರುವಂತಹ ಅನುದಾನವನ್ನು ಹೊಸ ಹಾಗೂ ಹಳೆಯ ತಾಲೂಕು ಪಂಚಾಯಿತಿಗಳ ನಡುವೆ ವಿಭಜಿಸಿ ನೀಡಬೇಕು. ಅದೇ ರೀತಿ ಹೊಸ ಹಾಗೂ ಹಳೆಯ ಪಂಚಾಯಿತಿಗಳ ನಡುವೆ ಸದಸ್ಯರನ್ನು ವಿಭಜಿಸಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು.

ಒಂದು ವೇಳೆ ಹಳೆಯ ತಾಲೂಕು ಪಂಚಾಯಿತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಕ್ಷೇತ್ರಗಳು ಹೊಸ ತಾಲೂಕು ಪಂಚಾಯಿತಿಗಳ ವ್ಯಾಪ್ತಿಗೆ ಒಳಪಟ್ಟರೆ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅವರ ಸ್ಥಾನ ತೆರವುಗೊಳ್ಳುತ್ತದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.