Asianet Suvarna News Asianet Suvarna News

Arogya Karnataka Scheme : ಚಿಕಿತ್ಸೆಗೆ ಆರೋಗ್ಯ ಕಾರ್ಡ್ ಬಿಟ್ಟು ಮತ್ತೇನು ಕೇಳುವಂತಿಲ್ಲ

  • ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆಗಮಿಸುವ ಫಲಾನುಭವಿಗಳಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ಸಾಕು
  • ಯಾವುದೇ ದಾಖಲೆ ಕೇಳಬಾರದೆಂದು ಆರೋಗ್ಯ ಇಲಾಖೆ ಎಚ್ಚರಿಕೆ 
Karnataka Govt Health Card Is enough No Need other Documents Required For treatment snr
Author
Bengaluru, First Published Dec 9, 2021, 11:59 AM IST

ಬೆಂಗಳೂರು (ಡಿ.09): ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ (Arogya karnataka) ಯೋಜನೆಯಡಿ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ (Hospital) ಚಿಕಿತ್ಸೆ (Treatment) ಪಡೆಯಲು ಆಗಮಿಸುವ ಫಲಾನುಭವಿಗಳಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ (Ayushman Arogya Card) ಬಿಟ್ಟು ಇತರೆ ಯಾವುದೇ ದಾಖಲೆ ಕೇಳಬಾರದೆಂದು ಆರೋಗ್ಯ ಇಲಾಖೆ (Health Department) ಎಚ್ಚರಿಕೆ ನೀಡಿದೆ.   ಬಿಪಿಎಲ್ (BPL) ಮತ್ತು ಎಪಿಎಲ್(APL) ಕುಟುಂಬದ ಸದಸ್ಯರಿಗೆ ಶೀಘ್ರ ಹಾಗೂ ಶುಲ್ಕ ರಹಿತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆಯುಷ್ಮಾನ್ ಆರೋಗ್ಯ ಯೋಜನೆ ಪ್ರಾರಂಭಿಸಲಾಗಿದೆ. ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಅವಶ್ಯಕತೆ ಆಧರಿಸಿ ಚಿಕಿತ್ಸೆ ಒದಗಿಸಲಾಗುತ್ತದೆ. ರಾಜ್ಯದಲ್ಲಿ 1.5 ಕೋಟಿ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. 

ಫಲಾನು ಭವಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬಂದಾಗ ಹಾಗೂ ಒಳರೋಗಿಯಾಗಿ ದಾಖಲಾದಾಗ ಆರೋಗ್ಯ ಕಾರ್ಡ್ ತೋರಿಸಿದರೂ ಪಡಿತರ ಚೀಟಿ (Ration Card), ಇತರೆ ಕೆಲ ಪೂರಕ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗುತ್ತಿದೆ. ಆಸ್ಪತ್ರೆಗಳ ಆರೋಗ್ಯ ಮಿತ್ರ ಸಹಾಯಕರು ಚಿಕಿತ್ಸೆಗೆ ಅವಕಾಶ ನೀಡದಿರುವ ಬಗ್ಗೆ ಇಲಾಖೆಗೆ ದೂರುಗಳು (Complaints) ಬಂದಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಡ್ ಇರುವವರು ಬೇರೆ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸುವ ಅಗತ್ಯವಿಲ್ಲ. ಪೂರಕ ದಾಖಲೆಗಳಗೆ ಒತ್ತಾಯಿಸುವುದನ್ನು ನಿಷೇಧಿಸಲಾಗಿದೆ. 

ಆರೋಗ್ಯ ಕಾರ್ಡ್ ಹೊಂದಿರುವವರಿಗೆ ಚಿಕಿತ್ಸೆ ನೀಡದಿದ್ದಲ್ಲಿ ನಿಯಮಾನುಸಾರ ದುರ್ನಡತೆಯೆಂದು ಪರಿಗಣಿಸಿ, ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ (Health Department) ಆಯುಕ್ತ ಡಿ.ರಂದೀಪ್ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕಿ ಎನ್.ಟಿ.ಆಬ್ರು ಜಂಟಿ ಸುತ್ತೋಲೆ ಹೊರಡಿಸಿದ್ದಾರೆ.  

ನಿಮ್ಮ  ಆರೋಗ್ಯ ಐಡಿ ಕಾರ್ಡ್ ಹೀಗೆ ಪಡೆಯಿರಿ: 

ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ(health) ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್‌ ಕಾರ್ಡ್‌(Digital Card) ವಿತರಿಸುವ ‘ಪ್ರಧಾನಿ ಮಂತ್ರಿ ಡಿಜಿಟಲ್‌ ಹೆಲ್ತ್‌ ಮಿಷನ್‌’(Pradhan Mantri Jan Arogya Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಇದರೊಂದಿಗೆ ಪ್ರಾಯೋಗಿಕವಾಗಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದ್ದ ಯೋಜನೆ ಇದೀಗ ದೇಶವ್ಯಾಪಿ ವಿಸ್ತರಣೆಯಾಗಿದೆ. ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ, ಸುಲಲಿತ, ಸಮಗ್ರ, ಅಗ್ಗದ ಮತ್ತು ಸುರಕ್ಷಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಯೋಜನೆ?

ಪ್ರಧಾನಮಂತ್ರಿ ಡಿಜಿಟಲ್‌ ಆರೋಗ್ಯ ಮಿಷನ್‌ ಯೋಜನೆಯಡಿ (ಎನ್‌ಡಿಎಚ್‌ಎಂ) ದೇಶದ ಪ್ರತಿಯೊಬ್ಬರಿಗೂ ಆಧಾರ್‌(Aadhar) ಮತ್ತು ಮೊಬೈಲ್‌ ಸಂಖ್ಯೆ ರೀತಿ ವಿಶೇಷ ಗುರುತಿನ ಸಂಖ್ಯೆ ಮತ್ತು ಕಾರ್ಡ್‌ ವಿತರಿಸಲಾಗುತ್ತದೆ. ಈ ಗುರುತಿನ ಚೀಟಿಯು ವ್ಯಕ್ತಿಯೊಬ್ಬರ ಆರೋಗ್ಯ ಕುರಿತಾದ ಎಲ್ಲಾ ಮಾಹಿತಿಯನ್ನು ಒಳಗೊಂಡಿರಲಿದೆ. ಅಂದರೆ ಕಾರ್ಡ್‌ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿಷಯ, ಅವರು ಆತನಿಗೆ ನೀಡಿದ ಚಿಕಿತ್ಸೆ, ವೈದ್ಯಕೀಯ ವರದಿಗಳು, ಕಾಯಿಲೆಗಳು ಸೇರಿದಂತೆ ಆತನ ಎಲ್ಲಾ ಆರೋಗ್ಯದ ಮಾಹಿತಿ ಒಳಗೊಂಡಿರುತ್ತದೆ.

ಏನಿದರ ಉಪಯೋಗ?

ಡಿಜಿಟಲ್‌ ಆರೋಗ್ಯ ಕಾರ್ಡಲ್ಲಿ(Digital Health card) ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಹೀಗಾಗಿ ವ್ಯಕ್ತಿಯೊಬ್ಬ ಭವಿಷ್ಯದಲ್ಲಿ ಯಾವುದೇ ವೈದ್ಯರ ಭೇಟಿ ವೇಳೆ ಈ ಕಾರ್ಡ್‌ ತೋರಿಸಿದರೆ ಅವರಿಗೆ ರೋಗಿಯ ಎಲ್ಲಾ ಪೂರ್ವಾಪರ ತಿಳಿಯುತ್ತದೆ. ಇದರಿಂದ ತಮ್ಮ ಹಳೆಯ ಚಿಕಿತ್ಸೆಯ ಮಾಹಿತಿಯ ಕಡತಗಳನ್ನು ರೋಗಿ ಎಲ್ಲೆಡೆ ತೆಗೆದುಕೊಂಡು ಹೋಗಬೇಕಿಲ್ಲ. ರೋಗಿಯ ಈ ಆರೋಗ್ಯ ಗುರುತಿನ ಚೀಟಿಯನ್ನು ನೋಡಿದರೆ, ವೈದ್ಯರು ಆರೋಗ್ಯ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು. ಜೊತೆಗೆ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಈ ಕಾರ್ಡ್‌ ಮೂಲಕ ರೋಗಿಗಳು ಆಯುಷ್ಮಾನ್‌ ಭಾರತ್‌ ಯೋಜನೆಯಂತಹ ಸರ್ಕಾರಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲೂ ಸಾಧ್ಯವಾಗಲಿದೆ. ಸರ್ಕಾರಕ್ಕೆ ನಿರ್ದಿಷ್ಟಯೋಜನೆ ರೂಪಿಸಲು ಸಾಧ್ಯವಾಗುತ್ತದೆ.

ವೈದ್ಯರಿಗೂ ಸಹಾಯಕ

ಸರ್ಕಾರ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾಬೇಸ್‌ ಅನ್ನು ಈ ಕಾರ್ಡ್‌ ಮೂಲಕ ಸಿದ್ಧಪಡಿಸುತ್ತದೆ. ಎಲ್ಲಾ ವಿವರಗಳನ್ನು ಆ ವ್ಯಕ್ತಿಯ ವೈದ್ಯಕೀಯ ದಾಖಲೆಯಲ್ಲಿ ಇರಿಸಲಾಗುವುದು. ಈ ಐಡಿಯ ಸಹಾಯದಿಂದ, ಒಬ್ಬ ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ದಾಖಲೆಯನ್ನು ನೋಡಬಹುದು. ಇದರಿಂದ ವೈದ್ಯರಿಗೂ ನೆರವಾಗಲಿದೆ. ವ್ಯಕ್ತಿಯ ಹಿಂದಿನ ಆರೋಗ್ಯ ಸ್ಥಿತಿ, ಆತನ ವೈದ್ಯಕೀಯ ಚಿಕಿತ್ಸೆ ಬಗ್ಗೆ ಸುಲಭವಾಗಿ ಎಲ್ಲಾ ಮಾಹಿತಿ ಸಿಗಲಿದೆ. ಈ ಸೌಲಭ್ಯದ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಐಡಿ ಪಡೆಯುವುದು ಹೇಗೆ?

ಈ ಆರೋಗ್ಯಕಾರ್ಡ್‌ ಐಡಿಯನ್ನು ವ್ಯಕ್ತಿಯೊಬ್ಬರ ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಸಂಖ್ಯೆಯನ್ನು ಬಳಸಿ ರಚಿಸಲಾಗುತ್ತದೆ. ಇದಕ್ಕಾಗಿ, ಸರ್ಕಾರವು ಆರೋಗ್ಯ ಪ್ರಾಧಿ​ಕಾರವನ್ನು ರಚಿಸಲಿದ್ದು, ಈ ಮೂಲಕ ವ್ಯಕ್ತಿಯ ಎಲ್ಲಾ ದಾಖಲೆಯನ್ನು ಸಂಗ್ರಹಿಸುತ್ತದೆ. ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ನೋಂದಾವಣೆಗೆ ಸಂಪರ್ಕಿಸಬಹುದು. ನಿಮ್ಮ ದಾಖಲೆಗಳನ್ನು https://healthid.ndhm.gov.in/ ನಲ್ಲಿ ನೋಂದಾಯಿಸುವ ಮೂಲಕ, ನಿಮ್ಮ ಆರೋಗ್ಯ ಐಡಿಯನ್ನು ನೀವೂ ರಚಿಸಬಹುದು. ಅಥವಾ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಎಬಿಡಿಎಂ ಹೆಲ್ತ್‌ ರೆಕಾರ್ಡ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡುವ ಮೂಲಕ ಆರೋಗ್ಯ ಐಡಿಯನ್ನು ಪಡೆಯಬಹುದು. ಮೂಲ ವಿವರಗಳನ್ನು ಪಡೆಯಲು ಮೊಬೈಲ್‌ ಸಂಖ್ಯೆ ಅಥವಾ ಆಧಾರ್‌ ಸಂಖ್ಯೆ ದೃಢೀಕರಿಸಲು ಮಾತ್ರ ಸಮಯ ಹಿಡಿಯುತ್ತದೆ. ಇದರ ಹೊರತಾಗಿ 10 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಮುಗಿಯಲಿದೆ.

ಆನ್‌ಲೈನ್‌ ಅರ್ಜಿ ಸಲ್ಲಿಕೆ ಹೇಗೆ?

https://healthid.ndhm.gov.in/ ವೆಬ್‌ಸೈಟ್‌ಗೆ ಲಾಗಿನ್‌ ಆಗಿ

-ಎನ್‌ಡಿಎಚ್‌ಎಂ ಐಡಿ ಆ್ಯಪ್‌ ತೆರೆಯಿರಿ. ನೋಂದಣಿ ಪುಟ ತೆರೆಯುತ್ತದೆ.

-ರಿಜಿಸ್ಟರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ

-ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ನಮೂದಿಸಿ

-ನೀವು ನಮೂದಿಸಿದ ಮೊಬೈಲ್‌ ಸಂಖ್ಯೆಗೆ ಬಂದ ಒಟಿಪಿಯನ್ನು ಟೈಪ್‌ ಮಾಡಿ.

-ಅರ್ಜಿಯ ಅಂತಿಮ ಸಲ್ಲಿಕೆಗೆ ‘ಸಬ್ಮಿಟ್‌’ ಬಟನ್‌ ಮೇಲೆ ಕ್ಲಿಕ್‌ ಮಾಡಿ.

Follow Us:
Download App:
  • android
  • ios