ಸೆ.27ರಿಂದ ಪ್ರತಿ ಪ್ರಜೆಗೂ ಆರೋಗ್ಯ ಕಾರ್ಡ್!
* ಪ್ರಧಾನ ಮಂತ್ರಿ ಡಿಜಿಟಲ್ ಹೆಲ್ತ್ ಮಿಷನ್‌ಗೆ ಪ್ರಧಾನಿ ಮೋದಿ ಚಾಲನೆ
* ಸೆ.27ರಿಂದ ಪ್ರತಿ ಪ್ರಜೆಗೂ ಆರೋಗ್ಯ ಕಾರ್ಡ್
ನವದೆಹಲಿ(ಸೆ.23): ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್ ಕಾರ್ಡ್(Digital Card) ವಿತರಿಸುವ ‘ಪ್ರಧಾನಿ ಮಂತ್ರಿ ಡಿಜಿಟಲ್ ಹೆಲ್ತ್ ಮಿಷನ್’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೆ.27ಕ್ಕೆ ಚಾಲನೆ ನೀಡಲಿದ್ದಾರೆ. ಪ್ರಾಯೋಗಿಕವಾಗಿ ಹಲವು ರಾಜ್ಯಗಳಲ್ಲಿ ಜಾರಿಗೆ ತರಲಾಗಿದ್ದ ಯೋಜನೆಯನ್ನು ಪ್ರಧಾನಿ ಸೆ.27ರಂದು ಇಡೀ ದೇಶಾದ್ಯಂತ ವಿಸ್ತರಣೆ ಮಾಡಲಿದ್ದಾರೆ. ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ, ಸುಲಲಿತ, ಸಮಗ್ರ, ಅಗ್ಗದ ಮತ್ತು ಸುರಕ್ಷಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಏನಿದು ಯೋಜನೆ?
ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಯಡಿ(NDHM) ದೇಶದ ಪ್ರತಿಯೊಬ್ಬರಿಗೂ ಆಧಾರ್ ಮತ್ತು ಮೊಬೈಲ್ ಸಂಖ್ಯೆ ರೀತಿ ವಿಶೇಷ ಗುರುತಿನ ಚೀಟಿ ವಿತರಿಸಲಾಗುತ್ತದೆ. ಈ ಗುರುತಿನ ಚೀಟಿಯು ವ್ಯಕ್ತಿಯೊಬ್ಬರ ಆರೋಗ್ಯ ಕುರಿತಾದ ಮಾಹಿತಿ ಒಳಗೊಂಡಿರಲಿದೆ. ಅಂದರೆ ಕಾರ್ಡ್ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿಷಯ, ಅವರು ಆತನಿಗೆ ನೀಡಿದ ಚಿಕಿತ್ಸೆ, ವೈದ್ಯಕೀಯ ವರದಿಗಳು, ಕಾಯಿಲೆಗಳು ಸೇರಿದಂತೆ ಆತನ ಎಲ್ಲಾ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಕಾರ್ಡ್‌ನ ಅನ್ನು ಆತ ತನ್ನ ಮುಂದಿನ ಯಾವುದೇ ವೈದ್ಯರ ಭೇಟಿ ವೇಳೆ ತೋರಿಸಿದರೆ ಅವರಿಗೆ ರೋಗಿಯ ಎಲ್ಲಾ ಪೂರ್ವಾಪರ ತಿಳಿಯುತ್ತದೆ. ಇದರಿಂದ ರೋಗಿ ಹೋದಲ್ಲೆಲ್ಲಾ ತನ್ನ ದಾಖಲೆಗಳನ್ನು ಹೊತ್ತೊಯ್ಯುವ ಪ್ರಮೇಯ ತಪ್ಪುತ್ತದೆ.
ಮೂರು ವೇದಿಕೆ:
ಹೊಸ ಯೋಜನೆಯ ಮುಖ್ಯವಾಗಿ ಮೂರು ವೇದಿಕೆಗಳಡಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯದ ಐಡಿ, ವೈದ್ಯರ ರಿಜಿಸ್ಟ್ರಿ ಮತ್ತು ಆರೋಗ್ಯ ಸೌಕರ್ಯಗಳ ರಿಜಿಸ್ಟ್ರಿ.