Asianet Suvarna News Asianet Suvarna News

ಕೇಂದ್ರದ ಒತ್ತಡ, ಎಸ್ಕಾಂಗಳ ಖಾಸಗೀಕರಣಕ್ಕೆ ರಾಜ್ಯ ಸರ್ಕಾರದ ಮೊದಲ ಹೆಜ್ಜೆ?

* ಎಸ್ಕಾಂಗಳ ಖಾಸಗೀಕರಣಕ್ಕೆ ಸರ್ಕಾರದ ಮೊದಲ ಹೆಜ್ಜೆ?

* ಕೇಂದ್ರದ ಒತ್ತಡ, ಕೆಪಿಟಿಸಿಎಲ್‌ನಲ್ಲಿ ವಿಲೀನಕ್ಕೆ ಇಂದು ಮಹತ್ವದ ಸಭೆ

* 5 ವಿದ್ಯುತ್‌ ಕಂಪನಿ ಸೇರಿಸಿ 1 ಮಾತೃ ಕಂಪನಿಗೆ ಸಿದ್ಧತೆ

karnataka Govt First Step Towards Privatisation of ESCOMs pod
Author
Bangalore, First Published Jun 19, 2021, 7:45 AM IST

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಜೂ.19): ಬೆಸ್ಕಾಂ ಸೇರಿದಂತೆ ಐದೂ ವಿದ್ಯುತ್‌ ಸರಬರಾಜು ಕಂಪನಿಗಳನ್ನು (ಎಸ್ಕಾಂ) ವಿಲೀನಗೊಳಿಸಿ ಪ್ರತ್ಯೇಕ ಹೋಲ್ಡಿಂಗ್‌ ಕಂಪನಿ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆಯೇ?

ಇಂತಹದೊಂದು ಬೆಳವಣಿಗೆ ನಡೆಯುವ ಸಾಧ್ಯತೆ ಕಂಡುಬರುತ್ತಿದೆ. ಏಕೆಂದರೆ, ಎಸ್ಕಾಂಗಳನ್ನು ಖಾಸಗೀಕರಣಗೊಳಿಸುವಂತೆ ಕೇಂದ್ರ ಸರ್ಕಾರದ ತೀವ್ರ ಒತ್ತಡವಿದೆ. ಇದಕ್ಕೆ ಮಣಿದಿರುವಂತೆ ಕಾಣುತ್ತಿರುವ ರಾಜ್ಯ ಇಂಧನ ಇಲಾಖೆಯು, ಎಸ್ಕಾಂಗಳನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದೊಂದಿಗೆ (ಕೆಪಿಟಿಸಿಎಲ್‌) ವಿಲೀನಗೊಳಿಸುವ ಸಂಬಂಧ ಚರ್ಚಿಸಲು ಶನಿವಾರ ಬೆಳಗ್ಗೆ ವಿಕಾಸಸೌಧದಲ್ಲಿ ಮಹತ್ವದ ಸಭೆ ಕರೆದಿದೆ. ಈ ಬೆಳವಣಿಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶನಿವಾರ ಬೆಳಗ್ಗೆ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೆಪಿಟಿಸಿಎಲ್‌ ಜತೆ ಎಸ್ಕಾಂಗಳ ವಿಲೀನಗೊಳಿಸಿ ಹೋಲ್ಡಿಂಗ್‌ ಕಂಪನಿಯನ್ನಾಗಿ ಪರಿಗಣಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಸಭೆಯ ಸೂಚನಾ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಅಲ್ಲದೆ, ಸಭೆಗೆ ಸೂಕ್ತ ಮಾಹಿತಿಯೊಂದಿಗೆ ಹಾಜರಾಗುವಂತೆ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಮೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ- ಮೈಸೂರು, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ), ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿಗಳ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸೂಚಿಸಿದೆ. ಇದೇ ವೇಳೆ ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್‌ನ ಮುಖ್ಯಸ್ಥರೂ ಭಾಗವಹಿಸಲಿದ್ದಾರೆ.

ಹೀಗಾಗಿ, ಇದು ಹೊಸ ಕಂಪನಿ ಸ್ಥಾಪಿಸಿ ಬಳಿಕ ಅದನ್ನು ಖಾಸಗೀಕರಣ ಮಾಡುವ ಯತ್ನದ ಮೊದಲ ಹೆಜ್ಜೆಯಾಗಿರಬಹುದು ಎಂದು ಹೇಳಲಾಗಿದೆ.

ಎಸ್ಕಾಂಗಳ ಖಾಸಗೀಕರಣಕ್ಕೆ ಪೀಠಿಕೆ?:

ಕೇಂದ್ರ ಸರ್ಕಾರವು ಈಗಾಗಲೇ 3 ಬಾರಿ ಎಸ್ಕಾಂಗಳ ಖಾಸಗೀಕರಣಕ್ಕೆ ರಾಜ್ಯದ ಮೇಲೆ ಒತ್ತಡ ಹೇರಿತ್ತು. ಆದರೆ ಪ್ರತಿ ಬಾರಿಯೂ ರಾಜ್ಯ ಸರ್ಕಾರ ಎಸ್ಕಾಂಗಳ ಖಾಸಗೀಕರಣದ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಕೇಂದ್ರ ಸರ್ಕಾರವು 2015ರಲ್ಲೇ ಪ್ರಸ್ತಾವನೆ ಸಲ್ಲಿಸಿದ್ದರೂ ಅಂದಿನ ಸರ್ಕಾರ ತಿರಸ್ಕರಿಸಿತ್ತು.

ಬಳಿಕ ಒಂದು ವರ್ಷದ ಹಿಂದೆ ವಿದ್ಯುತ್‌ ಕಾಯಿದೆ -2020ರ ಕರಡಿನಲ್ಲೂ ರಾಜ್ಯದ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಪ್ರಸ್ತಾಪಮಾಡಿತ್ತು. ಇದಕ್ಕೆ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರ ನಡುವೆಯೂ ವಿದ್ಯುತ್‌ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸಲು ಸೆ.20 ರಂದು ಕೇಂದ್ರ ಇಂಧನ ಇಲಾಖೆಯು ‘ಸ್ಟಾಂಡರ್ಡ್‌ ಬಿಡ್ಡಿಂಗ್‌ ಡಾಕ್ಯುಮೆಂಟೇಷನ್‌ ಆಫ್‌ ಡಿಸ್ಟ್ರಿಬ್ಯೂಷನ್‌ ಲೈಸನ್ಸೀಸ್‌’ ಹೆಸರಿನಲ್ಲಿ ಕರಡು ಸಿದ್ಧಪಡಿಸಿದೆ. ಅಲ್ಲದೆ, ಕರ್ನಾಟಕದ ಬೆಸ್ಕಾಂ, ಚೆಸ್ಕಾಂ ಹಾಗೂ ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿಗಳನ್ನು ಇದರಡಿ ಖಾಸಗೀಕರಣಗೊಳಿಸಲು ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿತ್ತು.

ಇಲಾಖೆ ಹೇಳೋದೇನು?:

ವಿವಿಧ ಎಸ್ಕಾಂಗಳ ನಡುವೆ ಸಮನ್ವಯತೆ ಹಾಗೂ ಒಂದೇ ಸೂರಿನಡಿ ನಿಯಂತ್ರಿಸಲು ಗುಜರಾತ್‌ ಮಾದರಿಯಲ್ಲಿ ಹೋಲ್ಡಿಂಗ್‌ ಕಂಪನಿ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಅಧಿಕಾರಿಗಳ ತಂಡ ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ನಲ್ಲಿ ಅಧ್ಯಯನ ನಡೆಸಿದ್ದು ಶನಿವಾರದ ಸಭೆಯಲ್ಲಿ ವರದಿ ಮಂಡಿಸಲಿದ್ದಾರೆ.

ಗುಜರಾತ್‌ನಲ್ಲಿ ಗುಜರಾತ್‌ ಊರ್ಜಾ ವಿಕಾಸ್‌ ನಿಗಮ್‌ ಲಿಮಿಟೆಡ್‌ ಹೆಸರಿನಲ್ಲಿ ಹೋಲ್ಡಿಂಗ್‌ ಕಂಪನಿ ಸ್ಥಾಪಿಸಿದೆ. ಇದರಡಿ ಉಳಿದ ಎಸ್ಕಾಂಗಳು ಕೆಲಸ ಮಾಡುತ್ತವೆ. ಅದೇ ಮಾದರಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆಯೇ ಹೊರತು ಖಾಸಗೀಕರಣ ಪ್ರಸ್ತಾಪಕ್ಕೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಿವೆ ಇಂಧನ ಇಲಾಖೆ ಮೂಲಗಳು.

ನೋಟಿಸ್‌ ತಪ್ಪಾಗಿದೆ, ವಿಲೀನವಿಲ್ಲ: ಸರ್ಕಾರ

ಎಸ್ಕಾಂಗಳನ್ನು ವಿಲೀನಗೊಳಿಸುವ ಪ್ರಸ್ತಾವನೆ ಇಂಧನ ಇಲಾಖೆ ಮುಂದೆ ಇಲ್ಲ. ಶನಿವಾರದ ಸಭೆ ನೋಟಿಸ್‌ ಪತ್ರದಲ್ಲಿರುವ ವಿಷಯ ತಪ್ಪಾಗಿದೆ. ಕೆಪಿಟಿಸಿಎಲ್‌ ವಿದ್ಯುತ್‌ ಪ್ರಸರಣ ನಿಗಮ. ಕೆಪಿಟಿಸಿಎಲ್‌ ಜತೆ ಎಸ್ಕಾಂಗಳ ವಿಲೀನ ಮಾಡುವ ಉದ್ದೇಶ ನಮಗೆ ಇಲ್ಲವೇ ಇಲ್ಲ. ಆದಾಯ ಅಸಮಾನತೆ ಸರಿದೂಗಿಸಲು ಒಂದು ಪ್ರತ್ಯೇಕ ನಿರ್ವಹಣಾ ಕಂಪನಿ ಸ್ಥಾಪಿಸುವ ಬಗ್ಗೆಯಷ್ಟೇ ಚರ್ಚಿಸುತ್ತೇವೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌ ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios