ಬೆಂಗಳೂರು (ಫೆ.19):  ವೀರಶೈವ ಲಿಂಗಾಯತ, ಕುರುಬ, ವಾಲ್ಮೀಕಿ, ಒಕ್ಕಲಿಗ ಸೇರಿದಂತೆ ನಾನಾ ಸಮುದಾಯಗಳು ಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ತೀವ್ರ ಒತ್ತಡ ತರುತ್ತಿರುವ ವಿಚಾರದ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಿದ್ದು, ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ ಎಚ್ಚರಿಕೆ ಹೆಜ್ಜೆ ಇಡಲು ಸರ್ಕಾರ ತೀರ್ಮಾನಿಸಿದೆ.

ಸಂಪುಟ ಸಭೆಯ ಅಜೆಂಡಾದಲ್ಲಿ ಈ ವಿಷಯ ಇಲ್ಲದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನೌಪಚಾರಿಕವಾಗಿ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಈ ವಿಷಯ ಪ್ರಸ್ತಾಪಿಸಿ, ಮೀಸಲಾತಿಗಾಗಿ ಒತ್ತಾಯ, ಹೋರಾಟಗಳಿಂದ ಸರ್ಕಾರಕ್ಕೆ ಎದುರಾಗುತ್ತಿರುವ ಸಂದಿಗ್ಧತೆಯನ್ನು ವಿವರಿಸಿದರು.

ಈ ವಿಚಾರದಲ್ಲಿ ಸರ್ಕಾರ ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸಂವಿಧಾನಬದ್ಧವಾಗಿ ಕಾನೂನು ಚೌಕಟ್ಟಿನಲ್ಲೇ ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡಿಕೆ, ಪ್ರಮಾಣ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರದೊಂದಿಗೂ ಈ ಬಗ್ಗೆ ಚರ್ಚಿಸಬೇಕಾಗುತ್ತದೆ. ಹಾಗಾಗಿ ಈ ವಿಚಾರವಾಗಿ ಯಾವುದೇ ಸಚಿವರು ಬಹಿರಂಗವಾಗಿ ಗೊಂದಲಕಾರಿ ಹೇಳಿಕೆಗಳನ್ನು ನೀಡಬಾರದು. ಸಾಧ್ಯವಾದಷ್ಟುತಮ್ಮ ತಮ್ಮ ಸಮುದಾಯದ ಮಠಾಧೀಶರೊಂದಿಗೆ ಸಚಿವರು ಸಮಾಲೋಚನೆ ನಡೆಸಿ ಪರಿಸ್ಥಿತಿ ಮನವರಿಕೆ ಮಾಡಿಕೊಡಿ ಎಂದು ಸಲಹೆ ನೀಡಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಹಿಂದ ಹೋರಾಟಕ್ಕೆ ವಿರೋಧ: ಸಿದ್ದರಾಮಯ್ಯ ನೇತೃತ್ವದಲ್ಲೇ ಕುರುಬರ ಸಮಾವೇಶ ..

ಯಾವುದೇ ಸಮುದಾಯದ ಮೀಸಲಾತಿ ಹೋರಾಟ ಕೈಮೀರದಂತೆ ಆಯಾ ಸಮುದಾಯದ ಸಚಿವರು ನೋಡಿಕೊಳ್ಳಬೇಕು. ಸರ್ಕಾರ ಪ್ರತಿಯೊಂದು ಹಿಂದುಳಿದ ಸಮುದಾಯದ ಪರವಾಗಿಯೂ ಇದೆ. ನ್ಯಾಯಯುತ ಮೀಸಲಾತಿ ಬೇಡಿಕೆಯನ್ನು ಪರಿಶೀಲಿಸಿ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಈ ಬಗ್ಗೆ ಸಮುದಾಯದ ಮಠಾಧೀಶರಿಗೆ ಸಚಿವರುಗಳು ತಿಳಿಸಿಕೊಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು ಎನ್ನಲಾಗಿದೆ.

ಈ ಮಧ್ಯೆ, ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರು, ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದುವರೆಗೆ ಯಾವ್ಯಾವ ಸಮುದಾಯಗಳು ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ಏನೇನು ಮನವಿ, ಬೇಡಿಕೆಗಳನ್ನು ಸಲ್ಲಿಸಿವೆ ಎಂಬ ಮಾಹಿತಿ ನೀಡಿದರು. ಅಲ್ಲದೆ, ಈಗಿನ ಸ್ಥಿತಿಗತಿ ಏನಿದೆ, ಮುಂದೇನು ಮಾಡಬಹುದು ಎಂಬ ಬಗ್ಗೆ ಸಂಪುಟ ಸಹೋದ್ಯೋಗಿಗಳ ಸಲಹೆ ಕೇಳಿದರು. ಇದಕ್ಕೆ ಹಲವು ಸಚಿವರು ತಮ್ಮದೇ ಆದ ಸಲಹೆಗಳನ್ನು ನೀಡಿದ್ದಾರೆ. ಸಭೆಯಲ್ಲಿ ವ್ಯಕ್ತವಾದ ಸಲಹೆಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸುವ ಜೊತೆಗೆ ವಿವಿಧ ಆಯೋಗ, ಸುಪ್ರೀಂಕೋರ್ಟ್‌ನ ಮೀಸಲಾತಿ ವಿಚಾರದ ತೀರ್ಪುಗಳನ್ನು ಅವಲೋಕಿಸಿ ಮುಂದಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ಮತ್ತೆ ಚರ್ಚಿಸುವುದಾಗಿ ಹೇಳಿದರು ಎಂದರು.

ಕೇಳೋದು ತಪ್ಪಲ್ಲ

ರಾಜ್ಯದ ವಿವಿಧ ಸಮುದಾಯಗಳು ಮೀಸಲಾತಿ ಕೇಳುತ್ತಿರುವುದು ತಪ್ಪಲ್ಲ. ಕೇಳದೆ ಇದ್ದರೆ ಯಾರಿಗೂ ಯಾವ ಸೌಲಭ್ಯಗಳೂ ಸಿಗುವುದಿಲ್ಲ. ಪ್ರತಿ ಸಮುದಾಯಕ್ಕೆ ನ್ಯಾಯಬದ್ಧವಾಗಿ ಏನು ಸಿಗಬೇಕೋ ಅದು ಸಿಕ್ಕೆ ಸಿಗುತ್ತದೆ. ಆದರೆ ಯಾವಾಗ ಸಿಗಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸರ್ಕಾರ ಈ ಮನವಿಗಳನ್ನು ಚರ್ಚೆ-ಸಮಾಲೋಚನೆ ನಡೆಸಿ ವೈಜ್ಞಾನಿಕವಾಗಿ ಪರಿಶೀಲಿಸಿದ ಬಳಿಕ ನ್ಯಾಯಬದ್ಧ ತೀರ್ಮಾನ ಕೈಗೊಳ್ಳುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನ ಬದ್ಧವಾಗಿ ಪ್ರತಿ ಸಮುದಾಯಕ್ಕೂ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ.

-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

- ಸಂಪುಟ ಸಭೆಯಲ್ಲಿ ಬಿಎಸ್‌ವೈರಿಂದ ಮೀಸಲು ವಿಷಯ ಪ್ರಸ್ತಾಪ

- ಗೊಂದಲಕಾರಿ ಹೇಳಿಕೆ ನೀಡದಂತೆ ಸಚಿವರಿಗೆ ತಾಕೀತು

- ಮಠಾಧೀಶರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಸೂಚನೆ

- ಮೀಸಲು ಹೋರಾಟ ಕೈಮೀರದಂತೆ ನೋಡಿಕೊಳ್ಳಲು ನಿರ್ದೇಶನ

- ನ್ಯಾಯಯುತ ಬೇಡಿಕೆಗೆ ಕ್ರಮ, ಆದರೆ ಸಮಯ ಬೇಕು: ಸಿಎಂ