ಕೊರೋನಾ ವೈರಸ್ ಅಟ್ಟಹಾಸ: ಮತ್ತೆ 1 ವಾರ ಕರ್ನಾಟಕ ಬಂದ್ ಮುಂದುವರಿಕೆ..!
ಕರ್ನಾಟದಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ವೈರಸ್ ಸೋಂಕಿತರ ಸಂಖ್ಯೆ13ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಒಂದು ವಾರ ಕರ್ನಾಟಕ ಸ್ತಬ್ಧವಾಗಲಿದೆ.
ಬೆಂಗಳೂರು, (ಮಾ.18): ಮಹಾಮಾರಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮತ್ತೆ ಒಂದು ವಾರ ಕರ್ನಾಟಕ ಬಂದ್ ಮುಂದುವರಿಕೆ.
ಈ ಬಗ್ಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಕೊರೋನಾ ವೈರಸ್ ತಡೆಗಟ್ಟುವ ಬಗ್ಗೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು (ಬುಧವಾರ) ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರಲ್ಲಿ ಮತ್ತಿಬ್ಬರಿಗೆ ಕೊರೋನಾ ದೃಢ, ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ
ಬಳಿಕ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಯಡಿಯೂರಪ್ಪ, ಕೊರೋನಾ ವೈರಸ್ ತಡೆಗೆ ಮತ್ತೊಂದು ವಾರ ಕರ್ನಾಟಕ ಬಂದ್ ಮುಂದುವರಿಯಲಿದೆ. ಅದು ಮಾರ್ಚ್ 31ರವರೆಗೆ ಬಂದ್ ಮುಂದುವರಿಸಲು ಸರ್ಕಾರ ನಿರ್ಧರಿಸಿದ್ದು,ಈ ಹಿಂದಿನ ಮಾರ್ಗಸೂಚಿಗಳು ಮುಂದುವರಿಯಲಿವೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಸಚಿವ ಶ್ರೀರಾಮುಲು, ಬಸವರಾಜ್ ಬೊಮ್ಮಾಯಿ, ಡಾ.ಕೆ. ಸುಧಾಕರ್, ಡಿಸಿಎಂ ಅಶ್ವಥ್ ನಾರಾಯಣ ಸೇರಿದಂತೆ ಐವರು ಸಚಿವರ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ನಿರ್ಧರಿಸಲಾಗಿದೆ. ಹಾಗೂ ಸಭೆ, ಸಮಾರಂಭಗಳ ಬಂದ್‌ಗೆ ತೀರ್ಮಾನಿಸಲಾಗಿದ್ದು, 200ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಎಂದು ಸಿಎಂ ತಿಳಿಸಿದರು.
ಈಗಾಗಲೇ ಮಾಲ್. ಚಿತ್ರಮಂದಿರಗಳು,ಮದುವೆ ಸಮಾರಂಭ, ಕ್ಲಬ್, ಹಾಗೂ ಶಾಲೆ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಸೇರಿದಂತೆ ಈ ಹಿಂದೆ ನೀಡಲಾಗಿದ್ದ ಮಾರ್ಗಸೂಚಿಗಳು ಮುಂದುವರಿಯಲಿವೆ.