ಬೆಂಗಳೂರು, (ಮೇ.12): ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ ಎದುರಾಗಿದೆ. 18 ವರ್ಷದಿಂದ 44ರ ವಯಸ್ಸಿನವರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಹೌದು....ಇಂದು (ಬುಧವಾರ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.

ರಾಜ್ಯಾದ್ಯಂತ ಲಸಿಕೆಗಾಗಿ ಹಾಹಾಕಾರ, ಆರೋಗ್ಯ ಕೇಂದ್ರಗಳ ಮುಂದೆ ಕ್ಯೂ.!

ಮಹಾರಾಷ್ಟ್ರ ಮಾದರಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಮಾಡುವ ಉದ್ದೇಶದಿಂದ ಪ್ರಸ್ತುತ ಮೊದಲ ಲಸಿಕೆ ಪಡೆದವರಿಗೆ 2ನೇ ಡೋಸ್ ಪಡೆಯುವವರಿಗೆ ವ್ಯಾಕ್ಸಿನ್ ಮೀಸಲಿಡಲು ನಿರ್ಧರಿಸಲಾಗಿದೆ.

ಪ್ರಸ್ತುತ ಈಗಿನ ಸನ್ನಿವೇಶದಲ್ಲಿ ಈ ತಿಂಗಳ ಅಂತ್ಯಕ್ಕೂ ಕೊರೋನಾ ಲಸಿಕೆ ಬರುವುದು ಅನುಮಾನವಾಗಿದೆ. ಇದರಿಂದ ಕೇಂದ್ರದಿಂದ ಹಾಗೂ ಕಂಪನಿಯಿಂದ ಸಂಪೂರ್ಣವಾಗಿ ಲಸಿಕೆ ಬಂದ ಬಳಿಕವಷ್ಟೇ 18ರಿಂದ 44 ವರ್ಷದವರಿಗೆ ವ್ಯಾಕ್ಸಿನ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ವ್ಯಾಕ್ಸಿನ್ ಬರುವ ಸಾಧ್ಯತೆ ಇದ್ದು, ನಂತರ ಎಲ್ಲರಿಗೂ ನೀಡಲು ದಿನಾಂಕ ನಿಗದಿಪಡಿಸಲಾಗುವುದು. ಅಲ್ಲದೇ ವ್ಯಾಕ್ಸಿನ್ ಹಂಚಿಕೆ ಗೊಂದಲ ಆಗದೇ ಇರಲು ಮೊಬೈಲ್ App ತಯಾರಿಸಲು ಮುಂದಾಗಿದೆ.

 ಯಾವ ಹಂತದ ಡೋಸ್ ನೀಡಲಾಗಿದೆ. ಯಾರಿಗೆ ನೀಡಲಾಗಿದೆ. ಎಷ್ಟು ಸಂಗ್ರಹ ಇದೆ ಮುಂತಾದ ಎಲ್ಲಾ ಮಾಹಿತಿ ಆಯಪ್ ನಲ್ಲಿ ಇರಲಿದೆ.