ಬೆಂಗಳೂರು [ನ.29]:  ವಿಶೇಷ ಆರ್ಥಿಕ ವಲಯದ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವಾ (ಐಟಿಇಎಸ್‌) ಕಂಪನಿಗಳಿಗೆ ಕಳೆದ ಎರಡು ದಶಕಗಳಿಂದ ನೀಡಲಾಗುತ್ತಿರುವ 1946ರ ಕೈಗಾರಿಕಾ ಉದ್ಯೋಗ (ಸ್ಟ್ಯಾಂಡರ್ಡ್‌ ಆರ್ಡರ್ಸ್‌) ಕಾಯ್ದೆಯ ವಿನಾಯ್ತಿಯನ್ನು ರಾಜ್ಯ ಸರ್ಕಾರ ಇನ್ನೂ ಐದು ವರ್ಷಗಳಿಗೆ ವಿಸ್ತರಿಸಿದೆ.

ಕಾರ್ಮಿಕ ಇಲಾಖೆ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳಿಗೆ ನೀಡಲಾಗಿರುವ ಕೈಗಾರಿಕಾ ಉದ್ಯೋಗ ಕಾಯ್ದೆಯ ವಿನಾಯಿತಿ ಸೌಲಭ್ಯವನ್ನು ಕೆಲ ಷರತ್ತುಗಳನ್ನು ಅನ್ವಯಿಸಿ ಮುಂದಿನ ಐದು ವರ್ಷಗಳಿಗೆ ವಿಸ್ತರಿಸಿದೆ.

1964ರ ಕೈಗಾರಿಕಾ ಉದ್ಯೋಗ ಕಾಯ್ದೆಯು ಯಾವುದೇ ಕೈಗಾರಿಕಾ ಘಟಕದ ಉದ್ಯೋಗಿಗಳ ಅಥವಾ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲೆಂದು ಇರುವ ಮಹತ್ವದ ಕಾಯ್ದೆ. ಈ ಕಾಯ್ದೆ ಎಲ್ಲ ಕೈಗಾರಿಕೆಗಳಿಗೂ ಅನ್ವಯ ಆದರೂ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಐಟಿ ಮತ್ತು ಐಟಿಇಎಸ್‌ ಕಂಪನಿಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಇಪ್ಪತ್ತು ವರ್ಷಗಳಿಂದ ಈ ಕಾಯ್ದೆಯಿಂದ ಅವುಗಳಿಗೆ ವಿನಾಯ್ತಿ ನೀಡುತ್ತ ಬರಲಾಗಿದೆ.

ವಿನಾಯಿತಿಯಿಂದಾಗಿ ಆ ಕಂಪನಿಗಳು ಸರ್ಕಾರದ ಯಾವ ನೇಮಕಾತಿಯ ನಿಯಮವನ್ನು ಪಾಲಿಸದೇ ತಮ್ಮ ಮಾನದಂಡಗಳಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬಹುದು, ಉದ್ಯೋಗಿಗಳಿಗೆ ಸಂಬಳ ಇತ್ಯಾದಿ ಸವಲತ್ತನ್ನು ತಮ್ಮ ನಿಯಮಗಳ ಅಡಿಯಲ್ಲಿ ಕೊಡಬಹುದು. ಸ್ತ್ರೀಯರು ಸೇರಿದಂತೆ ಎಲ್ಲ ಉದ್ಯೋಗಿಗಳೂ ರಾತ್ರಿ ಪಾಳೆಯ ಮತ್ತು ರಜಾದಿನಗಳಲ್ಲಿ ಕೆಲಸ ಮಾಡಬೇಕು. ಎಲ್ಲಕ್ಕಿಂತ, ಯಾವ ಕಾರಣ, ಮುನ್ಸೂಚನೆ ನೀಡದೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಬಹುದು. ಇಲ್ಲಿ ಕಾರ್ಮಿಕ ಸಂಘಟನೆಗಳನ್ನು ಕಟ್ಟಲು ಅವಕಾಶವೇ ಇರುವುದಿಲ್ಲ. ಉಚ್ಚಾಟಿತ ಯಾವ ನೌಕರನೂ ಪ್ರತಿಭಟನೆ ನಡೆಸಲಾಗುವುದಿಲ್ಲ. ಒಟ್ಟಿನಲ್ಲಿ ಯಾವ ಕಾರ್ಮಿಕ ಕಾನೂನುಗಳೂ ಈ ಕಂಪನಿಗಳಿಗೆ ಅನ್ವಯವಾಗದು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಷರತ್ತುಗಳು:  ಕರ್ತವ್ಯದ ಸ್ಥಳದಲ್ಲಿ ಮಹಿಳಾ ನೌಕರರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013ರ ಪ್ರಕಾರ ಕಂಪನಿಯಲ್ಲಿ ಆಂತರಿಕ ದೂರು ದೂರು ಸಮಿತಿ ರಚಿಸಬೇಕು. ಕಾರ್ಮಿಕರ ದೂರುಗಳು ಅಥವಾ ಕುಂದುಕೊರತೆಗಳ ಪರಿಹಾರಕ್ಕೆ ಕುಂದುಕೊರತೆ ಪರಿಹಾರ ಸಮಿತಿ ರಚಿಸಬೇಕು. ಈ ಸಮಿತಿ ಉದ್ಯೋಗದಾತರ ಪರವಾಗಿ ಹಾಗೂ ಕಾರ್ಮಿಕರ ಪರವಾಗಿ ಸಮಾನ ಸಂಖ್ಯೆಯಲ್ಲಿ ಸದಸ್ಯರನ್ನು ಒಳಗೊಂಡಿರಬೇಕು. ಕಾರ್ಮಿಕರ ಎಲ್ಲ ರೀತಿಯ ದೂರುಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಈ ಸಮಿತಿ ಪೂರ್ಣ ಅಧಿಕಾರ ಹೊಂದಿರಬೇಕು. ಯಾವುದೇ ಉದ್ಯೋಗಿಯ ಅಮಾನತು, ಕೆಲಸದಿಂದ ತೆಗೆಯುವುದು, ಉಚ್ಛಾಟಿಸುವುದು, ಹಿಂಬಡ್ತಿ ನೀಡುವಾಗ ಆಯಾ ಎಸ್‌ಇಜೆಡ್‌ ನ್ಯಾಯ ಅಭಿವೃದ್ಧಿ ಆಯುಕ್ತರ ಗಮನಕ್ಕೆ ತರಬೇಕು.