ಹಾಹಾಕಾರದ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವರದಿ, ಕರ್ನಾಟಕ ಸರ್ಕಾರದ ಸ್ಪಷ್ಟನೆ!
ಬೆಂಗಳೂರು ಸೇರಿದಂತೆ ರಾಜ್ಯದ ಬಹತೇಕ ಕಡೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಇದರ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ ಅನ್ನೋ ವರದಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಸ್ಪಷ್ಟನೆ ನೀಡಿದೆ. ಬೆಂಗಳೂರಿಗೆ ನೀರಿನ ಉದ್ದೇಶದಿಂದ ನೀರು ಹರಿಸಲಾಗಿದೆ ಎಂದಿದೆ.
ಬೆಂಗಳೂರು(ಮಾ.10) ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಕೊಳವೆ ಬಾವಿ, ನದಿ, ಕೆರೆಗಳು ಬತುತ್ತಿದೆ. ರಾಜ್ಯದ ಬಹುತೇಕ ಕಡೆ ನೀರಿನ ಕೊರತೆ ಎದುರಾಗಿದೆ. ಇದರ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರು ನೆಪವೊಡ್ಡಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವರದಿ ಕೋಲಾಹಲ ಸೃಷ್ಟಿಸಿದೆ. ಮಾರ್ಚ್ 9 ರಂದು ಕೆಆರ್‌ಎಸ್ ಜಲಾಶಯಿಂದ 4000 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ರಾಜ್ಯ ಸರ್ಕಾರ, ಬೆಂಗಳೂರು ಜಲಮಂಡಳಿಯ ಮನವಿಯಂತೆ ನೀರು ಹರಿಸಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಇತರ ಪಟ್ಟಣ ಹಾಗೂ ಗ್ರಾಮಗಳಿಗೆ ಪ್ರತಿ ದಿನ ಕೆಆರ್‌ಎಸ್ ಜಲಾಶಯದಿಂದ 1,000 ಕ್ಯೂಸೆಕ್ ನೀರಿನ ಅವಶ್ಯಕತೆ ಇದೆ. ಹೀಗಾಗಿ ನೀರು ಹರಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಕೆಆರ್‌ಎಸ್‌ನಿಂದ ಹರಿದು ಬರುವ ನೀರು ಮಂಡ್ಯದ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟಿನ ಮೂಲಕ ತೊರೆಕಾಡನಹಳ್ಳಿಯಲ್ಲಿರುವ ಜಲಸ್ಥಾವರ ತಲುಪಲಿದೆ. ಇಲ್ಲಿಂದ ಬೆಂಗಳೂರಿಗೆ ಸುಮಾರು 600 ಕ್ಯೂಸೆಕ್ ನೀರನ್ನು ಪ್ರತಿ ದಿನ ಸರಬರಾಜು ಮಾಡಲಾಗುತ್ತದೆ. ಆದರೆ ಶಿವಾ ಅಣೆಕಟ್ಟಿನ ನೀರಿನ ಮಟ್ಟ ಗಣನೀಯವಾಗಿ ಕುಸಿತ ಕಂಡಿದೆ. ಇದೀಗ 36 ಇಂಚಿನಷ್ಟು ಪಾತಾಳಕ್ಕಿಳಿದಿದೆ. ಇದರಿಂದ ಬೆಂಗಳೂರಿಗೆ ನೀರು ಸರಬರಾಜು ಸಮಸ್ಯೆಯಾಗುತ್ತಿದೆ ಎಂದು ಬೆಂಗಳೂರು ಜಲಮಮಂಡಳಿ ಮನವಿ ಮಾಡಿತ್ತು ಎಂದು ಸರ್ಕಾರ ಸ್ಪಷ್ಟನೆಯಲ್ಲಿ ಹೇಳಿದೆ.
ಬೆಂಗಳೂರು ನೆಪವೊಡ್ಡಿ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಕಾಂಗ್ರೆಸ್ ಸರ್ಕಾರ: ಮಂಡ್ಯದ ಡಾ.ಇಂದ್ರೇಶ್ ಆಕ್ಷೇಪ
ಮಾರ್ಚ್ 9 ರಂದು ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡಿದ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನೀರಿನ ಹರಿವು ಹೆಚ್ಚಿಸಲು ಮನವಿ ಮಾಡಿದ್ದಾರೆ. ಹೀಗಾಗಿ 4,780 ಕ್ಯೂಸೆಕ್ ನೀರನ್ನು ಕೆಆರ್‌ಎಸ್ ಜಲಾಶಯದಿಂದ ಹರಿಬಿಡಲಾಗಿದೆ. ಇದರಿಂದ ಶಿವಾ ಅಣೆಕಟ್ಟಿನ ನೀರಿನ ಪ್ರಮಾಣ 18 ಇಂಚಿನಷ್ಟು ಮೇಲಕ್ಕೆ ಬಂದಿದೆ. ಇದರಿಂದ ಬೆಂಗಳೂರಿಗೆ ನೀರು ಸರಬರಾಜು ಹೆಚ್ಚಿನ ಸಮಸ್ಯೆಯಾಗದೇ ತಲುಪಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಮಾರ್ಚ್ 10 ರಂದು ಕೆಆರ್‌ಎಸ್ ನೀರಿನ ಹರಿವನ್ನು 4780 ಕ್ಯೂಸೆಕ್‌ನಿಂದ 2,769 ಕ್ಯೂಸೆಕ್ ಇಳಿಕೆ ಮಾಡಲಾಗಿತ್ತು. ಬಳಿಕ 1008 ಕ್ಯೂಸೆಕ್‌ಗೆ ಇಳಿಕೆ ಮಾಡಲಾಗಿದೆ. ಸದ್ಯ ಎಂದಿನಿಂತ ಜಲಾಶಯದಿಂದ ನೀರು ಹರಿದು ಹೋಗುತ್ತಿದೆ. ಬೆಂಗಳೂರಿಗೆ ನೀರಿನ ವ್ಯತ್ಯಯ ತಪ್ಪಿಸಲು ನೀರು ಹರಿಸಲಾಗಿದೆ. ತಮಿಳುನಾಡಿಗೆ ನೀರು ಹರಿಸುವ ಉದ್ದೇಶದಿಂದ ನೀರು ಬಿಡಲಾಗಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಸ್ಪಷ್ಟನೆ ನೀಡಿದೆ.
ಬೆಂಗಳೂರಿನ ಕೈಗಾರಿಕೆಗಳಿಗೆ ಕಾವೇರಿ ನೀರಿನ ಬದಲು, ಕೆರೆಗಳ ನೀರು ಪೂರೈಕೆ; ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್
ನೀರು ಹರಿಸಿದ ಬಳಿಕ ಕಾವೇರಿ ನಿಗಮ ಅಧಿಕಾರಿಗಳು, ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರೀಶೀಲನೆ ನಡೆಸಿದ್ದಾರೆ. ಅಣೆಕಟ್ಟುಗಳಲ್ಲಿನ ನೀರಿನ ಮಟ್ಟವನ್ನು ಪರಿಶೀಲಿಸಿದ್ದಾರೆ.