ಬೆಂಗಳೂರು (ಸೆ.11):  ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಸಾವಿನ ಪ್ರಮಾಣ ಶೇ.1.62ರಷ್ಟಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲ ವಿಭಾಗದ ಸಿಬ್ಬಂದಿ ಹಗಲಿರುಳು ಶ್ರಮಿಸಿದ ಕಾರಣ ಇಂದು ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಬೋಧಕ-ಬೋಧಕೇತರ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾದ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿಗೊಳಿಸಿದ್ದರಿಂದ ಸುಮಾರು ಆರು ಸಾವಿರ ಸಿಬ್ಬಂದಿಗೆ ಪ್ರಯೋಜನವಾಗಿದೆ. ಜೊತೆಗೆ ಶೇ.40ರಷ್ಟುಶಿಷ್ಯವೇತನ ಹೆಚ್ಚಿಸುವುದು ಸೇರಿದಂತೆ ಕಳೆದ ಆರು ತಿಂಗಳಲ್ಲಿ ವೈದ್ಯ ಸಮೂಹಕ್ಕೆ ರಾಜ್ಯ ಸರ್ಕಾರ ಸಾಕಷ್ಟುಕೊಡುಗೆ ನೀಡಿದೆ ಎಂದರು.

ಅನ್‌ಲಾಕ್ ಬಳಿಕ ಎಚ್ಚರ ತಪ್ಪಿದ ಜನರು: ಕೊರೋನಾ 2ನೇ ಅಲೆ ಭೀತಿ ..

ವಿವಿ ಕುಲಪತಿ ಡಾ.ಎಸ್‌.ಸಚ್ಚಿದಾನಂದ ಮಾತನಾಡಿ, ಪ್ರತಿ ವಿಶ್ವವಿದ್ಯಾಲಯವೂ ಶಿಕ್ಷಕರನ್ನು ಗೌರವಿಸಿದಾಗ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದರು. ಮೌಲ್ಯಮಾಪನ ಕುಲಸಚಿವ ಡಾ.ನಿಂಗೇಗೌಡ ಸೇರಿದಂತೆ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.

11 ಶ್ರೇಷ್ಠ ಶಿಕ್ಷಕರಿಗೆ ಗೌರವ :  ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ 11 ಶಿಕ್ಷಕರನ್ನು ಸಚಿವ ಡಾ.ಕೆ. ಸುಧಾಕರ್‌ ಗೌರವಿಸಿದರು.

ಡಾ.ಟಿ.ಕೆ. ನಾಗಭೂಷಣ, ಡಾ.ಪಿ.ಎಂ. ಬಿರಾದರ್‌- ಇಬ್ಬರೂ ವೈದ್ಯಕೀಯ ವಿಭಾಗ, ಡಾ.ಎಸ್‌.ಎಸ್‌. ಹಿರೇಮಠ- ದಂತ ವೈದ್ಯಕೀಯ, ಪ್ರೊ.ಅಮಿತ್‌ ಕುಮಾರ್‌ ದಾಸ್‌- ಔಷಧ ವಿಜ್ಞಾನ, ಪ್ರೊ.ಜಾನ್‌ ಮದನ್‌ಲಾಲ್‌- ಶುಶ್ರೂಷೆ, ಡಾ.ಎಸ್‌.ಉಷಾ- ಹೋಮಿಯೋಪತಿ, ಡಾ.ವಿ. ರಾಜೇಂದ್ರ- ಭಾರತೀಯ ವೈದ್ಯ ಪದ್ಧತಿ, ಪ್ರೊ.ಎಲ್‌. ಗ್ಲಾಡ್‌ಸನ್‌ ಜೋಸ್‌- ಫಿಜಿಯೋಥೆರಪಿ, ಡಾ.ಎಸ್‌. ಜಿಯಾವುದ್ದೀನ್‌- ಯುನಾನಿ, ಡಾ.ಬಿ.ಟಿ. ಚಿದಾನಂದಮೂರ್ತಿ- ಪ್ರಕೃತಿ ಚಿಕಿತ್ಸೆ, ರಿತು ಘೋಷ್‌- ಅಲೈಡ್‌ ಹೆಲ್ತ್‌ ಸೈನ್ಸ್‌.