Asianet Suvarna News Asianet Suvarna News

ಅನ್‌ಲಾಕ್ ಬಳಿಕ ಎಚ್ಚರ ತಪ್ಪಿದ ಜನರು: ಕೊರೋನಾ 2ನೇ ಅಲೆ ಭೀತಿ

ಲಾಕ್‌ಡೌನ್‌ ಅನ್‌ಲಾಕ್‌ ಆದಾಗಿನಿಂದ ಸಾರ್ವಜನಿಕರು ಎಚ್ಚರಿಕೆ ತಪ್ಪುತ್ತಿದ್ದಾರೆ. ಸುರಕ್ಷತೆ ಮರೆತು ಸಹಜ ಜೀವನಕ್ಕೆ ಮರಳುತ್ತಿದ್ದು, ಇದು ಎರಡನೇ ಹಂತದ ಸೋಂಕಿನ ಅಲೆಗೆ (ಸೆಕೆಂಡ್‌ ವೇವ್‌) ಕಾರಣವಾಗಬಹುದು ಎನ್ನುವ ಭೀತಿ ಎದುರಾಗಿದೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ

Unlock Effect People negligence may pay the cost in upcoming days
Author
Bengaluru, First Published Sep 11, 2020, 8:21 AM IST

- ಶ್ರೀಕಾಂತ್‌.ಎನ್‌. ಗೌಡಸಂದ್ರ, ಕನ್ನಡಪ್ರಭ

ಬೆಂಗಳೂರು(ಸೆ.11): ರಾಜ್ಯದಲ್ಲಿ ಕೊರೋನಾ ಸೋಂಕು ಸೆಪ್ಟೆಂಬರ್‌ ಅಂತ್ಯಕ್ಕೆ ನಿಯಂತ್ರಣಕ್ಕೆ ಬರಲಿದೆ ಎಂಬ ಅಂದಾಜಿಗೆ ವಿರುದ್ಧವಾಗಿ ಮಹಾಮಾರಿ ಸೋಂಕು ಏರುಗತಿಯಲ್ಲೇ ಸಾಗುತ್ತಿದೆ. ಹೀಗಾಗಿ ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್‌ ಮೊದಲ ವಾರದವರೆಗೂ ನಿಯಂತ್ರಣಕ್ಕೆ ಬರುವ ಮುನ್ಸೂಚನೆ ಲಭ್ಯವಾಗುತ್ತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, ಲಾಕ್‌ಡೌನ್‌ ಅನ್‌ಲಾಕ್‌ ಆದಾಗಿನಿಂದ ಸಾರ್ವಜನಿಕರು ಎಚ್ಚರಿಕೆ ತಪ್ಪುತ್ತಿದ್ದಾರೆ. ಸುರಕ್ಷತೆ ಮರೆತು ಸಹಜ ಜೀವನಕ್ಕೆ ಮರಳುತ್ತಿದ್ದು, ಇದು ಎರಡನೇ ಹಂತದ ಸೋಂಕಿನ ಅಲೆಗೆ (ಸೆಕೆಂಡ್‌ ವೇವ್‌) ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಏಮ್ಸ್‌ (ಎಐಐಎಂಎಸ್‌) ನಿರ್ದೇಶಕರು ಹಾಗೂ ನ್ಯಾಷನಲ್‌ ಕೊರೋನಾ ಟಾಸ್ಕ್‌ಫೋರ್ಸ್‌ ಸದಸ್ಯರಾದ ರಂದೀಪ್‌ ಗುಲೇರಿಯಾ ಅವರು, ದೇಶದ ಹಲವು ಕಡೆ ಎರಡನೇ ಹಂತದ ಕೊರೋನಾ ಸೋಂಕಿನ ಅಲೆ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿರುವಂತೆ ದೇಶದ ಹಲವು ಪ್ರದೇಶಗಳಲ್ಲಿ ಈಗಾಗಲೇ ಜನರು ಸುರಕ್ಷತಾ ನಿಯಮಗಳ ಪಾಲನೆ ಮಾಡಿ ಶುಸ್ತಾಗಿದ್ದಾರೆ. ಈ ನಿರ್ಲಕ್ಷ್ಯ ಎರಡನೇ ಹಂತದ ಅಲೆಯನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಕೊರೋನಾ ಟಾಸ್ಕ್‌ಫೋರ್ಸ್‌ನ ಹಿರಿಯ ಸದಸ್ಯರೊಬ್ಬರು, ರಾಜ್ಯದಲ್ಲಿ ಜನರು ಸುರಕ್ಷತೆಯನ್ನು ಮರೆತಿದ್ದಾರೆ. ಕೊರೋನಾ ತನ್ನ ಉತ್ತುಂಗದಲ್ಲಿದ್ದರೂ ಅನ್‌ಲಾಕ್‌ ಮಾಡಿರುವ ಒಂದೇ ಕಾರಣಕ್ಕೆ ಜನರು ಕೊರೋನಾ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದರಿಂದಾಗಿಯೇ ಸೆಪ್ಟೆಂಬರ್‌ ಅಂತ್ಯಕ್ಕೆ ನಿಯಂತ್ರಣಕ್ಕೆ ಬರಬೇಕಿದ್ದ ಸೋಂಕು ಇನ್ನೂ ಏರುಗತಿಯಲ್ಲೇ ಸಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಎರಡನೇ ಹಂತದ ಸೋಂಕಿನ ಅಲೆಯನ್ನೂ ಸಹ ಕಾಣಬೇಕಾಗುತ್ತದೆ. ಹೀಗಾಗಿ ಜನರು ಎಚ್ಚರ ವಹಿಸಬೇಕು ಎಂದು ಹೇಳಿದರು.

ತಪ್ಪಿತು ತಜ್ಞರ ಲೆಕ್ಕಾಚಾರ:

ರಾಜ್ಯದಲ್ಲಿ ಮಾ.9ರಂದು ಮೊದಲ ಬಾರಿ ವರದಿಯಾದ ಕೊರೋನಾ ಸೋಂಕು ಜುಲೈ ತಿಂಗಳಿಂದ ತನ್ನ ಭೀಕರತೆ ಪ್ರದರ್ಶಿಸುತ್ತಿದೆ. ಜುಲೈ 1ರವರೆಗೆ 16,514 ಪ್ರಕರಣಗಳಿಷ್ಟಿದ್ದ ಸೋಂಕು ಜುಲೈ ಒಂದೇ ತಿಂಗಳಲ್ಲಿ 1,08,873 ಮಂದಿಗೆ ಹರಡಿತ್ತು. ಅಲ್ಲದೆ, 2,068 ಮಂದಿಯನ್ನು ಬಲಿ ಪಡೆದಿತ್ತು. ಆಗಸ್ಟ್‌ ತಿಂಗಳಲ್ಲಿ 2.18 ಲಕ್ಷ ಮಂದಿಗೆ ಸೋಂಕು ಉಂಟಾಗಿ ಬರೋಬ್ಬರಿ 3,388 ಮಂದಿ ಸಾವನ್ನಪ್ಪಿದ್ದರು. ಜುಲೈ ಹಾಗೂ ಆಗಸ್ಟ್‌ನಲ್ಲಿ ಸೋಂಕು ಪ್ರಮಾಣ ತಾರಕಕ್ಕೇರಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ಅಂತ್ಯಕ್ಕೆ ನಿಯಂತ್ರಣಕ್ಕೆ ಬರಲಿದೆ ಎಂಬ ಲೆಕ್ಕಾಚಾರದಲ್ಲಿ ತಜ್ಞರು ಇದ್ದರು.

6 ದೇಶಗಳಲ್ಲಿ ಕೊರೋನಾದ 2ನೇ ಅಲೆ, 10 ರಾಜ್ಯಗಳಲ್ಲೂ ಆತಂಕ..!

ಆದರೆ, ಸೆಪ್ಟೆಂಬರ್‌ 9 ಹಾಗೂ 10ರಂದು ಕೂಡ ಗರಿಷ್ಠ ಪ್ರಮಾಣದ ಸೋಂಕು ಪ್ರಕರಣಗಳೇ ವರದಿಯಾಗಿವೆ. ಜತೆಗೆ ಪಾಸಿಟಿವಿಟಿ ದರವೂ ಕಡಿಮೆಯಾಗುತ್ತಿಲ್ಲ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಬರುವ ಸಾಧ್ಯತೆಗಳು ಕ್ಷೀಣಿಸಿವೆ. ಇದಕ್ಕೆ ಕಾರಣ ತಿಳಿಯಲು ಇನ್ನಷ್ಟೇ ಅಧ್ಯಯನ ನಡೆಸಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಬಂದರೆ ಹೇಗೆ ತಿಳಿಯುತ್ತೆ?

ರಾಜ್ಯದಲ್ಲಿ ಸೋಂಕು ನಿಯಂತ್ರಣವಾಗಿದೆ ಎಂಬ ತೀರ್ಮಾನಕ್ಕೆ ಬರಲು ನಿತ್ಯ 1 ಲಕ್ಷ ಪರೀಕ್ಷೆಗಳು ನಡೆಯಬೇಕು ಹಾಗೂ ಪ್ರತಿ 100 ಪರೀಕ್ಷೆಗಳಲ್ಲಿ 5ಕ್ಕಿಂತ ಕಡಿಮೆ ಮಂದಿಗೆ ಕೊರೋನಾ ಸೋಂಕು ದೃಢಪಡಬೇಕು. ಹೀಗೆ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಬಂದರೆ ಮಾತ್ರ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಅರ್ಥ. ಆದರೆ ರಾಜ್ಯದಲ್ಲಿ ಪ್ರಸ್ತುತ 60-70 ಸಾವಿರ ಪರೀಕ್ಷೆ ನಡೆಯುತ್ತಿದೆ. ಜುಲೈನಲ್ಲಿ ಶೇ.9.18 ಇದ್ದ ಸೋಂಕು ಪಾಸಿಟಿವಿಟಿ ಪ್ರಮಾಣ ಆಗಸ್ಟ್‌ನಲ್ಲಿ ಶೇ.11.82ಕ್ಕೆ ಏರಿದೆ. ಸೆ.9ರಂದು ಸಹ 70,322 ಪರೀಕ್ಷೆ ನಡೆಸಿದ್ದರೆ 9540 ಮಂದಿಗೆ (ಶೇ.13.56) ಮಂದಿಗೆ ಸೋಂಕು ದೃಢಪಟ್ಟಿದೆ.
 

Follow Us:
Download App:
  • android
  • ios