ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಸಂಘರ್ಷ ತಲೆದೋರಿದೆ. ಕೇಂದ್ರ ಸರ್ಕಾರದ ನರೇಗಾ ಯೋಜನೆ ಬದಲಾವಣೆ ಕುರಿತಾದ ಟೀಕೆಗಳನ್ನು ಒಳಗೊಂಡ ಭಾಷಣವನ್ನು ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ. ಇದು ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನ ಆತಂಕವನ್ನು ಸೃಷ್ಟಿಸಿದೆ.

ಬೆಂಗಳೂರು (ಜ.21): ತಮಿಳುನಾಡಿನ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ರಾಜಭವನ ಮತ್ತು ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ನಾಳೆಯಿಂದ (ಜ. 22) ಆರಂಭವಾಗಲಿರುವ ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಂಘರ್ಷಕ್ಕೆ ಇದೇ ಕಾರಣ

ಕೇಂದ್ರ ಸರ್ಕಾರವು ಯುಪಿಎ ಕಾಲದ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ' (MGNREGA) ಹೆಸರನ್ನು ಬದಲಿಸಿ, 'ವಿಬಿ-ಜಿ ರಾಮ್ ಜಿ' (VB-G RAM G) ಕಾಯ್ದೆಯನ್ನು ಜಾರಿಗೆ ತಂದಿದೆ. ಇದನ್ನು ತೀವ್ರವಾಗಿ ವಿರೋಧಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರದ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಅಷ್ಟೇ ಅಲ್ಲದೆ, ಅಧಿವೇಶನದಲ್ಲಿ ರಾಜ್ಯಪಾಲರು ಓದಬೇಕಿರುವ ಭಾಷಣದ ಪ್ರತಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮುಜುಗುರ ತರುವಂತಹ ಅಂಶಗಳನ್ನು ಸೇರಿಸಲಾಗಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ರಾಜ್ಯಪಾಲರು ಭಾಷಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಂವಿಧಾನದ ನಿಯಮದಂತೆ ವರ್ಷದ ಮೊದಲ ಅಧಿವೇಶನವು ರಾಜ್ಯಪಾಲರ ಭಾಷಣದೊಂದಿಗೇ ಆರಂಭವಾಗಬೇಕು. ಒಂದು ವೇಳೆ ನಾಳೆ ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲರು ಅಧಿವೇಶನಕ್ಕೆ ಗೈರಾದರೆ, ರಾಜ್ಯದಲ್ಲಿ ಗಂಭೀರ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ.

ರಾಜ್ಯಪಾಲರ ಭಾಷಣದ ವಿಚಾರವಾಗಿ ಸರ್ಕಾರದ ವಾದವೇನು?

ಸರ್ಕಾರ ರಾಜ್ಯಪಾಲರ ಭಾಷಣ ತಯಾರಿ ಮಾಡಿ ಆಗಿದೆ.ಇಲ್ಲಿಯವರೆಗೂ ಭಾಷಣದ ಬದಲಾವಣೆ ಬಗ್ಗೆ ರಾಜ್ಯಪಾಲರಿಂದ ಅಧಿಕೃತ ಸೂಚನೆ ಬಂದಿಲ್ಲ. ಒಂದು ವೇಳೆ ರಾಜ್ಯಪಾಲರ ಭಾಷಣ ಬದಲಾವಣೆ ಮಾಡಬೇಕು ಅಂದರೆ ಕ್ಯಾಬಿನೆಟ್ ‌ನಲ್ಲೇ ಮಾಡಬೇಕಿದೆ. ಸದ್ಯಕ್ಕೆ ಸರ್ಕಾರದ ನಿಲುವು ಭಾಷಣ ಯಥಾವತ್ ಇರಲಿ ಅನ್ನೋದಾಗಿದೆ ಎಂದು ಗೊತ್ತಾಗಿದೆ.

ರಾಜ್ಯಪಾಲರ ಮುಂದೆ ಇರುವ ಆಯ್ಕೆ ಏನು..?

ಇನ್ನು ರಾಜ್ಯಪಾಲರ ಮುಂದೆ ಜಂಟಿ ಅಧಿವೇಶನದಲ್ಲಿ ಭಾಗಿಯಾಗುವುದು, ಜಂಟಿ ಅಧಿವೇಶನ ಉದ್ದೇಶಿಸಿ ಸರ್ಕಾರದ ಭಾಷಣ ಓದುವುದು ಅಥವಾ ಭಾಷಣ ಓದದೇ ನಿರಾಕರಿಸುವ ಆಯ್ಕೆ ಇದೆ. ಇದಲ್ಲದೆ, ಆಕ್ಷೇಪ ಇರುವ ಅಂಶಗಳನ್ನ ಓದದೇ ಉಳಿದ ಭಾಷಣ ಮಾಡಬಹುದಾಗಿದೆ.

ರಾಜ್ಯಪಾಲರ ಭೇಟಿ ಬಳಿಕ ಎಚ್‌ಕೆ ಪಾಟೀಲ್‌ ಹೇಳಿದ್ದೇನು?

ರಾಜ್ಯಪಾಲರ ಈ ಅನಿರೀಕ್ಷಿತ ನಿರ್ಧಾರದಿಂದ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವನ್ನು ರಾಜಭವನಕ್ಕೆ ಕರೆದುಕೊಂಡುಹೋಗಿದ್ದರು. ಸಂಜೆ 5:45ಕ್ಕೆ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ, ಭಾಷಣ ಮಾಡುವಂತೆ ಮನವೊಲಿಸಲು ಕಸರತ್ತು ನಡೆಸಿದೆ.

ಭೇಟಿಯ ಬಳಿಕ ಮಾತನಾಡಿದ ಎಚ್‌ಕೆ ಪಾಟೀಲ್‌, 'ನಾಳೆ ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂವಿಧಾನದ ಪ್ರಕಾರ ಸಚಿವ ಸಂಪುಟ ಸಭೆ ರಾಜ್ಯಪಾಲರ ಭಾಷಣವನ್ನು ಸಿದ್ದ ಮಾಡಬೇಕು. ಅದನ್ನೇ ರಾಜ್ಯಪಾಲರು ಭಾಷಣ ಮಾಡಬೇಕು. ಇದು ಒಂದು ಪದ್ಧತಿ. ಸಂವಿಧಾನದ ಪ್ರಕಾರ ನಾವು ಇತ್ತೀಚಿಗೆ ರಾಜ್ಯಕ್ಕೆ ಆಗಿರುವ ತೊಂದರೆಗಳ ಬಗ್ಗೆ ಭಾಷಣದಲ್ಲಿ ಸೇರಿಸಿದ್ದೇವೆ. ಈ ವಿಚಾರವನ್ನು 10, 12 ಪ್ಯಾರಾಗಳಲ್ಲಿ ಬರೆದಿದ್ದೇವೆ. ರಾಜ್ಯಪಾಲರಿಗೆ ಕೆಲವು ಅಂಶಗಳ ಬಗ್ಗೆ ರಿಸರ್ವೇಶನ್ ಇದೆ. ಕೆಲವು ಅಂಶಗಳನ್ನು ಕೈಬಿಡಬೇಕು ಅಂತ ರಾಜ್ಯಪಾಲರು ಕೇಳಿದ್ದಾರೆ. ಅವುಗಳನ್ನು ಕೈಬಿಡಲು ಏಕೆ ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ನರೇಗಾ ಯೋಜನೆ ಅಡಿ ಕೃಷಿ ಕಾರ್ಮಿಕರಿಗೆ ನೀಡಲಾಗುತ್ತಿದ್ದ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಅದರ ಬಗ್ಗೆ ನಾವು ದನಿಯೆತ್ತಬಾರದೇ?' ಎಂದು ಪ್ರಶ್ನೆ ಮಾಡಿದ್ದಾರೆ.

ನರೇಗಾ ಯೋಜನೆಯನ್ನು ಮರುಸ್ಥಾಪನೆ ಮಾಡಬೇಕು ಎಂದು ಕೇಂದ್ರಕ್ಕೆ ಆಗ್ರಹ ಮಾಡಿದ್ದೇವೆ. 11 ಪ್ಯಾರಾಗಳನ್ನು ಕೈ ಬಿಡಬೇಕು ಅಂತ ರಾಜ್ಯಪಾಲರು ಹೇಳಿದ್ದಾರೆ. ಇದರ ಬಗ್ಗೆ ಸಿಎಂ ಬಳಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಗೊಂದಲ ಇನ್ನೂ ಬಗೆ ಹರಿದಿಲ್ಲ ಎಂದು ಹೇಳಿದರು.

ಒಂದು ವೇಳೆ ರಾಜ್ಯಪಾಲರು ಒಪ್ಪದೇ ಇದ್ದರೆ ಸರ್ಕಾರದ ಮುಂದೆ ಇರುವ ಆಯ್ಕೆಗಳೇನು ಎಂಬ ಪ್ರಶ್ನೆಗೆ, ' ಸದ್ಯಕ್ಕೆ ಇನ್ನೂ ಅಂತಹ ಪ್ರಶ್ನೆ ಉದ್ಭವಿಸಿಲ್ಲ. ಅಂತಹ ಸಂದರ್ಭ ಬಂದಾಗ ನೋಡೋಣ. 176(1)ವಿಧಿ ಪ್ರಕಾರ, ರಾಜ್ಯಪಾಲರ ಭಾಷಣವನ್ನ ಸರ್ಕಾರ ಸಿದ್ದಮಾಡಬೇಕು. ಅದನ್ನ ರಾಜ್ಯಪಾಲರು ಓದಬೇಕು. ಇದು ಆರ್ಟಿಕಲ್ 171(1)ರ ಪ್ರಕಾರ, ಸಂವಿಧಾನದ ನಿರ್ದೇಶನ ಇದು . ಸಂವಿಧಾನ ಎಲ್ಲರಿಗೂ ಒಂದೇ ರಾಷ್ಟ್ರಪತಿ,ರಾಜ್ಯಪಾಲರಿಗೆ,ರಾಜ್ಯ ಸರ್ಕಾರಕ್ಕೆ, ಎಲ್ಲರಿಗೂ ಒಂದೇ' ಎಂದು ಹೇಳಿದರು.