ಪೊಲೀಸರನ್ನು ನೇಮಕ ಮಾಡಲಾಗದೇ ಠಾಣೆಗೆ ಬೀಗ ಜಡಿದ ಸರ್ಕಾರ!
ಮೈಸೂರು ಜಿಲ್ಲೆಯ ಟಿ. ನರಸೀಪುರ ಕ್ಷೇತ್ರದ ಮೂಗೂರಿನ ಪೊಲೀಸ್ ಉಪ ಠಾಣೆಯು ಸಿಬ್ಬಂದಿ ಕೊರತೆಯಿಂದಾಗಿ ಬೀಗ ಜಡಿಯಲ್ಪಟ್ಟಿದೆ. 40 ವರ್ಷಗಳ ಹಿಂದೆ ಸ್ಥಾಪಿತವಾದ ಈ ಠಾಣೆಯಲ್ಲಿ ಪ್ರಸ್ತುತ ಕೇವಲ ಇಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಬೇರೆಡೆಗೆ ನಿಯೋಜಿಸಿರುವುದರಿಂದ ಠಾಣೆಗೆ ಬೀಗ ಜಡಿಯಲಾಗಿದೆ.
ಮೈಸೂರು (ಡಿ.16): ರಾಜ್ಯ ಸರ್ಕಾರದಿಂದ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಸೂಕ್ತ ಸಿಬ್ಬಂದಿಯನ್ನು ನೇಮಕ ಮಾಡಲಾಗದೇ ಲಕ್ಷಾಂತರ ಶಾಲೆಗಳನ್ನು ಮುಚ್ಚಿದೆ. ಇದೀಗ ಪೊಲೀಸ್ ಠಾಣೆಗಳಿಗೂ ಸೂಕ್ತ ಸಿಬ್ಬಂದಿ ನೇಮಕ ಮಾಡಲಾಗದೇ ಮೈಸೂರಿನ ಉಪ ಠಾಣೆಯೊಂದಕ್ಕೆ ಬೀಗ ಜಡಿದು ಕೈ ತೊಳೆದುಕೊಂಡಿದೆ.
ಹೌದು, ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಅವರ ತವರು ಕ್ಷೇತ್ರದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯಿಂದಾಗಿ ಪೊಲೀಸ್ ಉಪ ಠಾಣೆಗೆ ಬೀಗ ಜಡಿದು ಕೈಬಿಟ್ಟಿರುವ ಘಟನೆ ನಡೆದಿದೆ. ಮೈಸೂರಿನ ಈ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಪೊಲೀಸ್ ಉಪ ಠಾಣೆಯನ್ನು ತೆರೆಯಲಾಗಿತ್ತು. ಆದರೆ, ಇದೀಗ ಸಿಬ್ಬಂದಿ ಕೊರತೆಯಿಂದಾಗಿ ಪೊಲೀಸ್ ಉಪ ಠಾಣೆಗೆ ಬೀಗ ಜಡಿಯಲಾಗಿದೆ. ಇಲ್ಲಿಗೆ ಪೊಲೀಸರನ್ನು ನಿಯೋಜನೆ ಮಾಡದೇ ಕೈತೊಳೆದುಕೊಂಡಿದ್ದು, ಇಲ್ಲಿನ ಸ್ಥಳೀಯ ಜನರು ನ್ಯಾಯಕ್ಕಾಗಿ ದೂರದ ಪ್ರದೇಶಕ್ಕೆ ಅಲೆದಾಡುವಂತಾಗಿದೆ.
ಸಚಿವ ಎಚ್ ಸಿ ಮಹದೇವಪ್ಪ ಪ್ರತಿನಿಧಿಸಿರುವ ಟಿ ನರಸೀಪುರ ಕ್ಷೇತ್ರದ ಮೂಗೂರಿನ ಠಾಣೆಯಲ್ಲಿ ಈ ಘಟನೆ ನಡೆದಿದೆ. ಶ್ರೀ ಮಲೆ ಮಹದೇಶ್ವರ ಬೆಟ್ಟ, ಕೊಳ್ಳೇಗಾಲಕ್ಕೆ ತೆರಳುವ ಹೆದ್ದಾರಿಯಲ್ಲಿ ಮೂಗೂರು ಇದೆ. ಇಲ್ಲಿ ಮೂಗೂರು ತಿಬ್ಬಾದೇವಿ ದೇವಾಲಯವಿದ್ದು, ಇದೊಂದು ಪವಿತ್ರ ಯಾತ್ರಾ ಸ್ಥಳವು ಆಗಿದೆ. ಜೊತೆಗೆ, ಮೂಗೂರು ದೊಡ್ಡ ಹೋಬಳಿ ಕೇಂದ್ರವೂ ಆಗಿರುತ್ತದೆ. ಇದೆಲ್ಲವನ್ನು ಮನಗಂಡು ಕಳೆದ 40 ವರ್ಷಗಳ ಹಿಂದೆಯೇ ಉಪ ಠಾಣೆ ತೆರೆಯಲಾಗಿದೆ. ಇಲ್ಲಿನ ಜನಸಂಖ್ಯೆ ಹಾಗೂ ಹೆದ್ದಾರಿಯಲ್ಲಿ ನಡೆಯುವ ಎಲ್ಲ ಅಪಘಾತ ಪ್ರಕರಣ ಸೇರಿದಂತೆ ಇತರೆ ಕಾರಣಗಳಿಂದ ಇಲ್ಲಿ ಪೊಲೀಸ್ ಠಾಣೆಯನ್ನೇ ತೆರೆಯಬೇಕಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ: ಬಿ.ವೈ.ವಿಜಯೇಂದ್ರ
ಆದರೆ, ಇಲ್ಲಿಗೆ ಹೊಸ ಪೊಲೀಸ್ ಠಾಣೆ ಇರಲಿ, 40 ವರ್ಷಗಳ ಹಿಂದೆಯೇ ಸ್ಥಾಪಿಸಲಾಗಿದ್ದ ಉಪ ಠಾಣೆಗೆ ಸಿಬ್ಬಂದಿ ನೇಮಕ ಮಾಡಲಾಗದೇ ಸಿಬ್ಬಂದಿ ಕೊರತೆಯಿಂದ ಠಾಣೆಗೆ ಬೀಗ ಜಡಿಯಲಾಗಿದೆ. ಪ್ರಸ್ತುತ ಒಬ್ಬ ಮುಖ್ಯ ಪೇದೆ ಹಾಗೂ ಒಬ್ಬ ಪೇದೆ ಮಾತ್ರ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ. ಆದರೆ, ಈ ಇಬ್ಬರೂ ಸಿಬ್ಬಂದಿಯನ್ನು ಬೇರೆಡೆಗೆ ಬಂದೋಬಸ್ತ್ ಕೆಲಸಕ್ಕೆ ನಿಯೋಜನೆ ಮಾಡಿರುವ ಹಿನ್ನಲೆಯಲ್ಲಿ ಮೂಗೂರು ಪೊಲೀಸ್ ಉಪ ಠಾಣೆಗೆ ಬೀಗ ಜಡಿಯಲಾಗಿದೆ.
ಪ್ರಸಿದ್ಧ ದೇವಾಲಯಗಳಿರುವ ಮೂಗೂರಿಗೆ ಪ್ರತಿನಿತ್ಯ ವಿವಿಧ ಕಡೆಯಿಂದ ನೂರಾರು ಭಕ್ತರು ಆಗಮಿಸುತ್ತಾರೆ. ಅಲ್ಲದ ಹೆದ್ದಾರಿಯೂ ಹಾದು ಹೋಗಿದ್ದು ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂಬುದು ಅಲ್ಲಿನ ನಾಗರೀಕರ ಪ್ರಶ್ನೆಯಾಗಿದೆ. ತಕ್ಷಣ ಪೊಲೀಸ್ ಉಪಠಾಣೆಗೆ ಅವಶ್ಯಕತೆಗೆ ತಕ್ಕಷ್ಟು ಸಿಬ್ಬಂದಿ ನೇಮಕ ಮಾಡಿ ಕಾನೂನು ಸುವ್ಯವಸ್ಥೆಗೆ ಮುಂದಾಗಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಇದನ್ನೂ ಓದಿ: ಖಾಸಗಿ ಫೋಟೋ ಇಟ್ಕೊಂಡು ಆಡಿಸ್ತಿದ್ದ, ಪೊಲೀಸ್ ಠಾಣೆಗೆ ಆಕೆ ಬಂದಾಗ... ಅಂದಿನ ಘಟನೆ ವಿವರಿಸಿದ ಡಿವೈಎಸ್ಪಿ ರಾಜೇಶ್